ADVERTISEMENT

ವಿಶ್ಲೇಷಣೆ | ಚುನಾವಣೆ: ಇದು ಮಹಿಳಾಪರ್ವ!

ಜ್ಯೋತಿ
Published 18 ನವೆಂಬರ್ 2025, 0:05 IST
Last Updated 18 ನವೆಂಬರ್ 2025, 0:05 IST
   

ಭಾರತದ ಮಹಿಳೆಯರು ದೇಶದ ‘ಚುನಾವಣಾ ನಕ್ಷೆ’ಯನ್ನು ಸದ್ದಿಲ್ಲದೆ ಪುನರ್ ರಚಿಸುತ್ತಿರುವುದನ್ನು ಬಿಹಾರದ ವಿಧಾನಸಭಾ ಚುನಾವಣೆ ಫಲಿತಾಂಶ ಸೂಚಿಸುತ್ತಿದೆ. ಚುನಾವಣಾ ಆಯೋಗದ ವಿವಾದಾಸ್ಪದ ನಿಲುವುಗಳು, ಜಾತಿ ಸಮೀಕರಣ, ಮೈತ್ರಿಗಳ ಬಲಾಬಲ, ಹಣದ ಪ್ರಭಾವ, ಇತ್ಯಾದಿ ಅಂಶಗಳ ಕುರಿತಾದ ಚರ್ಚೆಗಳ ನಡುವೆ, ಈ ಚುನಾವಣಾ ಫಲಿತಾಂಶದಲ್ಲಿ ಬಿಹಾರದ ಮಹಿಳೆಯರ ಪಾತ್ರವನ್ನು ಕಡೆಗಣಿಸುವಂತಿಲ್ಲ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಚುನಾವಣೆ ನಡೆದ ಕರ್ನಾಟಕ, ಬಿಹಾರ, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿನ ಫಲಿತಾಂಶಗಳು, ದೇಶದ ಮಹಿಳೆಯರು ರಾಜಕೀಯದಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ ಎನ್ನುವುದನ್ನು ನಿರೂಪಿಸಿವೆ. ಜಾತಿ ಲೆಕ್ಕಾಚಾರ, ಪ್ರಾದೇಶಿಕ ಅಸ್ಮಿತೆ, ರೈತರ ಸಮಸ್ಯೆ, ಗಡಿ ರಾಜಕೀಯ ಇತ್ಯಾದಿ ಅಂಶಗಳ ಮೇಲಷ್ಟೇ ಗಮನಹರಿಸುತ್ತಿದ್ದ ರಾಜಕೀಯ ಪಕ್ಷಗಳು ಈಗ ‘ಮಹಿಳಾ ಮತ ಬ್ಯಾಂಕ್’ ಓಲೈಸಲು ತಂತ್ರಗಳನ್ನು ರೂಪಿಸುತ್ತಿವೆ. ಆರ್ಥಿಕ ಬೆಂಬಲ, ಶಿಕ್ಷಣಕ್ಕೆ ಪ್ರೋತ್ಸಾಹ, ಉಚಿತ ಬಸ್ ಪ್ರಯಾಣ, ಸುರಕ್ಷತಾ ಕಾರ್ಯಕ್ರಮಗಳಂತಹ ಕಲ್ಯಾಣ ಯೋಜನೆಗಳ ಯಶಸ್ಸು, ಮಹಿಳೆಯರು ತಮ್ಮ ದೈನಂದಿನ ಜೀವನವನ್ನು ಸುಗಮಗೊಳಿಸುವ ರಾಜಕೀಯ ಭರವಸೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎನ್ನುವುದನ್ನು ಪುಷ್ಟೀಕರಿಸುತ್ತದೆ.

ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು, ‘ಮಹಿಳೆಯರಿಗೆ ಬರೀ ಮೀಸಲಾತಿ ಮಾತ್ರವಲ್ಲ, ಅವರು ಸಮಾನ ಸ್ಥಾನಮಾನ ಮತ್ತು ಸಮಾನ ಅವಕಾಶಕ್ಕೆ ಅರ್ಹರು. ಅವರ ಹೆಚ್ಚಿನ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದಲ್ಲಿ ಭರವಸೆಯನ್ನು ಬಲಪಡಿಸುತ್ತದೆ’ ಎಂದು ಇತ್ತೀಚೆಗಷ್ಟೇ ಅಭಿಪ್ರಾಯಪಟ್ಟಿದೆ. ಈ ಹೇಳಿಕೆಗೆ ಪೂರಕವೆಂಬಂತೆ, ಪುರುಷಕೇಂದ್ರಿತ ಚುನಾವಣಾ ರಾಜಕೀಯದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಸ್ತುತ, ಭಾರತದ ಮಹಿಳೆಯರು ತಮ್ಮ ರಾಜಕೀಯ ಅವಕಾಶಕ್ಕಾಗಿ ಕಾಯುತ್ತಿಲ್ಲ; ಬದಲಾಗಿ, ವಿವೇಕದಿಂದ ಮತದಾನ ಮಾಡುವ ಮೂಲಕ ದೇಶದ ರಾಜಕೀಯ ಚಿತ್ರಣವನ್ನು ಸದ್ದಿಲ್ಲದೇ ಬದಲಾಯಿಸುತ್ತಿದ್ದಾರೆ.

ADVERTISEMENT

ಚುನಾವಣಾ ವಿಶ್ಲೇಷಕರು ವಿವರಿಸುವಂತೆ, ಬಿಹಾರದ ಮಹಿಳೆಯರು ಸಾಂಪ್ರದಾಯಿಕ ರಾಜಕೀಯ ನಿರೀಕ್ಷೆಗಳನ್ನು ಹುಸಿಯಾಗಿಸಿದ ‘ಮೌನ ಕ್ರಾಂತಿಕಾರಿಗಳು’. 2005ರಲ್ಲಿ ನಿತೀಶ್ ಕುಮಾರ್ ಅವರ ಅಧಿಕಾರಾವಧಿಯಿಂದ ಪ್ರಾರಂಭಗೊಂಡ– ವಿದ್ಯಾರ್ಥಿನಿಯರಿಗೆ ಸೈಕಲ್, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ, ಉಚಿತ ಸಮವಸ್ತ್ರ, ಮುಂತಾದ ಕಲ್ಯಾಣ ಕಾರ್ಯಕ್ರಮಗಳು ಮಹಿಳಾ ಮತದಾರರಲ್ಲಿ ಆಳವಾದ ಸ್ವಾಭಿಮಾನ ಮತ್ತು ಸಬಲೀಕರಣದ ಪ್ರಜ್ಞೆಯನ್ನು ಬೆಳೆಸಿವೆ. ಇದಕ್ಕೆ ಪೂರಕವೆಂಬಂತೆ, 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿಯೂ, ಮಹಿಳೆಯರ ಮತದಾನವು ಪುರುಷರಿಗಿಂತ ಹೆಚ್ಚಾಗಿತ್ತು.

ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯು ಸಿದ್ಧಾಂತಕ್ಕಿಂತ ಹೆಚ್ಚಾಗಿ ಅವರ ದೈನಂದಿನ ಜೀವನದ ಅನುಭವದ ಮೇಲೆ ಸಾಮಾನ್ಯವಾಗಿ ನಿರ್ಧಾರಗೊಳ್ಳುತ್ತದೆ. ಹೆಣ್ಣುಮಕ್ಕಳಿಗೆ ಮನೆಯ ಗಡಿಯನ್ನು ದಾಟಿ ಶಾಲೆಗೆ ಹೋಗಲು ಪ್ರೋತ್ಸಾಹಿಸಿದಾಗ ಅಥವಾ ಗ್ರಾಮೀಣ ಮಹಿಳೆಯರಿಗೆ ನೇರ ನಗದು ವರ್ಗಾವಣೆಯ ಮೂಲಕ ತಮ್ಮ ಮನೆಯಲ್ಲಿ ಘನತೆಯನ್ನು ಪಡೆಯಲು ಸಹಾಯ ಮಾಡಿದಾಗ, ರಾಜಕೀಯ ಲೆಕ್ಕಾಚಾರಗಳು ಜಾತಿ ಮತ್ತು ಧರ್ಮದ ಸೀಮಿತ ಚೌಕಟ್ಟನ್ನು ಮೀರಿ ಸಮಾಜದ ಪರಿಕಲ್ಪನೆಯು ವಿಸ್ತಾರವಾಗಿ ಸಶಕ್ತಗೊಳ್ಳುತ್ತದೆ.

ಕರ್ನಾಟಕದ 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಮಹಿಳಾ ಮತದಾರರ ಪಾತ್ರ ಮಹತ್ವದ್ದಾಗಿತ್ತು. ಪಕ್ಷದ ಗ್ಯಾರಂಟಿ ಯೋಜನೆಗಳ ಭರವಸೆಗೆ ಮಹಿಳೆಯರು ಪೂರಕವಾಗಿ ಸ್ಪಂದಿಸಿದರು. ‘ಗೃಹಲಕ್ಷ್ಮಿ’, ‘ಸ್ತ್ರೀಶಕ್ತಿ’, ಮತ್ತು ‘ಗೃಹ ಜ್ಯೋತಿ’ಗಳಂತಹ ಸ್ತ್ರೀಪರ ಯೋಜನೆಗಳು ಭಾವನಾತ್ಮಕ ಮತ್ತು ಆರ್ಥಿಕ ಪರಿಣಾಮವನ್ನು ಉಂಟು ಮಾಡಿವೆ. ಇತ್ತೀಚೆಗೆ ಅನುಷ್ಠಾನಗೊಂಡ ತಿಂಗಳಿಗೊಂದು ವೇತನಸಹಿತ ಮುಟ್ಟಿನ ರಜೆ ನೀತಿ ಕೂಡ ಮಹಿಳೆಯರ ಮೆಚ್ಚುಗೆ ಗಳಿಸಿದೆ. ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಕೊಟ್ಟಂತಹ ಬಿಟ್ಟಿ ಭಾಗ್ಯಗಳಲ್ಲ. ಅವು ಮಹಿಳೆಯರ ಘನತೆಯನ್ನು ಹೆಚ್ಚಿಸಿವೆ, ಅಸಮಾನತೆಯನ್ನು ಕಡಿಮೆ ಮಾಡುವ ಕ್ರಮಗಳಾಗಿವೆ ಮತ್ತು ಮಹಿಳೆಯರ ಆತ್ಮವಿಶ್ವಾಸವನ್ನು ಪುನರ್ ಸ್ಥಾಪಿಸುವ ದಿಟ್ಟಹೆಜ್ಜೆಗಳಾಗಿವೆ. ಸಮೀಕ್ಷೆಗಳು ಹೇಳುವಂತೆ– ಸುಮಾರು ಶೇ 70ರಷ್ಟು ಮಹಿಳಾ ಫಲಾನುಭವಿಗಳು, ಗ್ಯಾರಂಟಿ ಯೋಜನೆಗಳು ತಮ್ಮ ಜೀವನವನ್ನು ಸಕಾರಾತ್ಮಕವಾಗಿ ಬದಲಾಯಿಸಿವೆ ಮತ್ತು ತಾವೀಗ ರಾಜಕೀಯ ವ್ಯವಸ್ಥೆಯಲ್ಲಿ ಪ್ರಬಲ ಶಕ್ತಿಯಾಗಿ ಅಂಗೀಕರಿಸಲ್ಪಟ್ಟಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಮಹಿಳೆಯರ ಸುರಕ್ಷತೆ, ಆರ್ಥಿಕ ಸ್ವಾತಂತ್ರ್ಯ ಮತ್ತು ಚಲನಶೀಲತೆಯನ್ನು ಗುರಿಯಾಗಿಸಿಕೊಂಡ ಕಲ್ಯಾಣ ಯೋಜನೆಗಳು ಚುನಾವಣಾ ದಿಕ್ಕನ್ನೇ ಬದಲಾಯಿಸುವ ಅಂಶಗಳಾಗಿ ಬದಲಾಗುತ್ತಿವೆ. ಮೊದಲನೆಯದಾಗಿ, ನೇರವಾಗಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ: ಮಧ್ಯವರ್ತಿ ಇಲ್ಲದ ಈ ಆರ್ಥಿಕ ಬೆಂಬಲವು ಮಹಿಳೆಯರನ್ನು ಸಶಕ್ತಗೊಳಿಸುತ್ತಿದೆ. ಉಚಿತ ಪ್ರಯಾಣ ಮತ್ತು ಅದಕ್ಕೆ ಸಂಬಂಧಿಸಿದ ಚಲನಶೀಲತೆಯಿಂದಾಗಿ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂರನೆಯದಾಗಿ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಂಬಲ. ಹೆಣ್ಣುಮಕ್ಕಳಿಗೆ ನೀಡುವ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳ ಯೋಜನೆಗಳಿಂದಾಗಿ ಬಡ ಗ್ರಾಮೀಣ ಕುಟುಂಬಗಳ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ.

ಬಿಹಾರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಅಳವಡಿಸಲಾಗಿರುವ ಮದ್ಯಪಾನ ನಿಯಂತ್ರಣದಂತಹ ನೀತಿ ಮತ್ತು ಸುರಕ್ಷತಾ ಕ್ರಮದ ಬೇಡಿಕೆಗಳು, ನೇರವಾಗಿ ಮಹಿಳಾ ಚಳವಳಿಗಳಿಂದ ಹೊರಹೊಮ್ಮಿದ ರಾಜಕೀಯ ನಿರ್ಧಾರಗಳಾಗಿವೆ. ಇಂತಹ ಕಠಿಣ ಸುರಕ್ಷತಾ ಕಾನೂನುಗಳು ಅಥವಾ ನಿಷೇಧದ ಭರವಸೆ ನೀಡಿದ ಪಕ್ಷಗಳು ಗಣನೀಯವಾಗಿ ಮಹಿಳೆಯರ ಬೆಂಬಲವನ್ನು ಗಳಿಸಿವೆ.

ಮಹಿಳೆಯರು ಮಹಿಳಾಪರ ಸೌಲಭ್ಯಗಳಿಗಾಗಿ ಮತ ಚಲಾಯಿಸುತ್ತಾರೆ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಅವರ ನಿರ್ಧಾರಗಳು ಬಹಳ ಸೂಕ್ಷ್ಮವಾಗಿರುತ್ತವೆ ಮತ್ತು ಪ್ರಾಯೋಗಿಕವಾಗಿರುತ್ತವೆ. ಅವರು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆ, ಕೌಟುಂಬಿಕ ಹಿಂಸಾಚಾರದ ನಿಯಂತ್ರಣ, ಆರ್ಥಿಕ ಸ್ವಾವಲಂಬನೆ, ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಕೌಟುಂಬಿಕ ಜವಾಬ್ದಾರಿಗಳಲ್ಲಿ ಲಿಂಗ ಸಮಾನತೆ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಯುತವಾಗಿ ಮತ ಚಲಾಯಿಸುತ್ತಾರೆ. ಮಹಿಳೆಯರ ರಾಜಕೀಯ ಪ್ರಜ್ಞೆಯು, ತಮ್ಮ ದೈನಂದಿನ ಜೀವನದ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಅವುಗಳನ್ನು ಸುಧಾರಿಸುವ ಪ್ರಾಯೋಗಿಕ, ಸ್ಪಷ್ಟ, ಸರಳ ಅಂಶಗಳನ್ನು ಒಳಗೊಂಡಿದೆ ಎನ್ನಬಹುದು. ಅವರಿಗೆ ನಮ್ಮ ಜನನಾಯಕರು ಮಾಡುವ ಸುದೀರ್ಘವಾದ ವರ್ಣರಂಜಿತವಾದ ಮೋಡಿಯ ಮಾತುಗಳ ಬದಲಾಗಿ, ಅವರ ದೈನಂದಿನ ಬದುಕನ್ನು ಸುಗಮ ಮತ್ತು ಸುರಕ್ಷಿತಗೊಳಿಸುವ ಪ್ರಾಯೋಗಿಕ ಕಾರ್ಯಯೋಜನೆಗಳು ಬೇಕಾಗಿವೆ.

2019ರಿಂದ ಚುನಾವಣಾ ಆಯೋಗದ ಅಂಕಿಅಂಶಗಳು ಹೇಳುವಂತೆ, ಪುರುಷರಿಗೆ ಹೋಲಿಸಿದರೆ ಮಹಿಳೆಯರ ಮತದಾನದಲ್ಲಿ ಸ್ಥಿರವಾದ ಏರಿಕೆ ಇದೆ. ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳ ಸಾಕಷ್ಟು ಕ್ಷೇತ್ರಗಳಲ್ಲಿ ಮಹಿಳೆಯರ ಮತದಾನದ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಈ ಅಂಶವು, ಮಹಿಳೆಯರ ಧ್ವನಿಯನ್ನು ಮತ್ತು ಅವರ ಆಶೋತ್ತರವನ್ನು ನಿರ್ಲಕ್ಷಿಸುವ ಪಕ್ಷಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎನ್ನಬಹುದು.

ದೇಶದಲ್ಲಿ ಮಹಿಳಾ ಮತದಾರರು ಚುನಾವಣಾ ರಾಜಕೀಯದ ಅಂಚಿನಿಂದ ಕೇಂದ್ರ ಸ್ಥಾನಕ್ಕೆ ಬಂದಿರುವುದಂತೂ ಸ್ಪಷ್ಟ. ಪುರುಷರಂತೆ ಹೆಚ್ಚಿನ ಸಂಖ್ಯೆಯಲ್ಲಿ ಟೆಲಿವಿಷನ್ ಚರ್ಚೆಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮ ನಿರೂಪಣೆಗಳಲ್ಲಿ ಮಹಿಳೆಯರು ಪ್ರಾಬಲ್ಯ ಸಾಧಿಸದಿರಬಹುದು. ಆದರೆ, ಅವರ ಪ್ರಭಾವವು ಸದ್ದಿಲ್ಲದೆ ಚುನಾವಣಾ ಫಲಿತಾಂಶಗಳನ್ನು ಮರುರೂಪಿಸುತ್ತಿದೆ. ಈ ಬದಲಾವಣೆಯು ರಚನಾತ್ಮಕವಾಗಿದೆ, ದೀರ್ಘಕಾಲಿಕವಾದದ್ದಾಗಿದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವಂತಹದ್ದಾಗಿದೆ. ಲಿಂಗ ಸಮಾನತೆಯು ಮಹಿಳೆಯರಿಗೆ ನೀಡುವ ಒಂದು ರಿಯಾಯಿತಿಯಲ್ಲ; ಬದಲಾಗಿ, ಅದು ಅವರ ಹಕ್ಕು ಎಂಬ ಸುಪ್ರೀಂ ಕೋರ್ಟ್‌ನ  ಅಭಿಪ್ರಾಯವು ಈ ರೂಪಾಂತರದ ಚೈತನ್ಯವನ್ನು ಸೆರೆಹಿಡಿಯುತ್ತದೆ.

ವರ್ತಮಾನದ ಭಾರತದಲ್ಲಿ ರಾಜಕೀಯ ಅಧಿಕಾರದ ಹಾದಿಯು ಮಹಿಳೆಯರ ಆಶೋತ್ತರಗಳ ಮೂಲಕ ಹಾದುಹೋಗುತ್ತಿದೆ. ರಾಜಕೀಯ ಪಕ್ಷಗಳು ದೇಶದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಮಹಿಳೆಯರನ್ನು ಕಡೆಗಣಿಸುವಂತಿಲ್ಲ. ಅವರನ್ನು ಸ್ವಾಭಿಮಾನದ, ಸಮಾನರಾದ, ಪ್ರಜ್ಞಾಪೂರ್ವಕ ನಾಗರಿಕರು ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವವರು ಎಂದು ಗುರುತಿಸುವುದನ್ನು ಮುಂದುವರಿಸುವವರೆಗೆ, ಭಾರತದ ಪ್ರಜಾಪ್ರಭುತ್ವವು ಸದೃಢವಾಗಿರುತ್ತದೆ. ಸಾಮಾನ್ಯವಾಗಿ, ನಮ್ಮ ಚುನಾವಣೆಗಳಲ್ಲಿ ಬಹುಚರ್ಚಿತವಾಗುವ ಜಾತಿ ಮತ್ತು ಧರ್ಮ, ಮಹಿಳೆಯರ ಲೋಕದಲ್ಲಿ ಪ್ರಮುಖ ಅಂಶಗಳಲ್ಲ. ಇವೆಲ್ಲಾ ಪುರುಷಲೋಕದ ಪ್ರತಿಷ್ಠೆಯ ಅನಗತ್ಯ ಸೃಷ್ಟಿಗಳು. ಮಹಿಳೆಯರು ಇದನ್ನು ಯಾವತ್ತೋ ಮೀರಿದ್ದಾರೆ. ಈ ಸೂಕ್ಷ್ಮ ಅಂಶವನ್ನು ಅಂಬೇಡ್ಕರ್ ಮನಗಂಡಿದ್ದರಿಂದ, ಅವರು ಮಹಿಳಾ ಸಬಲೀಕರಣಕ್ಕೆ ಮಹತ್ವ ನೀಡಿದ್ದರು.

ಮಹಿಳೆಯರು ಪ್ರಾಯೋಗಿಕವಾಗಿ ಬದುಕುವವರು. ಅವರಿಗೆ ದೈನಂದಿನ ಬದುಕು ಸುಧಾರಣೆಯಾಗಬೇಕು. ಇದು ಮೂಲತಃ ಎಲ್ಲ ಜನಸಾಮಾನ್ಯರ ಅಳಲು ಮತ್ತು ಆಶಯವೂ ಹೌದು. ಹಾಗಾಗಿ, ಮಹಿಳೆಯರ ಈ ಸದ್ದಿಲ್ಲದ ರಾಜಕೀಯ ಕ್ರಾಂತಿಯು, ಮುಂದಿನ ದಿನಗಳಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾತಿ, ಧರ್ಮ ಮತ್ತು ಲಿಂಗ ಸಮಾನತೆಯನ್ನು ರೂಪಿಸುವ ಒಂದು ಅಭೂತಪೂರ್ವ ವಿದ್ಯಮಾನದತ್ತ ಕೊಂಡೊಯ್ಯುವ ವಿಶಿಷ್ಟ ಸಾಧ್ಯತೆಯನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.