
ಬೆಕ್ಕಣ್ಣ ವಾರದಿಂದ ನಿರ್ಮಲಕ್ಕನ ಬಜೆಟ್ ಮಂಡನೆಗೆ ಕಾಯುತ್ತಿತ್ತು.
‘ಯಾವ ಬಜೆಟ್ ಬಂದರೂ ಶ್ರೀಸಾಮಾನ್ಯರ ಬದುಕಿನಲ್ಲಿ ಏನಂಥ ವ್ಯತ್ಯಾಸ ಆಗಲ್ಲ ಬಿಡು’ ಎಂದು ನಾನು ಹೇಳಿದರೆ, ‘ಜಿಡಿಪಿ ಎಷ್ಟ್ ಹೆಚ್ಚಾಗೈತೆ ನೋಡು’ ಎಂದು ಗುರುಗುಟ್ಟಿತು.
‘ಆಕಿ 9ನೇ ಸಲ ಬಜೆಟ್ ಮಂಡನೆ ಮಾಡಾತಾಳೆ ಅನ್ನೂದೆ ಐತಿಹಾಸಿಕ ಮಹತ್ವದ್ದು, ತಿಳಕೋ!’ ಎಂದು ನನ್ನ ಮುಖಕ್ಕೆ ತಿವಿದು ಬೆಳಗ್ಗೆಯೇ ಟಿ.ವಿ ಮುಂದೆ ವಿರಾಜಮಾನವಾಗಿತ್ತು.
ನಿರ್ಮಲಕ್ಕ ಕೆನ್ನೇರೆಳೆ ಬಣ್ಣದ ಸೀರೆಯುಟ್ಟಿದ್ದು ನೋಡಿ, ತಾನೂ ಅಂಥದ್ದೇ ಬಣ್ಣದ ಅಂಗಿ ಹಾಕಿಕೊಂಡು ಕೂತಿತು.
‘ಫಸ್ಟಿಗೇ ಆಕಿ ಕರ್ತವ್ಯ ಮಂತ್ರದ ಬಗ್ಗೆ ಹೇಳ್ಯಾಳೆ. ಬಜೆಟ್‌ನಾಗೆ ರಾಜ್ಯಕ್ಕೆ ಕೇಂದ್ರ ಏನು ಕೊಡತದೋ ಬಿಡತದೋ, ಆದರೆ ರಾಜ್ಯಗಳು ತಮ್ಮ ಕರ್ತವ್ಯಪಾಲನೆ ಮಾಡಬಕು’ ಎಂದು ಗುಣಗಾನ ಮಾಡಿತು.
‘ಈ ಸಲ ಏನೇನು ಅಗ್ಗ ಆಗತೈತಿ, ವೈಯಕ್ತಿಕ ತೆರಿಗೆವಳಗೆ ಏನು ಕಡಿಮೆ ಮಾಡತಾರೆ, ನೋಡೂಣು ಇರು’ ಎಂದೆ ನಾನು ಆಸೆಯಿಂದ.
‘ಏಳು ಹೈಸ್ಪೀಡ್ ರೈಲು ಬಿಡತಾರಂತೆ... ಅದ್ರಾಗೆ ಎರಡು ಬೆಂಗಳೂರಿಂದ ಹೊರಡತಾವೆ’ ಎಂದು ಬೆಕ್ಕಣ್ಣ ಖುಷಿಯಿಂದ ಕುಣಿಯಿತು.
‘ವಂದೇ ಭಾರತ್ ರೈಲನ್ನೇ ಶ್ರೀಸಾಮಾನ್ಯರು ಹತ್ತಾಕೆ ಆಗಂಗಿಲ್ಲ. ಇನ್ನು ಹೈಸ್ಪೀಡ್ ರೈಲಿನ ಟಿಕೀಟು ತೆಗೆಯೂ ಮಾತೆಲ್ಲಿ? ತೆರಿಗೆಯಲ್ಲಿ ಬದಲಾವಣೆ ಇಲ್ಲ ಅಂದರೆ ಮಧ್ಯಮವರ್ಗಕ್ಕೆ ಸಿಹಿಯಿಲ್ಲ. ಕೆಲವು ಔಷಧಗಳು ಅಗ್ಗವಾಗಿದ್ದನ್ನು ಬಿಟ್ಟರೆ, ಶ್ರೀಸಾಮಾನ್ಯರಿಗೂ ಸಿಹಿ ಅನ್ನುವಂಥದ್ದು ಏನೂ ಇಲ್ಲ’ ಎಂದೆ ನಾನು ನಿರಾಸೆಯಿಂದ.
‘ಶ್ರೀಸಾಮಾನ್ಯರ ಬದುಕಿಗೆ ಅಗತ್ಯವಾಗಿದ್ದನ್ನು ಮಾಡುವ ಕರ್ತವ್ಯ ರಾಜ್ಯಗಳದ್ದು’ ಎಂದು ಬೆಕ್ಕಣ್ಣ ವಾದಿಸಿತು.
‘ಹಂಗಾರೆ ರಾಜ್ಯಗಳಿಗೆ ಅವರ ತೆರಿಗೆ ಪಾಲನ್ನೂ ನ್ಯಾಯಯುತವಾಗಿ ಕೊಡಬೇಕು’ ಎಂದು ನಾನು ವಾದಿಸಿದೆ.
‘ಹೋಗಲಿಬಿಡು, ನನಗೆ ನಿನಗೆ ಜಗಳ ಯಾಕೆ? ಈಗ ವಿದೇಶ ಪ್ರವಾಸ ಪ್ಯಾಕೇಜ್ ಅಗ್ಗವಂತೆ... ನಾವಿಬ್ಬರೂ ವಿದೇಶ ಪ್ರವಾಸಕ್ಕೆ ಹೋಗೂಣೇನು?’ ಎಂದು ಮೆತ್ತಗೆ ಉಲಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.