ADVERTISEMENT

ಅಮರಾವತಿಗೂ ಬೇಕಂತೆ!

ಸುಮಂಗಲಾ
Published 19 ಡಿಸೆಂಬರ್ 2018, 19:34 IST
Last Updated 19 ಡಿಸೆಂಬರ್ 2018, 19:34 IST
   

ಇಂದ್ರನ ಅಮರಾವತಿಯಲ್ಲೂ ಪರಿಸ್ಥಿತಿ ಹದ ಗೆಟ್ಟಿತ್ತು. ಇತ್ತೀಚಿಗೆ ವರುಣನೂ ‘ಮನಸುಖರಾಯ’ನಾಗಿದ್ದರಿಂದ ಬೇಕಾದಾಗ ಮಳೆಯಾಗದೆ ದೇವಗಂಗೆ ಡಿಸೆಂಬರಿನಲ್ಲಿಯೇ ನೆಲ ಕಚ್ಚಿದ್ದಳು. ಇದ್ದಬದ್ದ ದೇವಸ್ಥಾನ, ಮಠ, ಮಸೀದಿ, ಚರ್ಚು ಗಳಿಗೆ ನಡೆದುಕೊಳ್ಳುವ ಭಕ್ತಾದಿಗಳು ನೇರ ಸ್ವರ್ಗಕ್ಕೆ ‘ವೀಸಾ’ ತೆಗೆದುಕೊಳ್ಳುವುದರಿಂದ, ಅಲ್ಲಿಯೂ ಜನಸಂಖ್ಯೆ ಮಿತಿಮೀರಿತ್ತು. ಹೊಸ ಮಹಲುಗಳಿಗೆ ವಿದ್ಯುತ್ ಪೂರೈಸಿ ಇಂದ್ರನ ಅಧಿಕಾರಿಗಳು ಸುಸ್ತಾಗಿದ್ದರು. ಬರಿಯ ಜಲವಿದ್ಯುತ್ ನಂಬಿ ಕೊಂಡರೆ ‘ವಿಕಾಸ’ವಾಗುವುದಾದರೂ ಹೇಗೆ?

‘ಚಿಂತೆ ಬಿಡು ದೊರೆಯೇ... ನಾವೂ ನಿರ್ಮಿಸೋಣ ಅಣುವಿದ್ಯುತ್ ಸ್ಥಾವರವ...’ ಇಂದ್ರನ ಒಡ್ಡೋಲಗದಲ್ಲಿ ಆಸೀನರಾಗಿದ್ದ ಹತ್ತಾರು ಅಣುವಿಜ್ಞಾನಿಗಳು, ಅಧಿಕಾರಿಗಳು, ಅಣುಸಮರ್ಥಕರು ಹಾಡಿದರು. ಚಿತ್ರಗುಪ್ತನ ಪ್ರಮಾದದಿಂದ, ತಪ್ಪಿ ಸ್ವರ್ಗ ಸೇರಿದ್ದ ನಾಲ್ಕಾರು ಪರಿಸರವಾದಿಗಳು ಮೂಲೆಯಿಂದ ಜಿಗಿದು ಕೂತರು. ‘ಸ್ವರ್ಗವನ್ನೂ ವಿಕಿರಣಗೊಳಿಸುವುದೇ... ಸ್ಥಾವರದ ಹವಿಸ್ಸಿಗೆ ಸುರಿಯುವುದು ಗೋಘೃತವೆಂದುಕೊಂಡೆಯಾ (ಮುಗ್ಧ!) ಇಂದ್ರನೇ... ಅದು ಯುರೇನಿಯಂ ಎಂಬ ವಿಕಿರಣಧಾತುವು... ಬೇಡವೇ ಬೇಡ ಅಣು
ವಿದ್ಯುತ್...’ ಪರಿಸರವಾದಿಗಳು ಹಲುಬತೊಡಗಿದ್ದೇ ‘ಅಣುಪರಾಕುದಾರರ’ ಪಿತ್ತ ನೆತ್ತಿಗೇರಿತು.

‘(ಬಾಯಿ)ಮುಚ್ಕಂಡು ಕುಂತ್ಕಳ್ರಲೇ’ ಎಂದಬ್ಬರಿಸಿದವರೇ, ಇಂದ್ರನತ್ತ ತಿರುಗಿ ‘(ರೇಷ್ಮೆ)ಎಳೆಯನ್ನು ವಿಷದ ಹಾವೆಂದು ಹೆದರಿಸುತ್ತ, ಅಮಾಯಕರನ್ನು ದಿಕ್ಕೆಡಿಸುವ ಈ ಪರಿಸರವಾದಿಗಳನ್ನು ಈಗಿಂದೀಗಲೇ ನರಕಕ್ಕೆ ದಬ್ಬಿ ಪ್ರಭುವೇ. ಇವರ ಮಾತು ಕೇಳಿದರೆ ನಾವು ಶಿಲಾಯುಗಕ್ಕೆ ಬೀಳುವೆವು’ ಎಂದು ಮತ್ತಷ್ಟು ಅರಚಿದರು. ‘ಮತ್ತೆ ವಿಕಿರಣ?’ ಇಂದ್ರನ ಪ್ರಶ್ನೆಗೆ ‘ಕೈಗಾ ನೋಡಿ ದೊರೆಯೇ... ಈ ಪರಿಸರವಾದಿಗಳ ವಿಕಿರಣವೆಲ್ಲ ಕಟ್ಟುಕಥೆ’ ಒಬ್ಬ ಅಣುಪರಾಕುದಾರ ಹೇಳಿದ. ‘ತಂತ್ರಜ್ಞಾನ?’ ಇಂದ್ರ ಚುಟುಕಾಗಿ ಕೇಳಿದ. ‘ಹ್ಹಹ್ಹಾ... ನಮ್ಮ ರಷ್ಯಾ ಸಹೋದರರು ಇದ್ದಾರಲ್ಲ...’ ಇನ್ನೊಬ್ಬ ಉಲಿದ. ‘ಏನಿದೇನಿದು... ಆ ‘ಎಡ’ಬಿಡಂಗಿಗಳಿಂದಲೇ...!’ ಇಂದ್ರ ಗಾಬರಿಯಾದ.

ADVERTISEMENT

‘ಅಣು ತಂತ್ರಜ್ಞಾನ ಪರಮಪವಿತ್ರ... ಅದಕ್ಕೆ ಎಡ– ಬಲವೆಂಬ ಭೇದವಿಲ್ಲ!’

‘ಅದೇನೋ ಬೂದಿ. ಅದೂ ವಿಕಿರಣವಂತೆ. ಅದನ್ನೆಲ್ಲಿ ಹೂಳುವುದು?’ ಇಂದ್ರ ಪ್ರಶ್ನೆ ಎಸೆದ. ಅಣುಪರಾಕುದಾರರು ನಿರುಮ್ಮಳವಾಗಿ ಹೇಳಿದರು... ‘ಮತ್ತೆಲ್ಲಿ ಪ್ರಭುವೇ... ಪುಣ್ಯಪಾವನ ಭರತಖಂಡದ ಯಾವುದೋ ಮೂಲೆಯಲ್ಲಿ ಹೂತರಾಯ್ತು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.