ADVERTISEMENT

ವಿಶ್ಲೇಷಣೆ: ಉನ್ನಾವೊ: ನ್ಯಾಯಕ್ಕೇ ಅಗ್ನಿಪರೀಕ್ಷೆ!

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 22:30 IST
Last Updated 25 ಡಿಸೆಂಬರ್ 2025, 22:30 IST
_
_   

ಉತ್ತರ ಪ್ರದೇಶದ ಉನ್ನಾವೊದಲ್ಲಿ ಅಪ್ರಾಪ್ತ ವಯಸ್ಸಿನ ಬಾಲೆಯ ಮೇಲೆ ಅತ್ಯಾಚಾರ ಎಸಗಿದ್ದ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನ ಜೀವಾವಧಿ ಶಿಕ್ಷೆಯನ್ನು, ದೆಹಲಿಯ ಹೈಕೋರ್ಟ್ ಅಮಾನತುಗೊಳಿಸಿದೆ; ಜಾಮೀನನ್ನೂ ಕರುಣಿಸಿದೆ. ಈ ವಿದ್ಯಮಾನ ನ್ಯಾಯದ ಹಾದಿ ಎಷ್ಟು ಕಠಿಣ ಎನ್ನುವುದನ್ನು ದೇಶಕ್ಕೆ ಮತ್ತೊಮ್ಮೆ ಮನವರಿಕೆ ಮಾಡಿಕೊಡುವಂತಿದೆ. ಕ್ರಿಸ್‌ಮಸ್ ಮತ್ತು ಹೊಸವರ್ಷದ ಅಂಗವಾಗಿ ಸುಪ್ರೀಂ ಕೋರ್ಟ್‌ಗೆ ರಜೆ ಇರುವ ಸಮಯದಲ್ಲಿ ದೆಹಲಿ ಹೈಕೋರ್ಟ್‌ ನಿರ್ದೇಶನ ಬಂದಿದೆ.

ಜಾಮೀನು ಪಡೆದಿರುವ ವ್ಯಕ್ತಿ ಸಾಮಾನ್ಯ ಅತ್ಯಾಚಾರಿ ಅಲ್ಲ ಎಂಬುದನ್ನು ನಾವು ನೆನಪಿಡಬೇಕು. ಸಂತ್ರಸ್ತೆಯ ಮೇಲೆ, ಆಕೆಯ ಕುಟುಂಬದ ಮೇಲೆ ಸಾವಿನ ಸುರಿಮಳೆಗರೆದ ವ್ಯಕ್ತಿ ಈತ. ತಂದೆಯನ್ನು, ಕುಟುಂಬದ ಇಬ್ಬರು ಮಹಿಳೆಯರನ್ನು ಕಳೆದುಕೊಂಡಿರುವ ಸಂತ್ರಸ್ತೆ, ತನ್ನೆಲ್ಲ ಸಂಕಟಕ್ಕೆ ಕಾರಣವಾಗಿರುವ ವ್ಯಕ್ತಿಗೆ ಜಾಮೀನು ದೊರೆತಿರುವುದು ತನ್ನ ಕುಟುಂಬಕ್ಕೆ ಮರಣ ಮೃದಂಗವಾಗಿದೆ ಎಂದಿರುವುದು ಉತ್ಪ್ರೇಕ್ಷೆ ಅಲ್ಲ. ‘ಕುಲದೀಪ್‌ ಸಿಂಗ್ ಅತ್ಯಂತ ಪ್ರಭಾವಿ ವ್ಯಕ್ತಿ; ಪಕ್ಷ ಆತನನ್ನು ಹೊರಹಾಕಿರಬಹುದು. ಆದರೆ, ಆತನ ಬೆಂಬಲಿಗರು ಈಗಲೂ ಪಕ್ಷದಲ್ಲಿದ್ದಾರೆ’ ಎಂಬ ಸಂತ್ರಸ್ತೆಯ ಆರೋಪ ಗಂಭೀರವಾದುದು, ಆದರೆ ಬುನಾದಿರಹಿತವಲ್ಲ.

2017ರ ಜೂನ್ 4ರಂದು ಕೆಲಸ ಹುಡುಕಿಕೊಂಡು ಬಂದ ಹದಿನೇಳು ವರ್ಷದ ಯುವತಿಯ ಮೇಲೆ ಸೆಂಗರ್ ಅತ್ಯಾಚಾರ ಎಸಗಿದ್ದ. ಅದಾದ ಒಂದು ವಾರದ ನಂತರ ಆತನ ಸಹವರ್ತಿಗಳು ಆಕೆಯನ್ನು ಹೊತ್ತೊಯ್ದು ಬಂಧನದಲ್ಲಿಟ್ಟು, ಸಾಮೂಹಿಕ ಅತ್ಯಾಚಾರ ಮಾಡಿದ್ದನ್ನು ಆಕೆ ಅರುಹಿದ್ದಳು. ನ್ಯಾಯದ ಹಂಬಲದಿಂದ ಸಂತ್ರಸ್ತೆ ಮತ್ತು ಆಕೆಯ ಕುಟುಂಬ ದೂರು ನೀಡಲು ಮುಂದಾದಾಗ ಆಘಾತ ಎದುರಾಗಿತ್ತು. ಪೊಲೀಸರು ಆರೋಪಿಯ ಹೆಸರನ್ನು ದಾಖಲಿಸಲು ಸಿದ್ಧವಿರಲಿಲ್ಲ. 2018ರ ಏಪ್ರಿಲ್ 3ರಂದು, ಸಂತ್ರಸ್ತೆಯ ತಂದೆ ಮೇಲೆ ಆರೋಪಿಯ ಬೆಂಬಲಿಗರು ಹಲ್ಲೆ ನಡೆಸಿದರು. ಆಗಲೂ ಆರೋಪಿಯನ್ನು ವಶಕ್ಕೆ ಪಡೆಯುವ ಬದಲು, ಸಂತ್ರಸ್ತೆಯ ತಂದೆಯನ್ನೇ ಪೊಲೀಸರು ಬಂಧಿಸಿದರು. ತೀವ್ರವಾಗಿ ಗಾಯಗೊಂಡಿದ್ದ ನತದೃಷ್ಟ ಹೆಣ್ಣುಮಗಳ ತಂದೆ, ‘ಸೆಂಗರ್‌ನ ಸೋದರ ಅತುಲ್ ಸೆಂಗರ್ ತನ್ನ ಮೇಲೆ ಆಕ್ರಮಣ ಮಾಡಿದ್ದು’ ಎಂದು ಹೇಳಿದರೂ, ಆರೋಪಿಗಳ ಮೇಲೆ ಪೊಲೀಸರು ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ತಂದೆಯ ಗಾಯಗೊಂಡ ಸ್ಥಿತಿ ಹಾಗೂ ಬಂಧನ, ಆರೋಪಿಗಳ ಬೆದರಿಕೆ ಎಲ್ಲವನ್ನೂ ಸಹಿಸಲಾರದೆ, ನ್ಯಾಯದ ಯಾವ ಮಾರ್ಗವೂ ಕಾಣದೆ ಹತಾಶಳಾದ ಈ ಎಳೆಯ ಹುಡುಗಿ, ಏಪ್ರಿಲ್ 8ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮನೆಯ ಮುಂದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು. ಮರುದಿನ, ಏಪ್ರಿಲ್ 9ರಂದು ಬಂಧನದಲ್ಲಿದ್ದ ತಂದೆ ತೀರಿಕೊಂಡರು. ತಂದೆಯ ಸಾವು, ಸಂತ್ರಸ್ತೆ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದು ಜನತೆಯ ಆಕ್ರೋಶವನ್ನು ಬಡಿದೆಚ್ಚರಿಸಿದ ಮೇಲೆಯೇ ಸೆಂಗರ್ ಮೇಲೆ ಎಫ್ಐಆರ್ ದಾಖಲಾಯಿತು ಹಾಗೂ ಆತನ ಸೋದರ ಅತುಲ್‌ನ ಬಂಧನವಾಯಿತು. ಇಷ್ಟಾದರೂ, ಅತ್ಯಾಚಾರದ ಆರೋಪಿಯನ್ನು ತಕ್ಷಣ ಪಕ್ಷದಿಂದ ಹೊರಹಾಕಿರಲಿಲ್ಲ. ಜನತೆಯ ಆಕ್ರೋಶ ತಾರಕಸ್ಥಿತಿ ಮುಟ್ಟಿದಾಗ ಹಾಗೂ ವಿಪಕ್ಷಗಳು ಹುಯಿಲೆಬ್ಬಿಸಿದಾಗ ಬಿಜೆಪಿ ಸೆಂಗರ್‌ನನ್ನು ಹೊರಹಾಕಿತು.

ADVERTISEMENT

ಉನ್ನಾವೊದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ರವಾನಿಸಿದ್ದರಿಂದಾಗಿ, ಕೇಸು ಅಲಹಾಬಾದ್ ಹೈಕೋರ್ಟ್‌ಗೆ ಹೋಯಿತು. ಸಂತ್ರಸ್ತೆಯ ಚಿಕ್ಕಪ್ಪ ಆ ಕೇಸಿನಲ್ಲಿ ಮುಖ್ಯ ಸಾಕ್ಷಿಯಾಗಿದ್ದರು. ಅಣ್ಣನ ಸಾವಿನಿಂದ ನೊಂದಿದ್ದ ಆತ, ಸಂತ್ರಸ್ತೆಯಾದ ತನ್ನ ಅಣ್ಣನ ಮಗಳ ಜೊತೆ ನಿಂತು ಆರೋಪಿಯ ವಿರುದ್ಧ ದನಿ ಎತ್ತಿದ್ದೇ ತಪ್ಪಾಯಿತು. ಆತನನ್ನು 18 ವರ್ಷಗಳ ಹಿಂದಿನ ಯಾವುದೋ ಪ್ರಕರಣ ಕೆದಕಿ ಬಂಧಿಸಲಾಯಿತು. ಮತ್ತೆ ದೇಶದುದ್ದಕ್ಕೂ ಜನತೆಯ ಪ್ರತಿಭಟನೆ, ನ್ಯಾಯಕ್ಕಾಗಿ ಹಕ್ಕೊತ್ತಾಯ ವ್ಯಕ್ತವಾಯಿತು. ಆದರೂ ಆರೋಪಿಯ ದೌರ್ಜನ್ಯ ಕೊನೆಗೊಂಡಿರಲಿಲ್ಲ. ಆತ ಎಷ್ಟು ಪ್ರಭಾವಿ ಮನುಷ್ಯನೆಂದರೆ, ಸಂತ್ರಸ್ತೆಯ ಉಳಿದ ಕುಟುಂಬದ ಮೇಲೂ ಜೀವ ಬೆದರಿಕೆ ಹಾಕಿದ್ದ. ಪ್ರಾಣಭೀತಿಯಲ್ಲಿ ಸಂತ್ರಸ್ತೆ 2019ರ ಜುಲೈ 12ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಳು. ಆಕೆಯ ಭೀತಿ ನೈಜವಾಗಿತ್ತು. ಜುಲೈ 28ರಂದು ಸಂತ್ರಸ್ತೆ ಕುಳಿತಿದ್ದ ಕಾರನ್ನು ಒಂದು ಟ್ರಕ್ ಬಂದು ಗುದ್ದಿತು. ಆಕೆಯ ಕುಟುಂಬದ ಇಬ್ಬರು ಮಹಿಳೆಯರು ಸತ್ತರು. ಸಂತ್ರಸ್ತೆ ಮತ್ತು ಆಕೆಯ ವಕೀಲ ತೀವ್ರ ರೂಪದಲ್ಲಿ ಗಾಯಗೊಂಡರು. ಸಂತ್ರಸ್ತೆಗೆ ಭದ್ರತೆ ನೀಡಲು ನೇಮಿಸಿದ್ದ ಪೊಲೀಸ್ ಅಧಿಕಾರಿ ಜೊತೆಯಲ್ಲಿ ಇರಲಿಲ್ಲ ಎನ್ನುವುದು, ಸಂತ್ರಸ್ತೆಯನ್ನು, ಸಾಕ್ಷಿಗಳನ್ನು, ಕುಟುಂಬವನ್ನು ಹಾಗೂ ವಕೀಲರನ್ನು ಮುಗಿಸಿಬಿಡುವ ಪಿತೂರಿ ನಡೆದಿತ್ತೆಂಬ ಅನುಮಾನಕ್ಕೆ ಪುಷ್ಟಿ ಒದಗಿಸಿತ್ತು. ಕೆಲದಿನಗಳ ನಂತರ ಆಕೆಯ ವಕೀಲರೂ ಮೃತಪಟ್ಟರು.

ಇಷ್ಟೆಲ್ಲ ಆದಮೇಲೆ, ರಕ್ಷಣೆ ಬೇಡಿ ಪತ್ರ ಬರೆದ ಸಂತ್ರಸ್ತೆಯ ಅಳಲಿಗೆ ಸ್ಪಂದಿಸಿದ ಹಾಗೂ ಆಕೆಯ ಪರಿಸ್ಥಿತಿಗೆ ಮರುಗಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರು, ಉನ್ನಾವೊಗೆ ಸಂಬಂಧಿಸಿದ ಐದು ಪ್ರಕರಣಗಳನ್ನೂ ದೆಹಲಿಗೆ ವರ್ಗಾಯಿಸಲು ಆಗಸ್ಟ್ 1ರಂದು ಆದೇಶಿಸಿದರು. ದೆಹಲಿಯ ತೀಸ್ ಹಸಾರಿ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಸಂತ್ರಸ್ತೆಯನ್ನು ಲಖನೌ ಆಸ್ಪತ್ರೆಯಿಂದ ರಾಜಧಾನಿಯ ಎ.ಐ.ಐ.ಎಂ.ಎಸ್
ಆಸ್ಪತ್ರೆಗೆ ಕರೆತರಲಾಯಿತು. ಕಡೆಗೂ 2019ರ ಡಿಸೆಂಬರ್ 16ರಂದು, ಸೆಂಗರ್ ತಪ್ಪಿತಸ್ಥ ಎಂದು ನ್ಯಾಯಾಲಯ ನಿರ್ಣಯ ನೀಡಿತು. ಡಿಸೆಂಬರ್ 20ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿತು. ‘ಅಪರಾಧಿ ತನ್ನ ಉಳಿದ ಆಯುಷ್ಯವನ್ನು ಜೈಲಿನಲ್ಲಿ ಕಳೆಯುತ್ತಾನೆ. ಸಂತ್ರಸ್ತೆ ಇನ್ನು ಮುಂದಾದರೂ ಆತಂಕವಿಲ್ಲದ ಬದುಕಬಲ್ಲಳು’ ಎಂದು ಸಮಾಧಾನಗೊಂಡವರಿಗೆ, ಸ್ವಸ್ಥ ಸಮಾಜದ ನಿರೀಕ್ಷೆಯಲ್ಲಿದ್ದ ನಾಗರಿಕರಿಗೆ, ಈಗ ಮತ್ತೊಮ್ಮೆ ಆಘಾತ ಎದುರಾಗಿದೆ. ಸೆಂಗರ್‌ನ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ನೀಡಲಾಗಿದೆ. 

‘ನಾನು ಸಾಯಲು ಯೋಚಿಸಿದೆ, ಆದರೆ ಸತ್ತರೆ ನ್ಯಾಯ ದೊರೆಯುವುದಿಲ್ಲ. ನನ್ನ ಮಕ್ಕಳನ್ನು ನೆನಪಿಸಿಕೊಂಡೆ. ನಾನು ಹೋರಾಡುತ್ತೇನೆ. ಆದರೆ ಹೀಗೆಲ್ಲ ಆಗುವುದೇಕೆ? ಅತ್ಯಾಚಾರಿಗೆ ಜಾಮೀನು ಕೊಟ್ಟರೆ, ನಾವು ಸುರಕ್ಷಿತವಾಗಿ ಇರುವುದಾದರೂ ಹೇಗೆ?’ ಎನ್ನುವ ಸಂತ್ರಸ್ತೆಯ ಪ್ರಶ್ನೆ ನಮ್ಮೆಲ್ಲರ ಪ್ರಶ್ನೆಯೂ ಆಗಬೇಕು. ನಮ್ಮ ಕಾನೂನು, ಪೊಲೀಸ್‌ ವ್ಯವಸ್ಥೆ ಅಪರಾಧಿಗಳಲ್ಲಿ ಹೆದರಿಕೆ ಹುಟ್ಟಿಸುವ ಬದಲು ಸಂತ್ರಸ್ತರಲ್ಲಿಯೇ ಭಯ ಹುಟ್ಟಿಸಿದರೆ ಹೇಗೆ? ಸಂತ್ರಸ್ತೆಯ ವಕೀಲರು, ‘ಸಿಬಿಐ ಮತ್ತು ಸರ್ಕಾರದ ಇಡೀ ವ್ಯವಸ್ಥೆಯೇ ಸಂತ್ರಸ್ತೆಯ ವಿರುದ್ಧ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಇದೇ ತಿಂಗಳು ಸಂತ್ರಸ್ತೆಯ ಪತಿ, ಭೀಕರ ಹಲ್ಲೆಯಲ್ಲಿ ತೀವ್ರ ಗಾಯಗೊಂಡಿದ್ದನ್ನೂ ತಿಳಿಸಿದ್ದಾರೆ.

ಅಂದಹಾಗೆ, ಕುಲದೀಪ್ ಸಿಂಗ್ ಸೆಂಗರ್ ಬಿಜೆಪಿಯಲ್ಲಿ ಶಾಸಕನಾಗುವ ಮೊದಲು ಕಾಂಗ್ರೆಸ್, ಬಿಎಸ್‌ಪಿ ಹಾಗೂ ಸಮಾಜವಾದಿ ಪಾರ್ಟಿಯಲ್ಲಿ ಇದ್ದಾತ. ಮೂರು ಬೇರೆ ಬೇರೆ ಪಕ್ಷಗಳನ್ನು ಪ್ರತಿನಿಧಿಸಿ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ವ್ಯಕ್ತಿಗೆ ರಾಜಕೀಯ ಅಧಿಕಾರದ ಜೊತೆಗೆ ಜಾತಿಯ ಬೆಂಬಲವೂ ಇದೆ.

‘ಯಾವ ದೇಶ ಮಹಿಳೆಗೆ ರಕ್ಷಣೆ ಒದಗಿಸುವಲ್ಲಿ ವಿಫಲವಾಗಿದೆಯೋ ಅಂತಹ ದೇಶ ನಾಗರಿಕ ದೇಶ ಅನ್ನಿಸಿಕೊಳ್ಳಲು ಅನರ್ಹ’ ಎಂದಿದ್ದರು ರಾಜ್ಯದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ.

ದೌರ್ಜನ್ಯ ವಿರೋಧಿಸಿ ಹೋರಾಟಕ್ಕೆ ಕುಳಿತ ಸಂತ್ರಸ್ತೆಯನ್ನು ಹಾಗೂ ಆಕೆಯ ತಾಯಿಯನ್ನು ಪೊಲೀಸರು ಎಳೆದೆಳೆದು ಹಾಕುವ ದೃಶ್ಯಗಳು ಆತಂಕ ಹುಟ್ಟಿಸುವಂತಿವೆ. ಅತ್ಯಾಚಾರಿಗೆ ಜಾಮೀನು ದೊರೆತಿರುವುದಷ್ಟೇ ಅಲ್ಲ, ಶಿಕ್ಷೆಯೂ ಅಮಾನತುಗೊಂಡಿದೆ. ಆದರೆ, ಸಂತ್ರಸ್ತೆಗೆ ಪ್ರತಿಭಟಿಸುವ ಹಕ್ಕೂ ಇಲ್ಲವೆ? ಇಷ್ಟು ಸಾಲದೆಂಬಂತೆ, ಉತ್ತರ ಪ್ರದೇಶದ ಸಚಿವ ಓ.ಪಿ. ರಾಜ್‌ಭರ್, ಉನ್ನಾವೊ ಒಂದು ಹಾಸ್ಯವೆಂಬಂತೆ ಅಣಕದಲ್ಲಿ ದೊಡ್ಡದಾಗಿ ನಗುತ್ತಾರೆ. ಇಂತಹ ಸಂವೇದನಾಹೀನ ವ್ಯಕ್ತಿಗಳು ಅಧಿಕಾರದಲ್ಲಿರುವುದೇ ಪ್ರಜಾಪ್ರಭುತ್ವ ವ್ಯವಸ್ಥೆ ಲಜ್ಜೆಯಿಂದ ತಲೆತಗ್ಗಿಸಲು ಕಾರಣವಾಗಬೇಕು.

ಇಡೀ ದೇಶವೇ ಎದ್ದುನಿಂತು ಪ್ರತಿಭಟಿಸಿದ ನಿರ್ಭಯಾ, ದಿಶಾ ಪ್ರಕರಣಗಳ ನಂತರವೂ, ಕಾನೂನಿನ ಸುಧಾರಣೆಗಳ ನಂತರವೂ, ಒಬ್ಬ ಹೆಣ್ಣುಮಗಳು ನ್ಯಾಯಕ್ಕಾಗಿ ಏಕಾಂಗಿಯಾಗಿ ಇಡೀ ವ್ಯವಸ್ಥೆಯ ವಿರುದ್ಧ ಹೋರಾಡಬೇಕಿದೆ. ಉತ್ತರಪ್ರದೇಶದ ಮಾಜಿ ಡಿಜಿಪಿ ವಿಕ್ರಮ್ ಸಿಂಗ್ ಅವರು, ‘ಈ ಮಟ್ಟದ ನ್ಯಾಯ ವೈಫಲ್ಯ ಹಿಂದೆಂದೂ ಕಂಡಿರಲಿಲ್ಲ’ ಎಂದಿದ್ದಾರೆ.

ತನ್ನ ವಕೀಲರು, ಇಬ್ಬರು ಚಿಕ್ಕಮ್ಮಂದಿರು ಮೃತರಾದ ಪ್ರಕರಣದಲ್ಲಿ ಸ್ವತಃ ಗಾಸಿಗೊಂಡು ಆರು ತಿಂಗಳು ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿದ್ದು ಹೊರಬಂದ ದಿಟ್ಟಮಹಿಳೆ, ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟಲು ಮುಂದಾಗಿದ್ದಾರೆ. ಆಕೆಯ ಹೋರಾಟದೊಡನೆ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ನಿಲ್ಲಬೇಕಿದೆ. ‘ಬೇಟಿ ಬಚಾವೋ’ ಬರೀ ಘೋಷಣೆಯಾಗದೆ, ಈ ದೇಶದಲ್ಲಿ ದಿಟದ ಧ್ಯೇಯ ಆಗಬೇಕಿದೆ. ಬಡವರಿಗೆ, ಜನಸಾಮಾನ್ಯರಿಗೆ ನ್ಯಾಯ ಮರೀಚಿಕೆ ಎನ್ನುವಂತಾದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅರ್ಥವಾದರೂ ಎಲ್ಲಿದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.