ವಿಶ್ವದಾದ್ಯಂತ ಹರಡಿರುವ ಸಾಂಕ್ರಾಮಿಕ, 1935ರ ಅಮೆರಿಕದ ಆರ್ಥಿಕ ಹಿಂಜರಿತದ ನಂತರ ಜಗತ್ತು ಕಂಡಿರುವ ಅತಿಕೆಟ್ಟ ಆರ್ಥಿಕ ಕುಸಿತ, ಬಿಸಿಯಾಗುತ್ತಿರುವ ಭೂಮಿಯ ವಾತಾವರಣ– ಇವುಗಳ ಜೊತೆಯಲ್ಲೇ ಹಸಿವಿನಿಂದ ನರಳುತ್ತಿರುವವರ ಪ್ರಮಾಣದಲ್ಲಿ ಹೆಚ್ಚಳ, ನಿರಾಶ್ರಿತರ ಸಂಖ್ಯೆಯಲ್ಲಿ ಏರಿಕೆ, ಅನ್ಯದೇಶಗಳ ಜನರ ವಿರುದ್ಧ ಕೆಂಡಕಾರುವ ಬಲಿಷ್ಠ ನಾಯಕರ ಭಾಷಣಗಳು, ಅಮೆರಿಕ– ಚೀನಾ ನಡುವೆ ಶುರುವಾಗಿರುವ ಹೊಸ ಶೀತಲ ಸಮರ...
ವಿಶ್ವಸಂಸ್ಥೆ ಸ್ಥಾಪನೆಯಾಗಿ 75 ವರ್ಷಗಳು ಸಂದಿವೆ. ಆದರೆ, ವಿಶ್ವ ಈಗ ಎದುರಿಸುತ್ತಿರುವ ಇಂತಹ ಸವಾಲುಗಳ ಈ ಸಂದರ್ಭದಲ್ಲಿ 75ರ ‘ಸಂಭ್ರಮ’ ಎಂಬ ಪದ ಬಳಕೆ ಸರಿಯಾಗಲಿಕ್ಕಿಲ್ಲ. ಹಾಗಾಗಿ, 75 ವಸಂತಗಳ ಆಚರಣೆಯು ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ. ಸಾಂಕ್ರಾಮಿಕದ ಕಾರಣದಿಂದಾಗಿ ವಿಶ್ವಸಂಸ್ಥೆಯ ಈ ಬಾರಿಯ ಸಾಮಾನ್ಯ ಸಭೆ ವಾಸ್ತವೋಪಮವಾಗಿದೆ (virtual). ಈ ಹೊತ್ತಿನಲ್ಲಿ ವಿಶ್ವಸಂಸ್ಥೆಯು ತಾನೆಷ್ಟು ಪರಿಣಾಮಕಾರಿ, ತಾನೆಷ್ಟು ಪ್ರಸ್ತುತ ಎಂಬ ಪ್ರಶ್ನೆಗಳಿಗೆ ಮುಖಾಮುಖಿಯಾಗಿದೆ.
‘ವಿಶ್ವಸಂಸ್ಥೆಯು ಈಗ ಬಹಳ ದುರ್ಬಲವಾಗಿದೆ’ ಎನ್ನುತ್ತಾರೆ ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗದ ಹೈಕಮಿಷನರ್ ಮೇರಿ ರಾಬಿನ್ಸನ್. ವಿಶ್ವಸಂಸ್ಥೆಗೆ ಜನ್ಮ ನೀಡಿದಾಗ ಇದ್ದ ಉದ್ದೇಶ ಇನ್ನೊಂದು ಜಾಗತಿಕ ಯುದ್ಧವನ್ನು ತಡೆಯುವುದಾಗಿತ್ತು. ‘ಭವಿಷ್ಯದ ಶಾಂತಿಯ ವಿಚಾರವಾಗಿ ನಮಗಿರುವ ಅತಿದೊಡ್ಡ ಭರವಸೆ’ ಎಂದು ಎಲಿನಾರ್ ರೂಸ್‌ವೆಲ್ಟ್ ಅವರು ವಿಶ್ವಸಂಸ್ಥೆಯನ್ನು ಬಣ್ಣಿಸಿದ್ದರು. ಸಂಘಟನೆಗೆ ಏನೇ ಮಿತಿಗಳು ಇದ್ದರೂ ಅದು ಇನ್ನೊಂದು ಜಾಗತಿಕ ಯುದ್ಧವನ್ನು ತಡೆಯುವಲ್ಲಿ ಯಶಸ್ಸು ಕಂಡಿದೆ.
ಸಂಘಟನೆಯ ಸಾಮಾನ್ಯ ಸಭೆಯನ್ನು ಕರೆಯುವ ಮೊದಲು ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಈ ವಿಚಾರವನ್ನೇ ಒತ್ತಿ ಹೇಳಿದ್ದರು. ವಿಶ್ವಸಂಸ್ಥೆಯ ಸನ್ನದಿನಲ್ಲಿ ಅಡಕವಾಗಿರುವ ಮೌಲ್ಯಗಳು ‘ಮೂರನೆಯ ವಿಶ್ವಯುದ್ಧ ಎನ್ನುವ ಪೀಡೆಯನ್ನು ತಡೆದಿವೆ’ ಎಂದು ಅವರು ಹೇಳಿದ್ದರು. ಹೀಗಿದ್ದರೂ ವಿಶ್ವಸಂಸ್ಥೆಯು ಹಿಂದೆಂದೂ ಕಾಣದಂತಹ ಬಗೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ.
ಮನುಕುಲವು ಸಮಸ್ಯೆಗೆ ಸಿಲುಕಿದಾಗ ಮುಂದಾಗಿ ನಿಂತು ನೆರವು ನೀಡುವುದು ವಿಶ್ವಸಂಸ್ಥೆ. ಸಂಘರ್ಷಕ್ಕೆ ತುತ್ತಾಗಿರುವ ಹತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಂಘಟನೆಯ ಶಾಂತಿಪಾಲನಾ ಪಡೆ ಕೆಲಸ ಮಾಡುತ್ತಿದೆ. ಆದರೆ, ಸಿರಿಯಾ, ಯೆಮನ್ ಮತ್ತು ಲಿಬಿಯಾದಲ್ಲಿನ ದೀರ್ಘಕಾಲದ ಸಮರ ಕೊನೆಗೊಳಿಸಲು ವಿಶ್ವಸಂಸ್ಥೆಗೆ ಸಾಧ್ಯವಾಗಿಲ್ಲ. ಇಸ್ರೇಲ್– ಪ್ಯಾಲೆಸ್ಟೀನ್ ಬಿಕ್ಕಟ್ಟು ವಿಶ್ವಸಂಸ್ಥೆ
ಯಷ್ಟೇ ಹಳೆಯದು. ಬಲಪ್ರಯೋಗದ ಕಾರಣದಿಂದ ತಮ್ಮ ನೆಲೆ ಕಳೆದುಕೊಂಡವರ ಸಂಖ್ಯೆಯು ಒಂದು ದಶಕದಲ್ಲಿ ಎರಡು ಪಟ್ಟಾಗಿದೆ, ತೀವ್ರ ಹಸಿವಿನ ದವಡೆಗೆ ಸಿಲುಕಿರುವವರ ಸಂಖ್ಯೆ ಈ ವರ್ಷದ ಅಂತ್ಯಕ್ಕೆ ದುಪ್ಪಟ್ಟಾಗುತ್ತದೆ ಎಂಬುದನ್ನು ವಿಶ್ವಸಂಸ್ಥೆಯ ಅಂಕಿ–ಅಂಶಗಳೇ ಹೇಳುತ್ತಿವೆ.
ಜಾಗತಿಕ ಮಟ್ಟದಲ್ಲಿ ಎಲ್ಲ ಕದನಗಳಿಗೂ ವಿರಾಮ ಘೋಷಿಸಿ, ಕೊರೊನಾ ವಿರುದ್ಧ ಹೋರಾಟ ನಡೆಸೋಣ ಎಂದು ಗುಟೆರಸ್ ಮಾಡಿದ ಮನವಿಯನ್ನು ಬಹುತೇಕರು ಕಿವಿಗೆ ಹಾಕಿಕೊಂಡಿಲ್ಲ. ಕೊರೊನಾ ಸೃಷ್ಟಿಸುವ ಸಮಸ್ಯೆಗಳ ತುರ್ತು ಸ್ಪಂದನೆಗೆ ₹ 73 ಸಾವಿರ ಕೋಟಿ ಮೊತ್ತದ ನಿಧಿಗೆ ದೇಣಿಗೆ ನೀಡುವಂತೆ ಅವರು ಮಾಡಿದ ಮನವಿಗೆ ಪ್ರತಿಯಾಗಿ, ನಿಧಿಯ ಉದ್ದೇಶಿತ ಮೊತ್ತದ ಶೇಕಡ 25ರಷ್ಟು ಹಣ ಮಾತ್ರ ಹರಿದುಬಂದಿದೆ. 75 ವರ್ಷಗಳ ಹಿಂದೆ 50 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದ ವಿಶ್ವಸಂಸ್ಥೆ ಇಂದು 193 ಸದಸ್ಯರನ್ನು ಹೊಂದಿದೆ. ಸಣ್ಣ ಹಾಗೂ ದೊಡ್ಡ ರಾಷ್ಟ್ರಗಳಿಗೆ ಅರ್ಥಪೂರ್ಣ ದನಿಯಾಗುವ ವೇದಿಕೆಯನ್ನು ಕಲ್ಪಿಸುವ ಉದ್ದೇಶವು ವಿಶ್ವಸಂಸ್ಥೆಯನ್ನು ಕಟ್ಟಿದ್ದರ ಹಿಂದೆ ಇತ್ತು.
ಆದರೆ, ವಿಶ್ವಸಂಸ್ಥೆಯ ಮೂಲ ರಚನೆ ಹೇಗಿದೆಯೆಂದರೆ, ಅದರ ಮುಖ್ಯ ಅಂಗವಾದ ಸಾಮಾನ್ಯಸಭೆಗೆ ತೀರಾ ಕಡಿಮೆ ಅಧಿಕಾರವಿದೆ. ಎರಡನೆಯ ವಿಶ್ವಯುದ್ಧದಲ್ಲಿ ಜಯ ಸಾಧಿಸಿದ ಬ್ರಿಟನ್, ಫ್ರಾನ್ಸ್, ರಷ್ಯಾ, ಚೀನಾ ಮತ್ತು ಅಮೆರಿಕ ದೇಶಗಳಿಗೆ ಅಲ್ಲಿ ಹೆಚ್ಚು ಅಧಿಕಾರವಿದೆ. 15 ಸದಸ್ಯರ ಭದ್ರತಾ ಸಮಿತಿಯ ಕಾಯಂ ಸದಸ್ಯರಾಗಿರುವ ಈ ರಾಷ್ಟ್ರಗಳಿಗೆ ವೀಟೊ ಅಧಿಕಾರವಿದೆ. ಆರ್ಥಿಕ ದಿಗ್ಬಂಧನಗಳನ್ನು ಹೇರುವ, ಮಿಲಿಟರಿ ಬಲವನ್ನು ಬಳಸಿಕೊಳ್ಳುವ ಅಧಿಕಾರ ಇರುವ ಸಮಿತಿ ಇದೊಂದೇ.
ಈ ರಚನೆಯಲ್ಲಿ ಬದಲಾವಣೆ ತರಲು ಕಾಯಂ ಸದಸ್ಯ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರಕ್ಕೂ ಮನಸ್ಸಿದ್ದಂತಿಲ್ಲ. ಇದರ ಪರಿಣಾಮವಾಗಿ, ಹಲವು ವಿಚಾರಗಳಲ್ಲಿ ಭದ್ರತಾ ಮಂಡಳಿಯಲ್ಲಿ ತೀರ್ಮಾನಗಳೇ ಹೊರಬರುವುದಿಲ್ಲ. ಯುದ್ಧ ಮತ್ತು ಯುದ್ಧವಿರಾಮಕ್ಕೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥಪಡಿಸುವಷ್ಟಕ್ಕೇ ವಿಶ್ವಸಂಸ್ಥೆಯ ಹೆಣಗಾಟಗಳು ಸೀಮಿತವಾಗಿಲ್ಲ. ವಿಶ್ವಸಂಸ್ಥೆಯ ‘ಸುಸ್ಥಿರ ಅಭಿವೃದ್ಧಿ ಗುರಿ’ಗಳಲ್ಲಿ ಬಡತನ, ಲಿಂಗ ತಾರತಮ್ಯ ಮತ್ತು ಅನಕ್ಷರತೆಯನ್ನು 2030ರೊಳಗೆ ನಿರ್ಮೂಲಗೊಳಿಸುವುದೂ ಸೇರಿವೆ. ಆದರೆ, ಈ ಗುರಿಗಳು ಈಡೇರುವ ಬಗ್ಗೆಯೇ ಪ್ರಶ್ನೆಗಳು ಮೂಡಿವೆ. ‘ಗುರಿಗಳು ಹಳಿತಪ್ಪಿವೆ’ ಎಂದು ಗ್ಲೋಬಲ್ ಪಾಲಿಸಿ ಫೋರಂನ ಅಧ್ಯಕ್ಷೆ ಬಾರ್ಬರಾ ಆ್ಯಡಮ್ಸ್ ಜುಲೈನಲ್ಲೇ ಹೇಳಿದ್ದರು.
ಸಮಸ್ಯೆಗಳನ್ನು ಎಲ್ಲರೂ ಒಟ್ಟಾಗಿ ಕುಳಿತು ಬಗೆಹರಿಸಿಕೊಳ್ಳಬೇಕು ಎಂಬ ತತ್ವವು, ವಿಶ್ವಸಂಸ್ಥೆಯ ಸನ್ನದಿನಲ್ಲೇ ಅಡಕವಾಗಿರುವ ‘ರಾಷ್ಟ್ರದ ಸಾರ್ವಭೌಮತ್ವ ಮತ್ತು ಇನ್ನೊಂದು ದೇಶದ ಆಂತರಿಕ ವಿಚಾರದಲ್ಲಿ ತಲೆಹಾಕದಿರುವುದು’ ಎಂಬ ತತ್ವದ ಜೊತೆ ಹೆಚ್ಚು ಮುಖಾಮುಖಿಯಾಗುತ್ತಿದೆ ಎನ್ನುವ ಮಾತನ್ನು ಸಂಘಟನೆಯ ಮಾಜಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರ ಪರಿಣಾಮವಾಗಿ, ಬೇರೆ ಬೇರೆ ಕಡೆಗಳಲ್ಲಿ ಸಮಸ್ಯೆಯಲ್ಲಿ ಇರುವವರ ನೆರವಿಗೆ ಧಾವಿಸಲು ವಿಳಂಬ ಆಗುತ್ತಿದೆ ಅಥವಾ ಕೆಲವು ಕಡೆಗಳಲ್ಲಿ ನೆರವು ನೀಡಲು ಸಾಧ್ಯವೇ ಆಗುತ್ತಿಲ್ಲ.
ಸರ್ವಾಧಿಕಾರಿ ಮನಸ್ಸಿನ ನಾಯಕರು ಜಗತ್ತಿನ ಹಲವೆಡೆ ಪ್ರವರ್ಧಮಾನಕ್ಕೆ ಬಂದಿರುವುದು ಕೂಡ ಹೊಸ ಸವಾಲುಗಳನ್ನು ತಂದಿತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆಯನ್ನು ಮತ್ತೆಮತ್ತೆ ಟೀಕಿಸುತ್ತಲೇ ಇರುತ್ತಾರೆ. ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನರೊ ಅವರು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯನ್ನು ‘ಕಮ್ಯುನಿಸ್ಟರ ಸಭೆ’ ಎಂದು ಕರೆದಿದ್ದಾರೆ. ಹಂಗರಿಯ ಪ್ರಧಾನಿ ವಿಕ್ಟರ್ ಒರ್ಬಾನ್ ಅವರು ನಿರಾಶ್ರಿತರನ್ನು ರಕ್ಷಿಸುವ ಬಗ್ಗೆ ವಿಶ್ವಸಂಸ್ಥೆ ರೂಪಿಸಿದ ನೀತಿಯನ್ನು ವಿರೋಧಿಸಿದ್ದಾರೆ.
ಟ್ರಂಪ್ ಅವರ ‘ಅಮೆರಿಕ ಮೊದಲು’ ನೀತಿಯ ಅಡಿ, ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆದಿದೆ. ವಿಶ್ವಸಂಸ್ಥೆಯ ಅಂಗಸಂಸ್ಥೆಗಳಿಗೆ ನೀಡುವ ಅನುದಾನವನ್ನು ಟ್ರಂಪ್ ನಿಲ್ಲಿಸಿದ್ದಾರೆ ಅಥವಾ ಕಡಿಮೆ ಮಾಡಿದ್ದಾರೆ. ಅಮೆರಿಕವು ಆಕ್ರೋಶ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲಿ, ಚೀನಾವು ವಿಶ್ವಸಂಸ್ಥೆಯ ‘ಆರ್ಥಿಕ ಮತ್ತು ಸಾಮಾಜಿಕ ಮಂಡಳಿ’, ‘ಅಂತರರಾಷ್ಟ್ರೀಯ ದೂರಸಂವಹನ ಒಕ್ಕೂಟ’ ಮತ್ತು ‘ಮಾನವ ಹಕ್ಕುಗಳ ಮಂಡಳಿ’ಯಂತಹ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದೆ.
‘ಪೀಪಲ್ಸ್ ರಿಪಬ್ಲಿಕ್ ಆಫ್ ದಿ ಯುನೈಟೆಡ್ ನೇಷನ್ಸ್’ ಹೆಸರಿನ 2019ರ ಅಧ್ಯಯನವೊಂದು, ವಿಶ್ವಸಂಸ್ಥೆಯ ವಿಚಾರವಾಗಿ ಚೀನಾ ಇಡುತ್ತಿರುವ ಹೆಜ್ಜೆಗಳು ಇಂತಹ ಸಂಸ್ಥೆಗಳ ರಚನೆಯನ್ನು ಪುನರ್‌ರೂಪಿಸುವುದರ ಭಾಗ ಎಂದು ಹೇಳಿದೆ. ಪ್ರಜಾತಂತ್ರ, ಮಾನವ ಹಕ್ಕುಗಳ ಬಗ್ಗೆ ಪಾಶ್ಚಿಮಾತ್ಯ ಪರಿಕಲ್ಪನೆಗಳಿಂದ ಇಂತಹ ಸಂಸ್ಥೆಗಳನ್ನು ದೂರ ಒಯ್ಯುವ ಉದ್ದೇಶವೂ ಇದರ ಹಿಂದೆ ಇದೆ ಎಂದು ಅಧ್ಯಯನ ಹೇಳಿದೆ.
ತಮ್ಮನ್ನು ತಾವೇ ಪ್ರತ್ಯೇಕ ಮಾಡಿಕೊಳ್ಳುವ ಟ್ರಂಪ್ ಅವರ ವರ್ತನೆಯು ವಿಶ್ವಸಂಸ್ಥೆಯಲ್ಲಿ ಅಮೆರಿಕ ಹೊಂದಿರುವ ಪ್ರಭಾವದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತಿದೆ ಎಂದು ಕೆಲವು ಅಧಿಕಾರಿಗಳು ಹೇಳುತ್ತಾರೆ. ಇದರಿಂದ ಚೀನಾಕ್ಕೆ ಹೆಚ್ಚು ಧೈರ್ಯ ಬಂದಂತಾಗಿದ್ದು, ವಿವಾದಿತ ದಕ್ಷಿಣ ಚೀನಾ ಸಮುದ್ರದ ಮೇಲಿನ ಹಕ್ಕನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದೆ, ಹಾಂಗ್‌ಕಾಂಗ್‌ನಲ್ಲಿ ಭಿನ್ನ ದನಿಗಳನ್ನು ಹತ್ತಿಕ್ಕುತ್ತಿದೆ, ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಿಗೆ ದೊಡ್ಡ ಮೊತ್ತವನ್ನು ಸಾಲವಾಗಿ ನೀಡುತ್ತಿದೆ.
ದಿ ನ್ಯೂಯಾರ್ಕ್ ಟೈಮ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.