ADVERTISEMENT

ಚುರುಮುರಿ | ಭೋಜನ ಭಾಗ್ಯ

ಸುಮಂಗಲಾ
Published 14 ಜುಲೈ 2025, 0:30 IST
Last Updated 14 ಜುಲೈ 2025, 0:30 IST
   

ಬೆಕ್ಕಣ್ಣ ಸುದ್ದಿ ಓದುತ್ತ ಕಣ್ಣು ಕೆಂಪು ಮಾಡಿತು.  

‘ನೋಡಿಲ್ಲಿ... ಬಿಬಿಎಂಪಿಯವರು ಬೀದಿ ನಾಯಿಗಳಿಗೆ ಬಾಡೂಟದ ಭೋಜನ ಭಾಗ್ಯ ಕರುಣಿಸ್ತಾರಂತೆ. ವರ್ಷಕ್ಕೆ ₹2.88 ಕೋಟಿ ರೊಕ್ಕ ಖರ್ಚು ಮಾಡೋ ಪ್ಲಾನ್‌ ಹಾಕ್ಯಾರೆ’ ಎಂದು ಸಿಟ್ಟಿನಿಂದ ಗುರುಗುಟ್ಟಿತು.

‘ಅದ್ರಾಗೆ ಬಿಬಿಎಂಪಿಯವರಿಂದ ಹಿಡಿದು, ಅಡುಗೆ ಮಾಡೋವ್ರು, ನಾಯಿಗಳಿಗೆ ಆ ಊಟ ಹಾಕೋವ್ರು ಎಲ್ಲಾರೂ ಅವರವರ ಪಾಲು ಮಡಿಕ್ಕೆಂಡು, ಇನ್ನು ಪಾಪದ ನಾಯಿಗಳಿಗೆ ಎಷ್ಟು ಸಿಗತೈತೋ ದೇವರಿಗೇ ಗೊತ್ತು’ ಎಂದೆ. ‘ಮೊದಲು ನಾಯಿಗಳನ್ನ ಹಿಡಿದು ಮರಿಗಳಾಗದಿದ್ದಂತೆ ಆಪರೇಷನ್‌ ಮಾಡೂದು ಬಿಟ್ಟು, ಅವಕ್ಕೆ ಛಲೋತ್ನಾಗಿ ಊಟ ಹಾಕೋ ಯೋಜನೆ ಮಾಡ್ಯಾರಲ್ಲ, ಬಿಬಿಎಂಪಿಗೆ ಶಭಾಸ್‌ ಅನ್ನಬಕು!’

ADVERTISEMENT

‘ಸಾಲಿ ಹುಡುಗರ ಮಧ್ಯಾಹ್ನದ ಬಿಸಿಯೂಟಕ್ಕೆ ರೊಕ್ಕ ಇಲ್ಲ ಅಂತಾರೆ. ಬಿಬಿಎಂಪಿದು ಹಳೇ ಸಾಲಗಳೇ ಕೊಟ್ಟಿಗಟ್ಟಲೆ ಐತಂತೆ. ಅಂತಾದ್ರಲ್ಲಿ ಇಂತಾದಕ್ಕೆಲ್ಲ ಎಲ್ಲಿಂದ ರೊಕ್ಕ ತರತಾರೆ ಅಂತ!’

‘ನೀವು ಅದೀರಲ್ಲ… ತೆರಿಗೆ ತುಂಬೋ ಶ್ರೀಸಾಮಾನ್ಯರು!’ ಬೆಕ್ಕಣ್ಣ ನನ್ನ ಮೂತಿಗೆ ತಿವಿಯಿತು.

‘ಈ ಬೀದಿ ನಾಯಿಗಳು ಮಂದಿಗೆ ಕಚ್ಚೂದು ಬಿಟ್ಟರೆ ಬ್ಯಾರೆ ಕೆಲಸ ಮಾಡಂಗಿಲ್ಲ. ಯಾವತ್ತಾರೆ ಬೀದಿ ಬೆಕ್ಕುಗಳು ಮಂದಿಗೆ ಕಚ್ಚಿ, ಗಾಯ ಮಾಡಿದ್ದನ್ನು ಓದೀಯೇನು? ಬೀದಿ ನಾಯಿಗಳಿಗಲ್ಲ, ಬೀದಿ ಬೆಕ್ಕುಗಳಿಗೆ ಭೋಜನ ಭಾಗ್ಯ ಕೊಡಬಕು’ ಬೆಕ್ಕಣ್ಣ ವಾದಿಸಿತು.

‘ಖರೇ ಹೇಳಿದಿ. ನೀವು ಬೀದಿ ಬೆಕ್ಕುಗಳು ಇಲಿ– ಹೆಗ್ಗಣ ಹಿಡಿಯೂ ಕೆಲಸನಾದ್ರೂ ಮಾಡತೀರಿ... ಬೀದಿ ನಾಯಿಗಳು ಉಂಡಾಡಿ ಗುಂಡಗಳು’ ಎಂದು ನಾನೂ ಬೈದೆ.

‘ನಾವು ಮೋರಿವಳಗೆ, ಅಲ್ಲಿ ಇಲ್ಲಿ ಅಡಿಕ್ಕೆಂಡಿರೋ ಇಲಿ, ಹೆಗ್ಗಣ ಹಿಡಿತೀವಿ ಖರೇ. ಆದರೆ ಬಿಬಿಎಂಪಿಯ ಎಲ್ಲಾ ಇಲಾಖೆವಳಗೆ ಎರಡು ಕಾಲಿನ ಹೆಗ್ಗಣಗಳು ತುಂಬ್ಯಾವಲ್ಲ, ಅವ್ರನ್ನ ಹಿಡಿಯಾಕೆ ಯಾರಿಗೂ ಆಗಂಗಿಲ್ಲ ಬಿಡು!’ ಎಂದು ಬೆಕ್ಕಣ್ಣ ತಲೆ ಚಚ್ಚಿಕೊಂಡಿತು. ನಾನೂ ತಲೆ ಚಚ್ಚಿಕೊಂಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.