
‘ಏನ್ರಪ್ಪಾ, ಎಲ್ಲಾ ಕಡೆ ಪರೀಕ್ಷಾ ಕಾವು ರಾಚ್ತಿದೆ. ಚಿಲ್ಟಾರಿಗಳಿಂದ ಹಿಡ್ದು ದೊಡ್ಡೋರ್‌ಗಂಟ ಎಲ್ರಿಗೂ ಪರೀಕ್ಷಾ ಜ್ವರ ಅಂಟ್ಕಂಡದೆ. ಮೊದ್ಲೇ ಮನೇಲಿ ಬಾಯ್ ಬಿಡಂಗಿಲ್ಲ, ಈಗಂತೂ ತುಟಿ ಹೊಲ್ಕಂಡಿರಬೇಕು’ ಎಂದ ಗುದ್ಲಿಂಗ ಹರಟೆಕಟ್ಟೇಲಿ!
‘ನಮ್ ರಾಜಕೀಯದೋರ‍್ಗೂ ಬಿಟ್ ಬಿಟ್ ಪರೀಕ್ಷೆ ಬತ್ತೈತೆ, ಒಬ್ರು ಮೇಲೊಬ್ರು ನಮ್ ಸಿಎಂ ಸಾಹೇಬ್ರುಗೆ ಸತ್ವಪರೀಕ್ಷೆ, ಅಗ್ನಿಪರೀಕ್ಷೆ ಒಡ್ತಾನೇ ಅವ್ರೆ’ ಎಂದ ಮಾಲಿಂಗ.
‘ಸಾರಿಗೆದು ಅರಿಯರ್ಸ್ ಪರೀಕ್ಷೆ ಮುಗಿದಂಗಾಯ್ತಲ್ಲ. ಜೆಸ್ಟ್ ಪಾಸಾಗಿ ಉಸ್ ಅಂತ ಉಸುರ್ ಬಿಡ್ತಾವ್ರೆ’ ಎಂದ ಕಲ್ಲೇಶಿ.
‘ಪರೀಕ್ಷೆ ಇನ್ನೂ ಮುಗಿದಿಲ್ಲಪ್ಪ, ಅದು ಕ್ಯಾರಿಓವರ್! ಪ್ರಿಲಿಮಿನರಿ ಆಗೈತೆ, ಮೈನ್ ಎಕ್ಸಾಮು ಮುಂದಕ್ಕೆ ಹಾಕವ್ರೆ ಅಷ್ಟೇ. ಅದರ ಹಿಂದೇನೆ ಗುತ್ತಿಗೆದಾರ‍್ರು ಬಿಲ್ ಎಕ್ಸಾಮ್ ಕುತ್ತಿಗೆಗೇ ಬಂದೈತಲ್ಲ’.
‘ಅದಕ್ಕೆ ಡಿಸಿಎಂ ಸಾಹೇಬ್ರು ಕಾಪಿಚಿಟ್ ಪರೀಕ್ಷೆಗೆಲ್ಲ ಕೇರ್ ಮಾಡಕಿಲ್ಲ ಅಂತ ಗುಡುಗವ್ರಲ್ಲ’.
‘ವೂ ಕಣ್ಲಾ! ಅವರ‍್ಗೆ ಇದೆಲ್ಲಾ ಯಾವ ಮಹಾ ಹೇಳು? ಅವರಂತೂ ಒಂದು ವರ್ಷದಿಂದ ಎಕ್ಸಾಮ್ ಫೇಸ್ ಮಾಡ್ತಾವ್ರೆ. ರಿಟನ್ ಟೆಸ್ಟು, ಗ್ರೂಪ್ ಡಿಸ್ಕಶನ್ನು, ಇಂಟ್ರವ್ಯೂ ಎಲ್ಲಾ ಆದ್ರೂ ಕೆಪಿಎಸ್ಸಿ ತರ ರಿಸಲ್ಟ್ ಮಾತ್ರ ಸಿಕ್ತಿಲ್ಲ’.
‘ಸಿಎಂಗೂ ಬಜೆಟ್ ಪರೀಕ್ಷೆ ಜೊತೆಗೆ ವಚನಪಾಲನೆ ಪರೀಕ್ಷೆ ಬೇರೆ ನಡೀತಿದೆ, ಅದ್ಕೇ ಅಲ್ವಾ ಟಿ.ವಿಯೋರಿಗೆ ವಿಧಾನಸೌಧದಾಗೆ ಎಲ್ಲಂದ್ರಲ್ಲಿ ‘ಬಿಟ್’ ತಗಳಂಗಿಲ್ಲ ಅಂತ ಆದೇಶ ಮಾಡಿರಾದು’.
‘ಇದು ಪತ್ರಿಕಾ ಸ್ವಾತಂತ್ರ್ಯದ ಹರಣ ಅಲ್ವಾ?’
‘ಅಲ್ಲಲೇ, ಮಕ್ಕಳು ಓದ್ಕತಾವೆ ಅಂತ ಎಷ್ಟೋ ಕಡೆ ಟಿ.ವಿ, ಮೊಬೈಲು ಬಂದ್ ಮಾಡ್ಸಿಲ್ವಾ? ಅಂಗೇ ಇದೂವೇ! ಇಲ್ ದೊಡ್ಡೋರ್ ಪರೀಕ್ಷೆಗೆ ಡಿಸ್ಟರ್ಬ್ ಆಯ್ತದೆ, ಎಲ್ಲಂದ್ರಲ್ಲಿ ‘ಬಿಟ್’ ಬ್ಯಾಡ ಅನ್ನೋದು ತಪ್ಪೇನ್ಲಾ?’
‘ತಪ್ಪಲ್ಲ ಬುಡು, ಪರೀಕ್ಷೆ ಅಂದ್ರೆ ಹಬ್ಬ ಅಂತ ಯೋಳಲ್ವಾ?’
‘ಉಡುಗ್ರುಗೆ ಹಬ್ಬ, ರಾಜಕೀಯದೋರಿಗೆ ಮಾರಿ ಹಬ್ಬ!’ ಎಂದ ಪರ‍್ಮೇಶಿ.
ಎಲ್ಲಾ ಗೊಳ್ಳನೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.