
ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತ ಪಡೆದಿರುವುದಕ್ಕಿಂತಲೂ ಬಿಟ್ಟು ಕೊಟ್ಟಿರುವುದೇ ಹೆಚ್ಚು. ಈ ಒಪ್ಪಂದ ಭಾರತದ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆಯೇ ಹೆಚ್ಚು. ಈ ಸಂದರ್ಭದಲ್ಲೇ, ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಸುಂಕ ಸಮರಕ್ಕೆ ಪ್ರಹಾರ ನೀಡಿದೆ. ಆ ತೀರ್ಪಿನ ಅನುಕೂಲ ಭಾರತಕ್ಕೆ ದೊರೆಯುತ್ತದೆಯೆ?
ವಿಶ್ವ ಆರ್ಥಿಕತೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಪ್ರಸ್ತುತ ಎಲ್ಲವೂ ಅನಿಶ್ಚಿತವಾಗಿದೆ. ಇಂದಿದ್ದ ಪರಿಸ್ಥಿತಿ ನಾಳೆ ಇರುವುದಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತರ ದೇಶಗಳ ಮೇಲೆ ವಿಧಿಸಿದ್ದ ಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆದರೆ, ಟ್ರಂಪ್ ಮಾತ್ರ ‘ಭಾರತದೊಂದಿಗಿನ ಒಪ್ಪಂದ ಮುಂದುವರಿಯುತ್ತದೆ. ಭಾರತ ಸುಂಕ ಕಟ್ಟುತ್ತದೆ’ ಎಂದಿದ್ದಾರೆ. ಭಾರತದ ನಿಲುವು ಇನ್ನೂ ಸ್ಪಷ್ಟವಾಗಿಲ್ಲ.
ಅಮೆರಿಕದ ಸರಕುಗಳಿಗೆ ಭಾರತ ಒಂದು ದೊಡ್ಡ ಮಾರುಕಟ್ಟೆ. ಜೊತೆಗೆ ಸುಂಕದಿಂದ ಬಂಡವಾಳವೂ ಹೆಚ್ಚು ಸಂಗ್ರಹವಾಗುತ್ತದೆ. ಇಡೀ ಜಗತ್ತು ತನ್ನ ರಾಜಕೀಯ, ಆರ್ಥಿಕ ಹಾಗೂ ಮಿಲಿಟರಿ ಆಸಕ್ತಿಗೆ ಅನುಗುಣವಾಗಿ ನಡೆಯಬೇಕು ಅನ್ನುವ ಪ್ರಯತ್ನವನ್ನು ಅಮೆರಿಕ ನಿಲ್ಲಿಸುವುದಿಲ್ಲ. ಬೇರೆ ಮಾರ್ಗ ಹಿಡಿಯುತ್ತದೆ. ಆದರೆ, ಭಾರತಕ್ಕೆ ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದ ಹಿತಕರವಲ್ಲದಿದ್ದರೂ ಟ್ರಂಪ್ ತೋರಿಸಿದ ದಾರಿಯಲ್ಲಿ ನಡೆಯುತ್ತಿದ್ದೇವೆ.
ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಮೊದಲ ಸೂಚನೆ ಸಿಕ್ಕಿದ್ದು ಟ್ರಂಪ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ. ಪ್ರಧಾನಿ ನರೇಂದ್ರ ಮೋದಿಯವರು, ‘ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ, ಅಮೆರಿಕದಿಂದ ಹೆಚ್ಚಿನ ತೈಲ ಖರೀದಿಸಲು ಒಪ್ಪಿದ್ದಾರೆ. ಅಮೆರಿಕದ ಸರಕು ಸೇವೆಗಳ ಮೇಲಿನ ಸುಂಕವನ್ನು ಭಾರತ ರದ್ದುಗೊಳಿಸುತ್ತದೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಅಮೆರಿಕ ಶೇ 18ಕ್ಕೆ ಇಳಿಸುತ್ತದೆ. ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಖರೀದಿಸಲು ಮೋದಿ ಒಪ್ಪಿದ್ದಾರೆ’ ಎಂದು ಅದು ತಿಳಿಸಿತ್ತು. ನಂತರದಲ್ಲಿ ಮೋದಿಯವರು ಅಮೆರಿಕ ಸುಂಕವನ್ನು ಶೇ 18ಕ್ಕೆ ಇಳಿಸುತ್ತಿದೆ ಎಂದಷ್ಟೆ ತಿಳಿಸಿದರು. ಉಳಿದ ವಿಷಯಗಳಿಗೆ ಮೌನವಾಗಿದ್ದರು.
ಒಪ್ಪಂದದ ಸಂಪೂರ್ಣ ವಿವರಗಳು ಲಭ್ಯವಿಲ್ಲದಿದ್ದರೂ ಕೆಲವು ಅಂಶಗಳು ಸ್ಪಷ್ಟವಾಗಿವೆ. ರಷ್ಯಾದಿಂದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತಕ್ಕೆ ದಂಡವಾಗಿ ಹೇರಿದ್ದ ಶೇ 25ರ ಸುಂಕವನ್ನು ಅಮೆರಿಕ ಹಿಂತೆಗೆದುಕೊಳ್ಳುತ್ತಿದೆ. ಆದರೆ, ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಭಾರತ ತೈಲ ಖರೀದಿಸಿದರೆ ಮತ್ತೆ ಶೇ 25ರಷ್ಟು ಸುಂಕ ವಿಧಿಸಲಾಗುತ್ತದೆ. ಆ ಬಗ್ಗೆ ಭಾರತದ ನಿಲುವು ಏನೆಂಬುದು ಸ್ಪಷ್ಟವಾಗಿಲ್ಲ. ಇಲ್ಲಿಯವರೆಗೂ ಅಮೆರಿಕದ ಒತ್ತಡವನ್ನು ಅನ್ಯಾಯ, ಅತಾರ್ಕಿಕ, ಅಸಮಂಜಸ ಎಂದು ಭಾರತದ ವಿದೇಶಾಂಗ ಸಚಿವರು ಖಂಡಿಸಿದ್ದರು. ಭಾರತ ತನ್ನ ಸ್ವಾಭಿಮಾನ, ಸ್ವಾಯತ್ತತೆ ಹಾಗೂ ಜನತೆಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದೂ ಹೇಳಿದ್ದರು. ಈಗ ಭಾರತ ಈ ನಿಲುವಿನಿಂದ ಹಿಂದೆ ಸರಿದಂತೆ ಕಾಣುತ್ತದೆ. ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡಲಾರಂಭಿಸಿದೆ. 2024ರಲ್ಲಿ ನಮ್ಮ ಒಟ್ಟು ತೈಲದಲ್ಲಿ ಶೇ 40ರಷ್ಟು ರಷ್ಯಾದಿಂದ ಬರುತ್ತಿತ್ತು. 2025ರಲ್ಲಿ ಅದು ಶೇ 25ಕ್ಕೆ ಇಳಿದಿದೆ. ಹಿಂದೆ ಇರಾನ್ ಹಾಗೂ ವೆನೆಜುವೆಲಾಗಳಿಂದ ತೈಲ ಖರೀದಿಯ ವಿಷಯದಲ್ಲೂ ಅಮೆರಿಕದ ಒತ್ತಡಕ್ಕೆ ಭಾರತ ಮಣಿದಿತ್ತು. ಇರಾನ್ ಜೊತೆಗಿನ ಎಲ್ಲ ವ್ಯಾಪಾರ ನಿಲ್ಲಿಸಿತ್ತು. ಭಾರತದ ತೈಲ ಬಳಕೆಯನ್ನು ಗಮನಿಸಲು ಟ್ರಂಪ್ ಉನ್ನತ ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿದ್ದಾರೆ ಅನ್ನುವ ವರದಿಗಳಿವೆ. ಜೊತೆಗೆ, ‘ಅಮೆರಿಕದ ರಾಷ್ಟ್ರೀಯ ಸುರಕ್ಷತೆ, ವಿದೇಶಿ ನೀತಿ ಹಾಗೂ ಆರ್ಥಿಕ ವಿಷಯಗಳೊಂದಿಗೆ ಭಾರತ ಹೊಂದಾಣಿಕೆಗೆ ಸಿದ್ಧವಾಗಿದೆ’ ಎಂದಿರುವುದು ಆತಂಕವನ್ನು ಮೂಡಿಸಿದೆ.
ಭಾರತ ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ‘ಇಂಧನ ಉತ್ಪನ್ನಗಳು, ವಿಮಾನ ಮತ್ತು ವಿಮಾನದ ಬಿಡಿಭಾಗಗಳು, ವಿರಳ ಲೋಹಗಳು, ತಂತ್ರಜ್ಞಾನದ ಉತ್ಪನ್ನಗಳನ್ನು’ ಖರೀದಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಪ್ರಸ್ತುತ ಭಾರತ ಸುಮಾರು 50 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದೆ. ಒಪ್ಪಂದಕ್ಕೆ ನಾವು ಬದ್ಧರಾದರೆ ಇದರ ಹತ್ತರಷ್ಟು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದು ನಮ್ಮ ಆರ್ಥಿಕತೆಗೆ ಹೊರೆಯಾಗುತ್ತದೆ. ನಮ್ಮ ಆರ್ಥಿಕತೆಗೆ ಅನುಕೂಲವಾಗುವ ಯಾವ ಸರಕುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬಹುದು ಎನ್ನುವುದೂ ದೊಡ್ಡ ಪ್ರಶ್ನೆಯೇ. ಅಂತಿಮವಾಗಿ ರಷ್ಯಾದ ತೈಲದ ಬದಲಿಗೆ ಹೆಚ್ಚಿನ ಬೆಲೆ ತೆತ್ತು ಅಮೆರಿಕದಿಂದ ತೈಲವನ್ನೋ ಶಸ್ತ್ರಾಸ್ತ್ರಗಳನ್ನೋ ಖರೀದಿಸಬೇಕಾಗುತ್ತದೆ. ಅಮೆರಿಕದಿಂದ ಸರಕುಗಳನ್ನು ಕೊಳ್ಳಲು 50 ಶತಕೋಟಿ ಡಾಲರಿಗಿಂತ ಹೆಚ್ಚಿನ ಹಣ ವ್ಯಯಿಸಿದರೆ, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ತಗ್ಗಿಸಬೇಕಾಗುತ್ತದೆ. ಯುರೋಪ್, ನ್ಯೂಜಿಲೆಂಡ್ ಇತ್ಯಾದಿ ದೇಶಗಳೊಂದಿಗೆ ನಾವು ಮಾಡಿಕೊಂಡಿರುವ ವ್ಯಾಪಾರ ಒಪ್ಪಂದವನ್ನು ಮಾನ್ಯ ಮಾಡುವುದಕ್ಕೂ ಕಷ್ಟವಾಗುತ್ತದೆ. ಇದು ಸಮಾನ ಒಪ್ಪಂದವೂ ಇಲ್ಲ. ನಿರ್ಬಂಧ ಭಾರತಕ್ಕೆ ಮಾತ್ರ, ಅಮೆರಿಕಕ್ಕೆ ನಿರ್ಬಂಧವೇ ಇಲ್ಲ. ಎರಡು ದೇಶಗಳೂ ಗಣನೀಯವಾಗಿ ತಾಂತ್ರಿಕ ಉತ್ಪನ್ನಗಳ ವ್ಯಾಪಾರವನ್ನು ಹೆಚ್ಚಿಸುತ್ತವೆ ಎಂದು ಪಟ್ಟಿ ಮಾಡಿದ್ದ ಉತ್ಪನ್ನಗಳ ಪಟ್ಟಿಯಲ್ಲಿರುವುದೆಲ್ಲ ಅಮೆರಿಕ ರಫ್ತು ಮಾಡುವ ವಸ್ತುಗಳು!
ಈವರೆಗೆ ಆಹಾರ ಮತ್ತು ಕೃಷಿ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದಗಳಿಂದ ಹೊರಗಿಡಲಾಗಿತ್ತು. ಈಗ ಮೊದಲ ಬಾರಿಗೆ ಅವುಗಳನ್ನು ಒಪ್ಪಂದದ ಭಾಗವನ್ನಾಗಿಸಲಾಗಿದೆ. ಅಮೆರಿಕದ ಮೆಕ್ಕೆಜೋಳ (ಕಾರ್ನ್) ಹಾಗೂ ಸೋಯಾಗಳನ್ನು ಚೀನಾ ಕೊಳ್ಳುತ್ತಿಲ್ಲ. ಹಾಗಾಗಿ ಅಮೆರಿಕಕ್ಕೆ ಪರ್ಯಾಯ ಮಾರುಕಟ್ಟೆ ಬೇಕಾಗಿದೆ. ಭಾರತದಲ್ಲಿ ಅವುಗಳಿಗೆ ಒಳ್ಳೆಯ ಮಾರುಕಟ್ಟೆಯಿದೆ. ಭಾರತದ ಮೇಲಿನ ಒತ್ತಡಕ್ಕೆ ಇದು ಕೂಡ ಕಾರಣ. ಭಾರತದಲ್ಲಿ ಕುಲಾಂತರಿ ತಳಿಗಳಿಗೆ ಅವಕಾಶವಿಲ್ಲ. ಹಾಗಾಗಿ ಅಮೆರಿಕದ ಕುಲಾಂತರಿ ಮೆಕ್ಕೆಜೋಳ ಮತ್ತು ಸೋಯಾಕಾಳನ್ನು ನಿಷೇಧಿಸಲಾಗಿದೆ. ಆದರೆ ಒಣಗಿಸಿದ ಡಿಸ್ಟಿಲ್ಡ್ ಮೆಕ್ಕೆಜೋಳ (ಡಿಡಿಜಿಎಸ್) ಅಂದರೆ ಎಥೆನಾಲ್ ತಯಾರಿಸಿದ ಮೇಲೆ ಉಳಿಯುವ ಉಪಉತ್ಪನ್ನದ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಇದನ್ನು ಹಸು, ಕೋಳಿ ಇತ್ಯಾದಿಗಳ ಮೇವಾಗಿ ಬಳಸಲಾಗುತ್ತದೆ. ಅಂದರೆ, ಅಮೆರಿಕದ ಕುಲಾಂತರಿ ಮೆಕ್ಕೆಜೋಳ ಡಿಡಿಜಿಎಸ್ ರೂಪದಲ್ಲಿ ಭಾರತವನ್ನು ಪ್ರವೇಶಿಸಲಿದೆ.
ಈಗಿನ ಒಪ್ಪಂದದ ಪ್ರಕಾರ ಭಾರತವು ಅಮೆರಿಕದ ಎಲ್ಲಾ ಕೈಗಾರಿಕಾ ಸರಕುಗಳು, ಪಶು ಆಹಾರಕ್ಕಾಗಿ ಬಳಸುವ ಒಣಗಿಸಿದ ಡಿಸ್ಟಿಲರಿ ಧಾನ್ಯಗಳು, ಕೆಂಪುಜೋಳ, ಗೋಡಂಬಿ–ಬಾದಾಮಿ, ತಾಜಾಮತ್ತು ಸಂಸ್ಕರಿಸಿದ ಹಣ್ಣುಗಳು, ಸೋಯಾ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಹಾಗೂ ಇನ್ನಿತರ ಉತ್ಪನ್ನಗಳ ಮೇಲಿನ ಸುಂಕಗಳನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ.
ಅಮೆರಿಕದಲ್ಲಿ ಬೆಳೆದ ಜೋಳಕ್ಕೆ ನಮ್ಮ ಮಾರುಕಟ್ಟೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ. ಈವರೆಗೆ ಜೋಳದ ಮೇಲೆ ಹಾಕುತ್ತಿದ್ದ ಶೇ 57.75ರಷ್ಟು ಸುಂಕವನ್ನು ರದ್ದುಗೊಳಿಸಬೇಕಾಗುತ್ತದೆ. ವಿಶ್ವದಲ್ಲಿ ಅತಿಹೆಚ್ಚು ಜೋಳವನ್ನು ರಫ್ತು ಮಾಡುತ್ತಿರುವ ಅಮೆರಿಕಕ್ಕೆ ಭಾರತದ ಮಾರುಕಟ್ಟೆ ಬೇಕು. ವಿಪರೀತ ಸಬ್ಸಿಡಿ ಪಡೆದು ಬೆಳೆದ ಜೋಳವನ್ನು ಯಾವುದೇ ಸುಂಕವಿಲ್ಲದೆ ಭಾರತಕ್ಕೆ ಆಮದು ಮಾಡಿಕೊಳ್ಳಲು ಒಪ್ಪಿಕೊಂಡಿದ್ದೇವೆ. ಇದರಿಂದ ಜೋಳ ಬೆಳೆಯುವ ರಾಜ್ಯಗಳಿಗೆ ಸಮಸ್ಯೆಯಾಗುತ್ತದೆ.
ಭಾರತವು ಅಮೆರಿಕದ ಮೇಲಿನ ಸುಂಕವನ್ನು ತೆಗೆಯಲು ಒಪ್ಪಿಕೊಂಡಿದೆ. ಅದಕ್ಕೆ ಪ್ರತಿಯಾಗಿ ಅಮೆರಿಕ ತಾನು ವಿಧಿಸಿರುವ ಸುಂಕದಲ್ಲಿ ಶೇ 7ರಷ್ಟು ತಗ್ಗಿಸಲು ಮುಂದಾಗಿದೆ. ಇದರಿಂದ ಬಾಂಗ್ಲಾ ಮೊದಲಾದ ದೇಶಗಳೊಂದಿಗೆ ಅಮೆರಿಕದಲ್ಲಿ ಸ್ಪರ್ಧಿಸುವುದಕ್ಕೆ ಭಾರತಕ್ಕೆ ಸಾಧ್ಯವಾಗುತ್ತದೆ ಎನ್ನಲಾಗಿದೆ. ಆದರೆ, ಬಾಂಗ್ಲಾದ ಸರಕುಗಳ ಮೇಲಿನ ಸುಂಕವನ್ನು ಈಗ ಶೇ 19ಕ್ಕೆ ಇಳಿಸಲಾಗಿದೆ. ಜೊತೆಗೆ ಅಮೆರಿಕದಿಂದ ಹತ್ತಿ ಮತ್ತು ನೂಲನ್ನು ಖರೀದಿಸಿದರೆ ಸುಂಕವನ್ನು ಪೂರ್ತಿಯಾಗಿ ರದ್ದು ಮಾಡುವುದಾಗಿ ತಿಳಿಸಿದೆ. ಭಾರತಕ್ಕೂ ಈ ಅವಕಾಶ ಇದೆ. ಆದರೆ, ಬಾಂಗ್ಲಾದೇಶ ಕಳೆದ ವರ್ಷ ಭಾರತದಿಂದ 1.6 ಶತಕೋಟಿ ಡಾಲರ್ ಮೌಲ್ಯದ ನೂಲನ್ನು ಖರೀದಿಸಿತ್ತು. ಇನ್ನು ಮುಂದೆ ಅದು ಅಮೆರಿಕದಿಂದ ಖರೀದಿಸಬಹುದು. ಆಗ ನಮ್ಮ ನೂಲು ಮತ್ತು ಹತ್ತಿ ಕೊಳ್ಳುವವರು ಯಾರು?
ಒಟ್ಟಾರೆಯಾಗಿ, ನಾವು ಪಡೆದುಕೊಂಡಿದ್ದಕ್ಕಿಂತ ಬಿಟ್ಟುಕೊಟ್ಟಿದ್ದೇ ಹೆಚ್ಚು. ವಾಸ್ತವದಲ್ಲಿ ಭಾರತದ ಹಿತಾಸಕ್ತಿಯನ್ನು ಅಮೆರಿಕ ಕಡೆಗಣಿಸುತ್ತಲೇ ಬಂದಿದೆ. ಚೀನಾ, ಟರ್ಕಿ ಇತ್ಯಾದಿ ದೇಶಗಳೂ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿವೆ, ಆದರೆ ಸುಂಕ ವಿಧಿಸಿದ್ದು ಭಾರತದ ಮೇಲೆ ಮಾತ್ರ. ಹಾಗೆಯೇ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದೊಂದಿಗೆ ಅಮೆರಿಕ ಮಾಡಿಕೊಂಡಿರುವ ಒಪ್ಪಂದದಲ್ಲಿ ಭಾರತದ ಹಿತಾಸಕ್ತಿಯನ್ನು ನಿರ್ಲಕ್ಷಿಸಲಾಗಿದೆ. ದಿನದಿಂದ ದಿನಕ್ಕೆ ಟ್ರಂಪ್ ಅವರ ಒತ್ತಡ ಹಾಗೂ ಬೇಡಿಕೆಗಳು ಹೆಚ್ಚುತ್ತಿವೆ. ಸದ್ಯಕ್ಕೆ ಬೇಳೆಕಾಳುಗಳು, ಸೋಯಾಬೀನ್, ಮೆಕ್ಕೆಜೋಳ ಹೊರಗಿದ್ದರೂ, ಮುಂದಿನ ದಿನಗಳಲ್ಲಿ ಅವುಗಳನ್ನು ಸೇರಿಸುವ ಒತ್ತಡ ಬರುತ್ತದೆ. ಹಾಗೆಯೇ ಡಿಜಿಟಲ್ ಸೇವೆಗಳ ಮೇಲೆ ಸುಂಕವನ್ನು ತೆಗೆಯುವುದಕ್ಕೂ ಒತ್ತಡ ಪ್ರಾರಂಭವಾಗಿತ್ತು. ದ್ವಿಪಕ್ಷೀಯ ಒಪ್ಪಂದಗಳ ಮೂಲಕ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಅಮೆರಿಕ ನಮ್ಮ ಮೇಲೆ ನಿರಂತರ ಒತ್ತಡ ಹೇರುತ್ತಿದೆ. ಈ ಸಂದರ್ಭದಲ್ಲಿ ನಮಗೆ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ಆಸರೆಯಾಗಬಹುದು. ನಮ್ಮ ದೇಶದ, ಆರ್ಥಿಕತೆಯ ಹಾಗೂ ಜನತೆಯ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವುದು ಭಾರತದ ಆದ್ಯತೆಯಾಗಬೇಕು. ಅದಕ್ಕೆ ತಕ್ಕನಾಗಿ ಸರಿಯಾದ ಸಮಯಕ್ಕೆ ಈ ತೀರ್ಪು ಬಂದಿದೆ. ಅದರ ಅನುಕೂಲ ಎಷ್ಟರಮಟ್ಟಿಗೆ ದೊರೆಯುವುದೋ ನೋಡಬೇಕು.
ವೇಣುಗೋಪಾಲ್ ಟಿ.ಎಸ್.