‘ಲೇ ತೆಪರ, ಅದೇನೋ ಡೀಪ್‌ಫೇಕ್ ಅಂತ ಸುದ್ದಿ ಹೊಂಟೇತಲ್ಲ, ಏನಲೆ ಅದು?’ ದುಬ್ಬೀರ ಕೇಳಿದ.
‘ಅದಾ? ಬ್ಯಾಡ ಬಿಡಪ, ಹೆಣ್ಮಕ್ಳ ವಿಷ್ಯ ಹೆಂಗೆಂಗೋ ಮಾತಾಡಂಗಿಲ್ಲ. ಆಮೇಲೆ ಈ ಮಂಜಮ್ಮ ಹಿಡ್ಕಂಡ್ ಒದ್ರೆ ಬಿಡಿಸ್ಕಳಾರು ಯಾರು...’ ತೆಪರೇಸಿ ತೆಲಿ ಒಗೆದ.
‘ಆಹಾ ಮಳ್ಳ, ಪರ್ವಾಗಿಲ್ಲ ಅದೇನ್ ಹೇಳು’ ಮಂಜಮ್ಮ ಪರ್ಮಿಶನ್ ಕೊಟ್ಟಳು.
‘ಅದೂ ಡೀಪ್ ಅಂದ್ರೆ ಒಂಥರ ಜಾದೂ ಇದ್ದಂಗೆ. ಇರೋದನ್ನ ಇಲ್ಲದಂಗೆ ಮಾಯ ಮಾಡಿಬಿಡೋದು. ಫೇಕ್ ಅಂದ್ರೆ ಯಾರದೋ ಫೋಟೊ ಜತಿಗೆ ಇನ್ಯಾರದೋ ಫೋಟೊ ಜೋಡಿಸಿಬಿಡೋದು’.
‘ಹ್ಞಾಂ... ಕರೆಕ್ಟ್, ನಮ್ ಕೊಟ್ರ ಒಂದ್ಸಲ ಮೋದಿ ಸಾಹೇಬ್ರು ತನ್ನ ಹೆಗಲ ಮೇಲೆ ಕೈ ಹಾಕಿ ಫೋಟೊ ಹೊಡೆಸ್ಕಂಡಂಗೆ ಒಂದ್ ಫೋಟೊ ತಂದಿದ್ದ...’ ಮಂಜಮ್ಮ ನೆನಪಿಸಿಕೊಂಡಳು.
‘ಈ ಫೋಟೊ, ವಿಡಿಯೊ ಎಲ್ಲ ತಮಗೆ ಬೇಕಾದಂಗೆ ತಿರುಚೋದ್ನ ಡೀಪ್‌ಫೇಕ್ ಅಂತಾರೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಲ್ತೋರಿಗೆ ಇದು ಬಾಳ ಸುಲಭ’ ತೆಪರೇಸಿ ವಿವರಿಸಿದ.
‘ಅಯ್ಯೋ ಹೌದಾ? ನನ್ ಮಗ ಈಗ ಅದ್ನೇ ಓದಾಕೆ ಹೋಗಿರಾದು...’ ಕೊಟ್ರನಿಗೆ ಗಾಬರಿಯಾಯಿತು.
‘ಲೇಯ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂದ್ರೆ ಕೃತಕ ಬುದ್ಧಿಮತ್ತೆ ಅಂತ. ಅಲ್ಲಿ ಇಂಥದ್ನೆಲ್ಲ ಕಲ್ಸಲ್ಲ’ ಪರ್ಮೇಶಿ ವಾದಿಸಿದ.
‘ಕೃತಕ ಬುದ್ಧಿ ಅಲ್ಲ, ವಿಪರೀತ ಬುದ್ಧಿ ಅನ್ನು, ಒಬ್ಬರ ತೆಲಿ ತೆಗೆದು ಇನ್ನೊಬ್ರಿಗೆ ಜೋಡ್ಸೋದು. ಈಗ ಮಂಜಮ್ಮನ ತೆಲಿ ತೆಗೆದು...’
ಗುಡ್ಡೆ ಮಾತನ್ನ ಅರ್ಧಕ್ಕೇ ತಡೆದ ಮಂಜಮ್ಮ, ‘ಲೇಯ್, ನನ್ ತೆಲಿ ತಂಟೆಗೆ ಬರ್ಬೇಡ, ಬೇಕಾದ್ರೆ ಆ ಕೊಟ್ರನ ತೆಲಿ ತೆಗಿ’ ಎಂದಳು.
‘ನೋ ಯೂಸ್’ ಎಂದ ಗುಡ್ಡೆ.
‘ಯಾಕೆ?’
‘ಕೊಟ್ರನಿಗೆ ತೆಲಿ ಇದ್ರೆ ತಾನೇ ತೆಗಿಯಾಕೆ?...’
ಗುಡ್ಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.