ADVERTISEMENT

ಆಲಿಸು ಕದ್ದಾಲಿಸು

ಗುರು ಪಿ.ಎಸ್‌
Published 14 ಆಗಸ್ಟ್ 2019, 20:15 IST
Last Updated 14 ಆಗಸ್ಟ್ 2019, 20:15 IST
   

‘ಪ್ರಾಣಕಾಂತ, ಏನು ಆಲಿಸುತ್ತಿರುವಿರಿ?’

‘ಕದ್ದಾಲಿಸುತ್ತಿರುವೆ ಪ್ರಿಯೆ’.

‘ಛೇ, ಇದೇನಿದು ಪರಮಾತ್ಮ, ನೀವು ಕದ್ದಾಲಿಸುವುದೇ!’

ADVERTISEMENT

‘ಅಂತರಂಗ ಅರಿಯಬೇಕೆಂದರೆ ಕದ್ದಾಲಿಸಲೇಬೇಕು ದೇವಿ’.

‘ಹೌದೇ... ಎಲ್ಲಿ, ಸ್ಪೀಕರ್ ಆನ್ ಮಾಡಿ. ನಾನೂ ಕೇಳುವೆ’ ಕಳ್ಳಗಿವಿಯಾದಳು ಪಾರ್ವತಿ ದೇವಿ.

‘ಮನೆಯಲ್ಲೇ ನೆಮ್ಮದಿಯಾಗಿರೋಣ ಅಂದ್ರೆ ಈ ಮೀಡಿಯಾದವ್ರು ಬಿಡಲ್ಲ. ಜನರ ಹತ್ರ ಹೋದ್ರೆ, ಈಗ ಬಂದ್ಯಾ, ಥೂ ನಿನ್ನ ಜನ್ಮಕ್ಕೆ ಅಂತಾ ಬೈತಾರೆ... ನೋಡ್ಲಾ ಶಿಷ್ಯಾ... ತೋಟದ ಮುಂದೆನೇ ಮೂರಡಿಯಷ್ಟು ಗುಂಡಿ ತೋಡಿ ನೀರು ಬಿಡು. ಅದರಲ್ಲೇ ತೆಪ್ಪ ಬಿಟ್ಟು ಫೋಟೊ ತೆಗೆಸ್ಕೋತೀನಿ... ಎಲ್ರೂ
ನೀರೇಣುಕಾಚಾರ್ಯಂಗೆ ಜೈ ಅನ್ರಿ’ ಕರ್ಕಶ ಧ್ವನಿಯೊಂದು ಕೇಳಿತು. ಬೇರೆ ಕರೆಗೆ ಕನೆಕ್ಟ್ ಮಾಡಿದ್ರು ಶಿವದೇವ.

‘ನಾನು ಸಣ್ಣೋಳಿದ್ದಾಗ, ಎಕ್ಸಿಬಿಷನ್‌ನೋರು ನನ್ನ ಥರಾನೇ ಪ್ಲಾಸ್ಟಿಕ್ ಮೊಸಳೇನ ಮಾಡಿಟ್ಟಿದ್ರು... ಒಬ್ಬನು ಬಂದವನೇ ಅದನ್ನ ತಗೊಂಡ್ ಹೋಗಿ, ಸ್ವಲ್ಪ ಹೊತ್ತಾದ್ ಮೇಲೆ ತಂದಿಟ್ಟಿದ್ದ. ಆದ್ರೆ, ಈಗ ನೋಡಿದ್ರೆ ನನ್ನನ್ನೇ ಒಯ್ದಿದ್ದೆ ಅಂತಾ ಹೇಳ್ತಿದಾನೆ’ ಮಗಳ ಹತ್ರ ಹೇಳ್ತು ತಾಯಿ ಮೊಸಳೆ.

‘ದೇವ, ಆ ಮೊಸಳೆ ಮಾತಾಡ್ತಿರೋದು ನಮ್ಮ ಇಂದ್ರನ ಬಗ್ಗೆಯೇ...’

‘ಅಲ್ಲಲ್ಲ, ಭೂಲೋಕದ ನರೇಂದ್ರನ ಬಗ್ಗೆ’.

‘ಇವರದೆಲ್ಲ ಬೇಡ, ಆ ಸಂತ್ರಸ್ತನ ಮಾತು ಆಲಿಸೋಣ ದೇವಿ...’

‘ಆ ಶಿವನಿಗೆ ಪಾರ್ವತಿಗಿಂತ ಗಂಗೆ ಮೇಲೆಯೇ ಪ್ರೀತಿ ಜಾಸ್ತಿ. ತಲೆ ಮೇಲೆ ಹೊತ್ಕೊಂಡು ಕುಣೀತಾನೆ. ಆಯಮ್ಮ ಖುಷಿಗೆ ಯದ್ವಾತದ್ವಾ ಸುರೀತಾಳೆ, ನಮ್ಮ ಕಣ್ಣಲ್ಲಿ ಹೀಗೆ ನೀರು ಸುರಿಸ್ತಾಳೆ...’

ಸ್ಪೀಕರ್ ಆಫ್ ಮಾಡಿ, ಸೈಲೆಂಟ್ ಮೋಡ್‌ಗೆ ಜಾರಿದ ಪರಮಾತ್ಮ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.