‘ಉತ್ಸವ, ಉತ್ಸವ, ಉಳಿತಾಯ ಉತ್ಸವ’– ನ್ಯೂಸ್ ಪೇಪರ್ ಕೈಯಲ್ಲಿ ಹಿಡಿದು ಉತ್ಸಾಹದಿಂದ ಬಂದಳು ಹೆಂಡತಿ.
‘ನೋಡ್ರಿ, ನಮ್ ಬಿಜೆಪಿಯವರು ಜಿಎಸ್ಟಿ ಸ್ಲ್ಯಾಬ್ ಎಲ್ಲ ಇಳಿಸಿದ್ದಾರೆ. ನಮ್ ಮೋದಿ ಇಡೀ ದೇಶದ ಜನಕ್ಕೆ ದಸರಾ ಗಿಫ್ಟ್ ಕೊಟ್ಟಿದ್ದಾರೆ’ ಹೆಮ್ಮೆಯಿಂದ ಹೇಳಿದಳು.
ಏನೂ ಪ್ರತಿಕ್ರಿಯೆ ಕೊಡದೆ ಸುಮ್ಮನೆ ನಕ್ಕೆ.
‘ಯಾಕೆ ಈ ವ್ಯಂಗ್ಯ ನಗು?’
‘ನಗದೆ ಇನ್ನೇನ್ ಮಾಡೋಕಾಗುತ್ತೆ. ಜಿಎಸ್ಟಿನ ಅಷ್ಟೊಂದ್ ಜಾಸ್ತಿ ಮಾಡಿದ್ದು ನಾನಾ? ಅವರೇ ಏರಿಸಿ ಇಷ್ಟು ದಿನ ಅಷ್ಟು ತೆರಿಗೆ ವಸೂಲಿ ಮಾಡಿ, ಈಗ ಅವರೇ ಇಳಿಸಿ ಏನೋ ಸಾಧನೆ ಮಾಡಿದವರ ಥರ ಪ್ರಚಾರ ಪಡ್ಕೊತಿದಾರಲ್ಲ, ಅದಕ್ಕೆ ಉಳಿತಾಯ ಉತ್ಸವ ಅಂತ ಹೆಸರು ಬೇರೆ’ ತಲೆ ಚಚ್ಚಿಕೊಂಡು ಹೇಳಿದೆ.
‘ನೀವೊಂದ್ ರೀತಿ ಅತೃಪ್ತ ಆತ್ಮ ರೀ… ತೆರಿಗೆ ಜಾಸ್ತಿ ಮಾಡಿದರೆ ಬಾಯಿ ಬಡ್ಕೊತೀರ, ಕಡಿಮೆ ಮಾಡಿದರೂ ಕೊಂಕು ಮಾತಾಡ್ತೀರಾ’ ಎಂದು ಮುಖಕ್ಕೆ ತಿವಿದ ಹೆಂಡತಿ, ‘ಆಯ್ತು, ನಿಮ್ಮ ಸಿದ್ದರಾಮಯ್ಯ ಅವರೂ ಏನೇನ್ ಜಾಸ್ತಿ ಮಾಡಿದಾರೋ, ಅದನ್ನೆಲ್ಲ ಇಳಿಸಿ, ರಾಜ್ಯದ ಜನರಿಗೆ ದೀಪಾವಳಿ ಗಿಫ್ಟ್ ಕೊಡೋಕೆ ಹೇಳಿ’ ಸವಾಲೆಸೆಯುವಂತೆ ಹೇಳಿದಳು.
‘ಇನ್ನೂ ಏನ್ ಗಿಫ್ಟ್ ಬೇಕು, ಕೊಟ್ಟಿಲ್ವ ಐದು ಗ್ಯಾರಂಟಿನಾ... ನೀನೇ ತಿಂಗಳಿಗೆ ಎರಡು ಸಾವಿರ ತಗೊಂಡು, ಫ್ರೀಯಾಗಿ ಬಸ್‌ನಲ್ಲಿ ಓಡಾಡ್ತಿಲ್ವ…’
ಜೋರಾಗಿ ನಕ್ಕ ಹೆಂಡತಿ, ‘ಹಾಲಿನಿಂದ ಆಲ್ಕೊಹಾಲ್‌ವರೆಗೂ, ಬರ್ತ್–ಡೆತ್ ಸರ್ಟಿಫಿಕೇಟ್‌ನಿಂದ ಸ್ಟ್ಯಾಂಪ್ ಡ್ಯೂಟಿವರೆಗೂ ನೀವೇ ನಾಲ್ಕು ಪಟ್ಟು ಜಾಸ್ತಿ ದುಡ್ಡು ಕೊಡ್ತಿದ್ರೂ ಹೀಗ್ ವಾದ ಮಾಡ್ತಿದೀರಲ್ರೀ, ಅಕ್ಕಿ ಫ್ರೀ ಆಗಿ ಕೊಟ್ಟು ಬೇಳೇನ ಮುಟ್ಟದೇ ಇರೋ ರೀತಿ ಮಾಡಿದಾರೆ, ಆದರೂ ನಿಮಗೆ ಬುದ್ಧಿ ಬರ್ತಿಲ್ಲ’.
‘ಹೋಗಲಿ ಬಿಡು, ನಿನ್ನ ಉಳಿತಾಯ ಉತ್ಸವದಲ್ಲಿ ನನಗೊಂದು ಕಾರು ಕೊಡಿಸು ನಡಿ’ ಎಂದೆ.
‘ನನ್ನ ಉಳಿತಾಯದಲ್ಲಿ ಪ್ಲಾಸ್ಟಿಕ್ ಕಾರ್ ತಗೋಬಹುದಷ್ಟೇ’ ಎಂದು ನಕ್ಕಳು.
‘ಉಳಿತಾಯ’ ಮಾಡುವ ಸಂಕಲ್ಪದಲ್ಲಿ ಇಬ್ಬರೂ ಕೆಲಸಕ್ಕೆ ಹೊರಟು ನಿಂತೆವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.