
ಚುರುಮುರಿ: ಕೋಳಿಕೆ ಮಂಗ!
ತರ‍್ಲೇಕ್ಯಾತ್ನಳ್ಳಿ ತಿಪ್ಪೇಲಿ ಕೋಳಿಗಳ ತುರ್ತು ಸಭೆ ನಡೀತಿತ್ತು. ‘ಜನ ಮಾತೆತ್ತಿದ್ರೆ ನಮ್ಮನ್ನ ಕಚಕ್ ಅನ್ಸಿ ಕಬಾಬ್ ಮಾಡ್ಕಂಡು ತಿಂತಾರೆ’ ಪೇಚಾಡಿತು ಬ್ರಾಯ್ಲರ್.
‘ನಿಮ್ದು ಬಿಡಿ, ಈ ರಾಜಕೀಯದೋರಂತೂ ನಾಟಿ ಕೋಳಿ ಸಾರು ಅಂತ ನಮ್ ಕತ್ ಕುಯ್ಯೋಕೆ ಕತ್ತಿ ಮಸ್ಕಂಡು ನಿಂತಿರ‍್ತಾರೆ’ ಅಂತು ನಾಟಿ ಹುಂಜ.
‘ಕೋಳಿ ಕೇಳಿ ಮಸಾಲೆ ಅರೀತಾರಾ? ಅಂತ ಗಾದೇನೆ ಮಾಡ್ಕಂಡ್ ಬುಟ್ಟವ್ರೆ. ಕೋಳಿ ಕೇಸ್ ಅಂದ್ರೆ ಲೆಕ್ಕಕ್ಕೇ ಇಲ್ಲ. ನಾವು ಅಂದ್ರೆ ಅಷ್ಟು ಸದರಾನ?’ ಗುರ‍್ರಂತು
ಹ್ಯಾಟೆಮ್ಮ.
‘ಇವರೂ ಒಂತರಾ ನಮ್ ಅಣ್ತಮ್ಮಗಳಿದ್ದಂಗೆ! ಸೆಶನ್ನಲ್ಲೇ ಕೋಳಿ ನಿದ್ದೆ ಮಾಡ್ತಾರೆ. ಕಾಲ್ ಕೆರ‍್ಕಂಡು ಕೋಳಿ ಜಗಳ ಆಡ್ತಾರೆ. ಹುಂಜ, ನೀನು ಸಿಕ್ಕಿದಷ್ಟು ಗುಂಜ ಅಂತ ಪಕ್ಕದೋರ ಪುಕ್ಕ ತರೀತಾರೆ. ಬೇಡದ್ದಕ್ಕೆಲ್ಲಾ ತಿಪ್ಪೆ ಕೆದಕ್ತಾರೆ’ ಅಂತು ಕಾಕ್ರೆಲ್.
‘ಹೌದೌದು, ಏನಾದ್ರೂ ಎಡವಟ್ಟಾಯ್ತು ಅಂದ್ರೆ ನಾವು ಬೇಲಿ, ಕಾಂಪೌಂಡ್ ಹಾರ‍್ದಂಗೆ ಇವರೂ ಪುರ್ ಅಂತ ಪಕ್ಷದಿಂದ ಪಕ್ಷಕ್ಕೆ ಹಾರ‍್ತಾರೆ. ಸ್ವಜನ ಅನ್ನೋ ಸ್ವಲ್ಪನಾದ್ರೂ ಅಭಿಮಾನ ಬೇಡ್ವಾ?’ ಅಂತು ರೂಸ್ಟರ್.
‘ನಮ್ ಕೀರ್ತಿನ ತಿಪ್ಪಾರಳ್ಳಿ ಕಿಲಾಡಿ ಹುಂಜ ಕೈಲಾಸಂ ಕೋಳಿಕೆ ರಂಗಾ ಅಂತ ಹಾಡಿ ಇಂಗ್ಲೆಂಡಲ್ಲೆಲ್ಲ ಬೆಳಗಿದ್ರು. ಈಗ ನೋಡುದ್ರೆ ನಾವು ‘ಕಾನ್‌ಸ್ಟಾಂಟಿನೋಪಲ್’ ಹೋಗಿ ‘ಇನ್‌ಸ್ಟಾಂಟ್ ಕೋಳಿ ಪಲಾವ್’ ಆಗೋಗಿದೀವಿ. ಇದಕ್ಕೆಲ್ಲಾ ಕಾರಣ ನಾವು ದನಿ ಎತ್ತದೇ ಸುಮ್ನಿರೋದು’ ಅಂತು ಕೊರಕನಾಥ.
‘ಸುಮ್ಕಿರಲೇ ಕೋಳಿಕೇ ಮಂಗ! ಧ್ವನಿ ಎತ್ತೇ ನಾವು ಹಾಳಾಗಿರೋದು. ರಾಜಕೀಯದೋರಿಗೆ ಕೊ... ಕ್ಕೋ... ಅಂದ್ರೆ ಮುಂದಿನೋರಿಗೆ ಕೋ ಅಂತ ಅಧಿಕಾರ ದಾಟ್ಸೋದು ಆಗ್ಬರಲ್ಲ. ನಾವು ಬೆಳ್‌ಬೆಳಗ್ಗೆ ಕೊ... ಕ್ಕೊ... ಕ್ಕೋ ಅಂತ ಕೂಗುದ್ರೆ ಕೊಚ್ಚಾಕ್ದೆ ಇನ್ನೇನ್ ಮಾಡಾರು?’ ಬೂರಜ್ಜ ಬೈದ.
ಅಜ್ಜಿ ಕೋಳಿಗಳೆಲ್ಲಾ ಅವಾಕ್ಕಾಗಿ ಕಣ್ ಕಣ್ ಬಿಟ್ಟವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.