ADVERTISEMENT

ಚುರುಮುರಿ: ಹಳ್ಳಿ ಅಂದ್ರೆ ಭಯ!

ಬಿ.ಎನ್.ಮಲ್ಲೇಶ್
Published 17 ಡಿಸೆಂಬರ್ 2020, 19:45 IST
Last Updated 17 ಡಿಸೆಂಬರ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಯಾರ್‍ರೀ ಡಿಜೆ.ಹಳ್ಳಿ, ಕೆಜಿ.ಹಳ್ಳಿ, ಕೋಡಿಹಳ್ಳಿ, ಆರ್‍ಜಿ.ಹಳ್ಳಿ ರೈಟ್ ರೈಟ್...’ ಎಂದ ಗುಡ್ಡೆ.

ದುಬ್ಬೀರನಿಗೆ ನಗು. ‘ಏನಲೆ ಬರೀ ಹಳ್ಳಿಗಷ್ಟೇ ನಿನ್ ಬಸ್ ಹೋಗೋದಾ? ಸಿಟಿಗಿಲ್ವಾ?’ ಎಂದ.

‘ಯಾಕೋ ಇತ್ತೀಚೆಗೆ ‘ಹಳ್ಳಿ’ ಅಂದ್ರೆ ಸಾಕು ಹೆದ್ರಿಕಿ ಆಗ್ತದಪ. ನಂ ರಾಜಾಹುಲಿ ಸಾಹೇಬ್ರೂ ಹಳ್ಳಿ ಹೆಸರೇಳಿದ್ರೆ ಸಾಕು ಬೆಚ್ಚಿ ಬೀಳ್ತದಾರಂತೆ. ಅದಿರ‍್ಲಿ, ತೆಪರ ಎಲ್ಲಿ ಕಾಣ್ತಿಲ್ಲ?’ ಪರ್ಮೇಶಿ ಕೇಳಿದ.

ADVERTISEMENT

‘ಅವನು ಮಂಡಕ್ಕಿ ಮೆಣ್ಸಿನ್‍ಕಾಯಿ ತರಾಕೆ ಹೋಗಿದಾನೆ. ಹಳ್ಳಿ ಎಲೆಕ್ಷನ್ ಹೆಂಗೈತಲೆ ಗುಡ್ಡೆ, ಗ್ರಾಮ ಪಂಚಾತಿ ಸೀಟು ಹರಾಜಾಗ್ತದಾವಂತೆ?’

‘ಹ್ಞೂಂನೋ ಮಾರಾಯ, ಐವತ್ ಲಕ್ಷದತಂಕ ಹೋಗೇತಂತೆ ರೇಟು...’

‘ಮತ್ತೆ ಎಲ್ಲವೂ ದುಬಾರಿ ಆದಂಗೆ ಇದೂ ಆಗೇತಿ ಬಿಡ್ರಲೆ, ವೋಟು ಹಾಕೋರು ಈಗ ಎರಡು ಸಾವಿರಕ್ಕೆ ಕಮ್ಮಿ ಮುಟ್ತಿಲ್ಲ ಗೊತ್ತಾ?’ ಕೊಟ್ರೇಶಿ ಸಮರ್ಥಿಸಿಕೊಂಡ.

‘ಅಲ್ಲ, ಈ ಜುಜುಬಿ ಗ್ರಾಮ ಪಂಚಾತಿನಾಗೆ ಅಂಥದೇನೇತಲೆ ಕೊಟ್ರ?’ ದುಬ್ಬೀರನಿಗೆ ಆಶ್ಚರ್ಯ.

‘ನಿನ್ತೆಲಿ, ಡೆಲ್ಲಿ ಗೆಲ್ಲಬಹುದೋ ಮಾರಾಯ ಹಳ್ಳಿ ಗೆಲ್ಲೋದು ಕಷ್ಟ. ಅದು ಬಿಡು, ಎಲ್ಲಿ ತೆಪರ ಇನ್ನೂ ಬರ್‍ಲೇ ಇಲ್ಲ?’ ಎಂದ.

‘ಬಿಸಿ ಬಿಸಿ ತರ್ತದಾನೆ ಅನ್ಸುತ್ತೆ ತಡ್ಕಾ’ ಎಂದ ದುಬ್ಬೀರ, ‘ಅಲ್ಲೋ ಗುಡ್ಡೆ ಗೌರ್ಮೆಂಟ್ ಬಸ್ ನೌಕರರು ಗೌರ್ಮೆಂಟ್ ನೌಕರರಲ್ಲಂತೆ? ವಿಚಿತ್ರ ಅಲ್ವ?’ ಅಂದ.

ಅಷ್ಟರಲ್ಲಿ ತೆಪರೇಸಿ ಪ್ರತ್ಯಕ್ಷನಾದ. ಗುಡ್ಡೆಗೆ ಸಿಟ್ಟು ಬಂತು ‘ಯಾಕಲೆ ಇಷ್ಟ್ ಲೇಟು? ನಾವು ಮಂಡಕ್ಕಿ ತಿನ್ನೋದು ಯಾವಾಗ?’ ಎಂದು ರೇಗಿದ.

‘ಅಯ್ಯೋ ಬರೋ ದಾರೀಲಿ ದೊಡ್ಡ ಹೊಡೆದಾಟ... ನಾನು ಕೆಟ್ಟಾ ಕೊಳಕ ಬೈದು ಜಗಳ ಬಿಡಿಸಿ ಬಂದೆ...’ ತೆಪರೇಸಿ ವರದಿ ಒಪ್ಪಿಸಿದ.

‘ಹೌದಾ? ಏನಂತ ಬೈದೆ?’

‘ಇದೇನು ವಿಧಾನ ಪರಿಷತ್ತು ಅಂದ್ಕಂಡಿದೀರೇನ್ರಲೆ, ನಾಚ್ಕೆ, ಮಾನ, ಮರ್ಯಾದೆ ಇಲ್ವ ಅಂತ ಬೈದೆ’ ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.