
‘ಲೇ ತೆಪರ, ನಿನ್ ಸ್ನಾನದ ಸೋಪು ಯಾವುದಲೆ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ನಂದಾ... ಸಿನಿಮಾ ತಾರೆಯರ ಸೌಂದರ್ಯ ಸಾಬೂನು...’ ಎಂದ ತೆಪರೇಸಿ.
‘ಹೌದಾ? ಆದ್ರೂ ಎಷ್ಟ್ ಖರಾಬದೀಯಲ್ಲಲೆ, ಎಷ್ಟು ದಿನಕ್ಕೊಂದ್ಸಲ ಸ್ನಾನ ಮಾಡ್ತೀಯ?’
‘ಅಂದ್ರೇ ನೀವೇನು ಬೆಳ್ಳಗೆ ಹೊಳೀತಿದೀರ? ನಿಮ್ ಮುಸುಡಿ ಕನ್ನಡೀಲಿ ನೋಡ್ಕಂಡಿದೀರ?’ ತೆಪರೇಸಿ ಸಿಟ್ಟಾದ.
‘ಹೋಗ್ಲಿ, ಇನ್ಮೇಲೆ ಮೈಸೂರ್ ಸ್ಯಾಂಡ್ಲು ಹಚ್ಕಾ, ತಮ್ಮಣ್ಣ ತರ ಲಕಲಕ ಅಂತೀಯ...’ ಗುಡ್ಡೆ ನಕ್ಕ.
‘ಲೇಯ್, ಅದು ತಮ್ಮಣ್ಣ ಅಲ್ಲ, ತಮನ್ನಾ... ನಿನ್ ಬಾಯಲ್ಲಿ ನೂರು ಸಲ ‘ವಂದೇ ಮಾತರಂ’ ಹೇಳಿಸ್ಬೇಕು ನೋಡು, ಆಗ ನಿನ್ ನಾಲಿಗಿ ಶುದ್ಧ ಆಗ್ತತಿ...’
‘ಅಲ್ಲ, ಆ ಸೋಪ್‌ನ ನಮ್ ಮಂಜಮ್ಮ ಹಚ್ಕಂಡ್ರೆ ಸಿನಿಮಾ ಹೀರೊಯಿನ್ ಆಗಬೋದಾ?’ ದುಬ್ಬೀರ ಮೆಲ್ಲಗೆ ಕಾಲೆಳೆದ.
‘ಏಯ್, ನನ್ನ ತಂಟೆಗೆ ಬರಬ್ಯಾಡ್ರಿ, ಕರ‍್ರಗಿರೋರನ್ನ ಬೆಳ್ಳಗೆ ಮಾಡೋ ಸೋಪು ಜಗತ್ತಲ್ಲಿ ಯಾವುದೂ ಇಲ್ಲ, ಸುಮ್ನೆ ಚಾ ಕುಡಿದು ಎದ್ದೋಗಿ’ ಎಂದಳು ಮಂಜಮ್ಮ.
‘ಅದಿರ್ಲಿ, ಮೈ ಸೋಪಿನ ತರ ಬಾಯಿ ಸೋಪು ಅಂತ ಎಲ್ಲೂ ಇಲ್ವಾ?’ ಕೊಟ್ರೇಶಿ ಕೊಕ್ಕೆ.
‘ಬಾಯಿ ಸೋಪಾ? ಯಾಕೆ?’
‘ಇದ್ದಿದ್ರೆ ಹೊಲಸು ಮಾತಾಡೋ ನಮ್ ರಾಜಕಾರಣಿಗಳ ಬಾಯಿ ತೊಳೀಬೋದಿತ್ತು ಅಂತ...’
‘ನಿನ್ತೆಲಿ, ಅವರ ಹೊಲಸು ಬಾಯಿ ತೊಳಿಯೋದು ಯಾವ ಸೋಪ್‌ನಿಂದಾನೂ ಸಾಧ್ಯ ಇಲ್ಲ’ ಎಂದ ಗುಡ್ಡೆ.
‘ಅವರ ಬಾಯಿ ತೊಳಿಯೋದು ಹಂಗಿರ್ಲಿ, ರಾತ್ರಿ ಸೆರೆ ಕುಡಿದು ನಿನ್ ಬಾಯಿ ಹೊಲಸಾಗಿರುತ್ತಲ್ಲ, ಮೊದ್ಲು ಅದನ್ನ ತೊಳ್ಕಾ’ ಎಂದಳು ಮಂಜಮ್ಮ.
‘ಒನ್ ಮಿನಿಟ್... ದುಬ್ಬೀರ, ನಿಮ್ಮ ಪೇಸ್ಟಿನಲ್ಲಿ ಫೆವಿಕಾಲ್ ಇದೆಯೆ?’
‘ಫೆವಿಕಾಲಾ? ಯಾಕೆ?’ ದುಬ್ಬೀರ ಕೇಳಿದ.
‘ಇದ್ದಿದ್ರೆ ಈ ಮಂಜಮ್ಮ ಮಾತಾಡದಂಗೆ ಬಾಯಿ ಬಂದ್ ಮಾಡಬೋದಿತ್ತು...’
ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.