
‘ಮೋದಿಮಾಮಾರು ಏಷ್ಯಾ ಖಂಡದಲ್ಲಿ ಮೊದಲನೇ ಸಲ ಯಶಸ್ವಿಯಾಗಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ ನಡೆಸಿದ್ರು! ಆವಾಗ ಯುಪಿಎ ಅಧಿಕಾರದಲ್ಲಿದ್ದಾಗ ಇಂಥದ್ದು ನಡೆಸೇ ಇರಲಿಲ್ಲ’ ಎಂದು ಬೆಕ್ಕಣ್ಣ ಮೀಸೆ ತಿರುವಿ, ಅಭಿಮಾನದಿಂದ ಉಲಿಯಿತು.
‘ಮಂಗ್ಯಾನಂಥವನೇ... ಆವಾಗ ಈ ಎಐ ಇರಲಿಲ್ಲ ಕಣಲೇ. ಈಗ ಎಲ್ಲಾ ಕಡಿಗಿ ಎಐ ಗಾಳಿ ಬೀಸಕ್ಕೆ ಶುರುವಾಗಿದ್ದು’ ಎಂದೆ.
‘ಆವಾಗ್ಲೇ ಎಐ ಗಾಳಿ ಬೀಸಿದ್ರೂ ಆಗಿನವರು ಏನೂ ಮಾಡ್ತಿರಲಿಲ್ಲ ಬಿಡು’ ಎಂದು ಹಂಗಿಸಿತು.
‘ಈಗಲೂ ಎಂಥಾ ಎಐ ಗಾಳಿಗೂ ದೆಹಲಿಯ ಮಾಲಿನ್ಯದ ಗಾಳಿಯನ್ನ ಕಡಿಮೆ ಮಾಡಕ್ಕೆ ಆಗಿಲ್ಲ. ಭಾರತ ಮಂಟಪದಲ್ಲಿ ಎಐ ಗಾಳಿ... ಹೊರಗೆ ಮಾಲಿನ್ಯದ ಗಾಳಿ!’ ನಾನು ಅಣಕಿಸಿದೆ.
‘ನೀ ಎಲ್ಲಾದಕ್ಕೆ ಕೊಂಕು ನುಡೀಬ್ಯಾಡ. ಈಗ ಜಾಗತಿಕ ಎಐ ನಕಾಶೆಯಲ್ಲಿ ಇಂಡಿಯಾದ ಹೆಸರು ಚಿನ್ನದ ಅಕ್ಷರದಲ್ಲಿ ಬರೆದಂಗೆ ಆಗೈತೆ’ ಎಂದಿತು.
‘ಇಂಗ್ಲೆಂಡಿನ ಮಾಜಿ ಪ್ರಧಾನಿ ರಿಷಿ ಸುನಕ್ ಹೇಳಿದನಲ್ಲ, ಎಐ ಎಲ್ಲಾ ಕೆಲಸ ಮಾಡಬೌದು, ಆದರೆ ದೆಹಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಕ್ಕೇ ಆಗಲ್ಲ ಅಂತ... ಈ ವಿಐಪಿಗಳು ಭಾರತ ಮಂಟಪಕ್ಕೆ ಹೋಗಿ, ವಾಪಸು ಬರೂ ಮುಂದ, ರಸ್ತೆ ಬಂದ್ ಮಾಡಿ, ಶ್ರೀಸಾಮಾನ್ಯರು ಆರೇಳು ಕಿಮೀ ನಡಕಂಡು ಹೋಗೂ ಹಂಗೆ ಮಾಡಿದ್ರು, ಗೊತೈತಿಲ್ಲೋ’ ಎಂದೆ ಸಿಟ್ಟಿನಿಂದ.
‘ನಡಿಯೂದು ಆರೋಗ್ಯಕ್ಕೆ ಒಳ್ಳೇದೇ!’ ಬೆಕ್ಕಣ್ಣ ಉಡಾಫೆಯಿಂದ ಹೇಳಿತು.
‘ಗಲ್ಗೋಟಿಯ ವಿವಿಯವ್ರು ಚೀನೀ ರೊಬಾಟ್ ನಾಯಿ ತಮ್ಮದು ಅಂತ ಹೇಳಿ ಎಷ್ಟು ನಗೆಪಾಟಲಾಯಿತು. ಅಡಿಕೆಗೆ ಹೋದ ಮಾನ ಆನೆಗೂ ಬರಂಗಿಲ್ಲಲೇ’
ಎಂದೆ.
‘ಅಲ್ಲಿ ಸದ್ದು ಮಾಡಿದ್ದು ನಕಲಿ ಚೀನೀ ರೊಬಾಟ್ ನಾಯಿ... ಇಲ್ಲಿ ಕೈಪಕ್ಷದವ್ರು ನಾಯಿ ಮತ್ತು ನಾಯಿ ಬಾಲದ ಬಗ್ಗೆ ಚರ್ಚೆ ನಡೆಸ್ಯಾರೆ. ಪಾಪದ ನಾಯಿಗಳು! ಸದ್ಯ... ಯಾರೂ ಬೆಕ್ಕಿನ ವಿಚಾರಕ್ಕೆ ಬಂದಿಲ್ಲ!’ ಎಂದು ಮುಸಿಮುಸಿ ನಕ್ಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.