‘ಮದುವಿ ಆಗದೇ ಇರೋ ಎಲ್ರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು’ ಎಂದ ತೆಪರೇಸಿ.
‘ಅದು ಹಳೇ ಜೋಕು, ಹೊಸದೇನರೆ ಇದ್ರೆ ಹೇಳು’ ಎಂದ ದುಬ್ಬೀರ.
‘ಅಲೆ ಇವ್ನ, ನಂಗೆ ಗೊತ್ತಿದ್ದನ್ನ ಹೇಳಿದ್ನಪ, ಏನೀಗ?’
‘ಗೊತ್ತಿದ್ದನ್ನ ಹೇಳಿದ್ರೆ ಒಂದೋ ಉಚ್ಚಾಟನೆ ಆಗ್ತೀಯ, ಇಲ್ಲ ಸಂಪುಟದಿಂದ ವಜಾ ಆಗ್ತೀಯ. ಯಾರಿಗೂ
ಗೊತ್ತಿಲ್ಲದ್ದನ್ನ ಗುಟ್ಟಾಗಿ ಹೇಳಬೇಕು...’ ಗುಡ್ಡೆ ಒಗಟಿನ ಮಾತಾಡಿದ.
‘ಅಂದ್ರೇ ಮೊನ್ನೆ ಡಿಕೆಶಿ ಕಿವಿಯಲ್ಲಿ ಮೋದಿ ಸಾಹೇಬ್ರು ಏನೋ ಗುಟ್ಟಾಗಿ ಹೇಳ್ತಿದ್ರಲ್ಲ ಹಂಗಾ?’ ಕೊಟ್ರೇಶಿ ಕೊಕ್ಕೆ.
‘ಹೌದೂ... ಡಿಕೆಶಿ–ಮೋದಿ ಸಾಹೇಬ್ರು ಗುಟ್ಟಾಗಿ ಏನ್ ಮಾತಾಡಿರಬೋದು?’ ಮಂಜಮ್ಮಗೆ ಕುತೂಹಲ.
‘ಅದಾ... ‘ಏನಪ್ಪ ಡಿ.ಕೆ, ನೀನು ಸಿ.ಎಂ ಆಗೋದು ಗ್ಯಾರಂಟಿನಾ’ ಅಂತ ಮೋದಿ ಕೇಳಿರ್ತಾರೆ, ‘ಪ್ರಾರ್ಥನೆ, ಪ್ರಯತ್ನ ಎರಡೂ ಮಾಡ್ತಿದೀನಿ ಸಾ, ನೋಡಬೇಕು’ ಅಂತ ಡಿ.ಕೆ ಹೇಳಿರ್ತಾರೆ...’
‘ಅಷ್ಟೇನಾ?’
‘ನಿನ್ನ ಸಿ.ಎಂ ಮಾಡದಿದ್ರೆ ನಮ್ ಪಕ್ಷಕ್ಕೆ ಬಾ’ ಅಂತ ಮೋದಿ ಕರೆದಿರ್ತಾರೆ, ‘ಬ್ಯಾಡ ಸಾ, ಇಲ್ಲೇ ಅರ್ಧ ಗುಂಡಿ ತೋಡಿದೀನಿ, ಇನ್ನೇನ್ ನೀರು ಬರಬೋದು...’ ಅಂತ ಡಿ.ಕೆ ಅಂದಿರ್ತಾರೆ...’
‘ನೋ ಯೂಸ್, ಆ ವಿಷ್ಯ ಬಿಟ್ಟಾಕು. ಈಗ ಈ ನಾಯಿಗಳ ಕತೆ ಏನು? ಅವನ್ನ್ಯಾಕೆ ಶೆಡ್‌ಗೆ ಕಳಿಸ್ಬೇಕು? ಬೊಗಳೋದು ನಾಯಿಗಳ ವಾಕ್ ಸ್ವಾತಂತ್ರ್ಯ ಅಲ್ವಾ?’ ಗುಡ್ಡೆ ಕೇಳಿದ.
‘ಬರೀ ಬೊಗಳಿದ್ರೆ ಓಕೆ, ಕಚ್ಚೋದು ಯಾಕೆ? ಅದ್ಕೇ ಈ ಶಿಕ್ಷೆ...’
‘ಒಂದ್ ಐಡಿಯಾ ಮಾಡಬೋದಿತ್ತು. ನಾಯಿಗಳನ್ನ ಶೆಡ್‌ಗೆ ಹಾಕೋ ಬದ್ಲು ಎಸ್.ಐ.ಟಿ.ಯೋರಿಗೆ ಕೊಡಬೋದಿತ್ತು...’
‘ಎಸ್.ಐ.ಟಿ. ಅವರಿಗಾ? ಯಾಕೆ?’
‘ನಾಯಿಗಳು ಮೂಳೆ, ಬುರುಡೆ, ಅಸ್ಥಿಪಂಜರ ಹುಡುಕೋದ್ರಲ್ಲಿ ಎಕ್ಸ್‌ಪರ್ಟ್ ಅಲ್ವಾ? ಜೆಸಿಬಿಯಲ್ಲಿ ಆ ಪಾಯಿಂಟು, ಈ ಪಾಯಿಂಟು ಅಂತ ಕಂಡಕಂಡಲ್ಲಿ ಗುಂಡಿ ತೋಡೋದು ತಪ್ತಿತ್ತು!’
ತೆಪರೇಸಿ ಮಾತಿಗೆ ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.