ADVERTISEMENT

ವಿಶ್ಲೇಷಣೆ ‌| ಕಾಳ್ಗಿಚ್ಚು: ಸಂಕಟ ನೂರೆಂಟು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 23:56 IST
Last Updated 23 ಫೆಬ್ರುವರಿ 2025, 23:56 IST
   

ಶಿವಮೊಗ್ಗ ಜಿಲ್ಲೆಯ ಶರಾವತಿ ಸಿಂಗಳೀಕ ಅಭಯಾರಣ್ಯದ ಅಂಬಾರಗುಡ್ಡದಲ್ಲಿ ಇದೇ ತಿಂಗಳ ಮೊದಲ ವಾರದಲ್ಲೇ ಬೆಂಕಿ ಬಿತ್ತು, ಸುಮಾರು 8 ಎಕರೆ ಕಾಡು ಸುಟ್ಟಿತು. ಎರಡನೇ ವಾರದಲ್ಲಿ ಶ್ರೀರಂಗಪಟ್ಟಣದ ಕರಿಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ, ನೂರಾರು ಎಕರೆ ಕಾಡು ಭಸ್ಮವಾಯಿತಲ್ಲದೆ, ಅಲ್ಲಿನ ಅಸಂಖ್ಯ ವನ್ಯಜೀವಿಗಳ ಬದುಕು ನಾಶವಾಯಿತು.‌ ಚಾಮುಂಡಿಬೆಟ್ಟದ ಉತ್ತನಹಳ್ಳಿ ಹಾಗೂ ಲಲಿತಾದ್ರಿಪುರ ಭಾಗದಲ್ಲಿ ಶುಕ್ರವಾರ ಸುಮಾರು 200 ಎಕರೆ ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಯಿತು.

ಕರಿಗುಡ್ಡಕ್ಕೆ ಬೆಂಕಿ ಹಾಕಿದರೆ ಮಕ್ಕಳಾಗುತ್ತವೆ ಎಂಬ ಮೂಢನಂಬಿಕೆಯೂ ಬೆಂಕಿ ಹಚ್ಚಲು ಒಂದು ಕಾರಣ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಶುಷ್ಕತನದ ಚಳಿ ವಾತಾವರಣವು ನೆಲದ ತೇವಾಂಶವನ್ನು ವೇಗವಾಗಿ ಆರಿಸುತ್ತಿದೆ. ಮಧ್ಯಾಹ್ನದ ಉರಿಬಿಸಿಲಿನಿಂದ ಬಳಲುವ ಅರಣ್ಯ ಪ್ರದೇಶಗಳು ಮಾನವಪ್ರೇರಿತ ಬೆಂಕಿ ಅನಾಹುತಕ್ಕೆ ವೇಗವಾಗಿ ತುತ್ತಾಗುತ್ತಿವೆ. ಭಾರತದಲ್ಲಿ ಸಂಭವಿಸುವ ಬೆಂಕಿ ಅನಾಹುತಗಳಲ್ಲಿ ಶೇಕಡ 95ರಷ್ಟು ಮಾನವ ಪ್ರೇರಿತವಾದವು. ಕಾಡಂಚಿನ ಕೃಷಿಭೂಮಿಯಲ್ಲಿ ನಡೆಯುವ ಕೃಷಿ ಉಳಿಕೆ ಸುಡುವ ಚಟುವಟಿಕೆಗಳು ಕಾಡಿಗೆ ಬೆಂಕಿ ಹರಡಲು ಕಾರಣವಾಗುತ್ತವೆ. ಕಾಡಂಚಿನ ಹುಲ್ಲುಗಾವಲುಗಳಿಗೆ ಬೆಂಕಿ ಹಚ್ಚುವುದರಿಂದಲೂ ಕಾಡಿಗೆ ಬೆಂಕಿ ಆವರಿಸಿಕೊಳ್ಳುತ್ತದೆ. ಒಣಗಿದ ಹುಲ್ಲುಗಾವಲಿಗೆ ಬೆಂಕಿ ಹಚ್ಚುವುದರಿಂದ, ಮುಂದಿನ ಹುಲ್ಲಿನ ಫಸಲು ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಯೂ ಕಾಡಿನ ಬೆಂಕಿಗೆ ಕಾರಣವಾಗುತ್ತಿದೆ. ನಂದಿಸದೇ ಎಸೆದ ಸಿಗರೇಟು ಮತ್ತು ಬೀಡಿಯ ತುಂಡುಗಳಿಂದಲೂ ಬೆಂಕಿ ಹರಡುತ್ತದೆ.

2020ರಿಂದ 2024ರವರೆಗೆ ಕರ್ನಾಟಕದ 20,933 ಸ್ಥಳಗಳಲ್ಲಿ ಬೆಂಕಿ ತಗುಲಿರುವುದನ್ನು ಉಪಗ್ರಹ ಆಧಾರಿತ ಅಂಕಿ-ಅಂಶಗಳು ದೃಢಪಡಿಸಿವೆ. ಇದೇ ಜನವರಿ 6ರಿಂದ 12ರವರೆಗೆ ರಾಜ್ಯದ ಅನೇಕ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದಿದೆ. ಪಶ್ಚಿಮಘಟ್ಟ ಭಾಗಗಳಲ್ಲಿ ಬೇಸಿಗೆಯಲ್ಲಿ ಬೆಂಕಿ ಹಾಕುವ ಪ್ರವೃತ್ತಿ ತುಸು ಹೆಚ್ಚೇ ಇದೆ. 2023ರ ಮಾರ್ಚ್ 10ರಂದು ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಒಂದೇ ದಿನದಲ್ಲಿ 23 ಕಡೆ ಬೆಂಕಿ ಹಚ್ಚಿದ ಪ್ರಕರಣ ದಾಖಲಾಗಿದೆ. ಕೃಷಿ ನೆಲೆಯನ್ನು ವಿಸ್ತರಿಸಿಕೊಳ್ಳಲು ಬೆಂಕಿ ಹಚ್ಚಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ಹೇಳುತ್ತವೆ. ಒಂದು ಪ್ರಕರಣದಲ್ಲಿ ಮಾತ್ರ ಬೆಂಕಿ ಹಚ್ಚಿದವರ ವಿರುದ್ಧ ಪ್ರಕರಣ ದಾಖಲಾಗಿದೆ.

ADVERTISEMENT

ಹಿಂದಿನ ಶತಮಾನದ ಅಂತ್ಯಭಾಗದವರೆಗೂ ಕಾಡಿಗೆ ಬೆಂಕಿ ಹಚ್ಚುವ ಪ್ರಕರಣಗಳು ಈಗಿನ ಪ್ರಮಾಣಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಿದ್ದವು. ಕೃಷಿ ವಿಸ್ತರಣೆಗಾಗಿ, ನಿರ್ಲಕ್ಷ್ಯದಿಂದ ಅಥವಾ ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿಯಿಕ್ಕುವುದರಿಂದ ದೀರ್ಘಕಾಲಿಕ ವಾಗಿ ಕಾಡಿನ ಆರೋಗ್ಯ ಹದಗೆಡುತ್ತದೆ. ಪ್ರಾಣಿಗಳು, ಹಕ್ಕಿಗಳ ಗೂಡು, ಮೊಟ್ಟೆ, ಮರಿಗಳು ವಿಪರೀತ ಶಾಖದಿಂದ ಸತ್ತು ಹೋಗುತ್ತವೆ. ಉಭಯಚರಿಗಳು, ಸರೀಸೃಪಗಳು, ಬಿಲಗಳಲ್ಲಿ ವಾಸಿಸುವ ಸ್ತನಿಗಳಂತಹ ನೆಲವಾಸಿಗಳು ಬಹಳ ತೊಂದರೆ ಅನುಭವಿಸುತ್ತವೆ. ಬೆಂಕಿ ಆರಿದ ನಂತರದಲ್ಲೂ ಅವುಗಳ ಕಷ್ಟ ನೀಗುವುದಿಲ್ಲ.

ಬದುಕುಳಿದ ಪ್ರಾಣಿಗಳು ಆಹಾರ, ನೀರು ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಾ, ನಿಧಾನವಾಗಿ ಸಾವಿನ ದವಡೆಗೆ ಜಾರುತ್ತವೆ. ಆಕಸ್ಮಿಕವಾಗಿ ಬೆಂಕಿಯಿಂದ ತಪ್ಪಿಸಿಕೊಂಡರೂ ಸೇವಿಸಿದ ಹೊಗೆಯಿಂದಾಗಿ ಅವುಗಳ ಶ್ವಾಸಕೋಶಕ್ಕೆ ತೀವ‍್ರ ಹಾನಿಯಾಗಿ, ಉಸಿರಾಟಕ್ಕೆ ತೊಂದರೆಯಾಗುತ್ತದೆ. ಬೇಟೆಪ್ರಾಣಿಗಳಿಗೆ ಬಲಿಪ್ರಾಣಿಗಳ ಕೊರತೆಯಾಗುತ್ತದೆ. ಆನೆಯಂತಹ ಪ್ರಾಣಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತವೆ. ಇದು ಮಾನವ- ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಕಾಡಿನ ಬೆಂಕಿಯಿಂದ ಸ್ಥಳೀಯ ಜಲಮೂಲಗಳಿಗೂ ಧಕ್ಕೆಯಾಗಿ, ವನ್ಯಜೀವಿಗಳಿಗೆ ಶುದ್ಧನೀರು ಮರೀಚಿಕೆಆಗುತ್ತದೆ. ನಿರ್ಜಲೀಕರಣದಿಂದ ಸಾವು ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

ಸಾವಯವ ಕಸಕಡ್ಡಿಗಳನ್ನು ವಿಘಟಿಸಿ, ಮಣ್ಣಿಗೆ ಸೇರಿಸುವ ಕಾಯಕಜೀವಿಗಳಾದ ಮಣ್ಣಿನ ಸೂಕ್ಷ್ಮಾಣುಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಇದರಿಂದ ಮಣ್ಣು ಪೆಡಸಾಗಿ ತನ್ನ ಸಾರವನ್ನು ಕಳೆದುಕೊಳ್ಳುತ್ತದೆ. ಮಣ್ಣು ಸವಕಳಿಯಿಂದಾಗಿ ಮೇಲ್ಮಣ್ಣು ಕೊಚ್ಚಿ ಹೋಗುತ್ತದೆ. ಶಿಥಿಲವಾದ ಮಣ್ಣಿನಿಂದ ಮಣ್ಣು ಕುಸಿಯುವಿಕೆಯ ಜೊತೆಗೆ ಬಿಲವಾಸಿಗಳ ಆವಾಸಸ್ಥಾನ ನಾಶವಾಗುತ್ತದೆ. ನಿಸ್ಸಾರ ಮಣ್ಣಿನಲ್ಲಿ ಸ್ಥಳೀಯವಲ್ಲದ ಸಸ್ಯಪ್ರಭೇದಗಳು ವಿಜೃಂಭಿಸುತ್ತವೆ. ಸ್ಥಳೀಯ ಸಸ್ಯವೈವಿಧ್ಯ ನಾಶವಾಗುತ್ತದೆ. ಸೀಮಿತ ಆವಾಸಸ್ಥಾನದಲ್ಲಿರುವ ಪ್ರಭೇದಗಳು ಸ್ಥಾನಿಕವಾಗಿ ನಿರ್ವಂಶವಾಗುತ್ತವೆ. ಕೀಟಗಳನ್ನೇ ಅವಲಂಬಿಸಿ ಬದುಕುವ ಪಕ್ಷಿಗಳು, ಬಾವಲಿ, ಕಪ್ಪೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತದೆ. ಕಾಡಿನ ಸಂರಚನೆಯನ್ನು ರೂಪಿಸುವ ಮುಖ್ಯಪ್ರಭೇದಗಳಾದ ಆನೆ, ಹುಲಿಗಳ ಸಂತಾನಾಭಿವೃದ್ಧಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಮಳೆ ಬಂದಾಗ ತೇಲಿ ಹೋಗುವ ಬೂದಿ ಮತ್ತು ಕಾಡಿನ ಬೆಂಕಿಯಿಂದ ಸೃಷ್ಟಿಯಾದ ರಾಸಾಯನಿಕಗಳು ಜಲಮೂಲ ಗಳನ್ನು ಸೇರಿ ಜಲವಾಸಿಗಳಿಗೆ ವಿಷಕಾರಿಯಾಗಿ ಪರಿಣಮಿ ಸುತ್ತವೆ. ನೀರಿನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮೀನುಗಳ ಸಾವು ಸಂಭವಿಸುತ್ತದೆ.

ಕಾಡಿಗೆ ಕಿಚ್ಚು ಹಚ್ಚುವುದರಿಂದ ಅಪಾರ ಪ್ರಮಾಣದ ಇಂಗಾಲಾಮ್ಲ ಹಾಗೂ ಮೀಥೇನ್ ಉತ್ಪತ್ತಿಯಾಗಿ, ವಾತಾವರಣದ ಬಿಸಿಯೇರಿಕೆ ಇನ್ನಷ್ಟು ಹೆಚ್ಚುತ್ತದೆ. ಬಿಸಿಯೇರಿಕೆ ಮತ್ತಷ್ಟು ಬೆಂಕಿಗೆ ಕಾರಣವಾಗಿ, ವಿಷಚಕ್ರವಾಗಿ ಪರಿಣಮಿಸುತ್ತದೆ. ಸುಟ್ಟುಹೋದ ಕಾಡು ಮತ್ತೆ ಸೃಷ್ಟಿಯಾಗಲು ಹತ್ತಾರು, ಕೆಲವೊಮ್ಮೆ ನೂರಾರು ವರ್ಷಗಳು ಬೇಕಾಗುತ್ತವೆ. ಬೆಂಕಿಯಿಂದಾಗಿ ಬದಲಾದ ಭೌಗೋಳಿಕ ರಚನೆಯ ಕಾರಣಕ್ಕೆ ಕೆಲವು ಪ್ರಭೇದಗಳು ಮತ್ತೆ ಆ ಪ್ರದೇಶಕ್ಕೆ ಮರಳಿ ಬರಲಾರವು.

ದೇಶದ ಹಾಗೂ ರಾಜ್ಯಗಳ ಆರ್ಥಿಕತೆಗೂ ಕಾಡಿನ ಬೆಂಕಿಗೂ ನೇರ ಸಂಬಂಧವಿದೆ. ವಿಶ್ವಬ್ಯಾಂಕ್ ತನ್ನ 2018ರ ವರದಿಯಲ್ಲಿ, ಭಾರತದಲ್ಲಿ ಕಾಡಿನ ಬೆಂಕಿಯಿಂದ ₹ 1,100 ಕೋಟಿಯಷ್ಟು ನಷ್ಟವಾಗಿದೆ ಎಂದು ಹೇಳಿದೆ. ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆ್ಯಂಡ್‌ ಎಕನಾಮಿಕ್ ಚೇಂಜ್‌ ಪ್ರಕಾರ, 2015ರಿಂದ 2021ರವರೆಗೆ ಕಾಡಿನ ಬೆಂಕಿಯಿಂದ ಕರ್ನಾಟಕಕ್ಕೆ ನಷ್ಟವಾದ ಪ್ರಮಾಣ ₹ 3,831 ಕೋಟಿ. ಇಂಗಾಲಾಮ್ಲ ಹೀರಿಕೊಳ್ಳುವಿಕೆ, ವಾಯುಮಾಲಿನ್ಯ ತಡೆಯುವಿಕೆ ಹಾಗೂ ಕಿರು ಅರಣ್ಯ ಉತ್ಪನ್ನಗಳ ಕೊರತೆಯಿಂದ ಇಷ್ಟು ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಪಶ್ಚಿಮಘಟ್ಟಗಳ ಸಿಂಹಪಾಲು ಕರ್ನಾಟಕದಲ್ಲಿದೆ. ಹಾಗಾಗಿ, ಬೆಂಕಿ ಪ್ರಕರಣಗಳೂ ಹೆಚ್ಚು. ಜನಪ್ರೇರಿತ ಬೆಂಕಿಯಿಂದ ಕಾಡನ್ನು ರಕ್ಷಣೆ ಮಾಡಲು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಮುಂಚೂಣಿ ಕೆಲಸಗಾರರ ತೀವ್ರ ಕೊರತೆಯಿದೆ. ಜೊತೆಗೆ, ಬೆಂಕಿಯನ್ನು ನಂದಿಸುವ ಪರಿಕರಗಳೂ ಇಲ್ಲ. ಒಣಗಿದ ಎಲೆಗಳನ್ನು ಬೆಂಕಿಯಿಂದ ದೂರ ಹಾರಿಸುವ ಬ್ಲೋಯರ್‌ಗಳು ಅಗತ್ಯ ಸಂಖ್ಯೆಯಲ್ಲಿ ಇಲ್ಲ. ಉದಾಹರಣೆಗೆ, ಸಾಗರ ವಿಭಾಗದ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಬರುವ ಸಾಗರ, ಹೊಸನಗರ, ಸೊರಬ ಮತ್ತು ಶಿಕಾರಿಪುರ ತಾಲ್ಲೂಕುಗಳ 1,39,756 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಬೆಂಕಿ ನಂದಿಸಲು ಬರೀ ಹತ್ತು ಲೀಫ್ ಬ್ಲೋಯರ್ ಇವೆ. ಇವತ್ತಿಗೂ ಅದೆಷ್ಟೋ ಮುಂಚೂಣಿ ನೌಕರರು ಹಸಿಸೊಪ್ಪನ್ನು ಬಳಸಿ ಬೆಂಕಿ ನಂದಿಸುವ ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಳ್ಳುವ ಪರಿಸ್ಥಿತಿಯಿದೆ. ಬಂಡೀಪುರದಲ್ಲಿ ಬೆಂಕಿ ನಂದಿಸಲು ಹೋದ ಅರಣ್ಯ ಇಲಾಖೆ ನೌಕರ 27 ವರ್ಷದ ಮುರಿಗೆಪ್ಪ ತಮ್ಮಣ್ಣಗೋಳ್ 2017ರಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದು, ಹಾಸನ ಜಿಲ್ಲೆಯ ಅರಣ್ಯ ಇಲಾಖೆಯ ನೌಕರರಾದ ಸುಂದರೇಶ್, ಮಂಜುನಾಥ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಾರುಣವಾಗಿ ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.

ಬೆಂಕಿ ನಂದಿಸುವ ಆಧುನಿಕ ಸಾಧನಗಳು, ಡ್ರೋನ್, ಬೆಂಕಿ ಭೀತಿಯಿರುವಲ್ಲಿ ಕಣ್ಗಾವಲು ಕ್ಯಾಮೆರಾಗಳು, ಬೆಂಕಿ ಬಿದ್ದಲ್ಲಿ ಸುಲಭವಾಗಿ ನಂದಿಸಲು ಅನುವಾಗುವಂಥ ವಿಶೇಷ ವಾಹನಗಳು, ಅಗತ್ಯ ಬಿದ್ದರೆ ಹೆಲಿಕಾಪ್ಟರ್ ಬಳಕೆ, ಶೀಘ್ರ ಮಾಹಿತಿ ವಿತರಣೆಯಂತಹವನ್ನು ಅರಣ್ಯ ಇಲಾಖೆಗೆ ಸರ್ಕಾರ ಒದಗಿಸಿಕೊಡಬೇಕು. ಬೆಂಕಿ ಅನಾಹುತಗಳನ್ನು ತಡೆಯಲೆಂದೇ ವಿಶೇಷ ಅನುದಾನವನ್ನು ನೀಡಲಿ. ಹಾಗೆಯೇ ಜನ ಸಹ ಕಾಡಿಗೆ ಬೆಂಕಿ ಇಕ್ಕುವ ಹೇಯ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡದಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.