‘ಅಬ್ಬಬ್ಬಾ! ಏನ್ ಅಂದ, ಏನ್ ಚೆಂದ... ಮದುವೆ ಗಂಡಿನಂಗೆ ರೆಡಿ ಆಗಿ ಎಲ್ಲಿಗೆ ಹೊರಟಿದ್ದೀರ‍್ರೀ?’ ಕೇಳಿದಳು ಹೆಂಡತಿ.
‘ಎಲ್ಲಿಗಿರಬಹುದು ನೀನೇ ಗೆಸ್ ಮಾಡು’ ಮೈಸೂರು ಪೇಟ ಸರಿ ಮಾಡಿಕೊಳ್ಳುತ್ತಾ ಕೇಳಿದೆ.
‘ಎಲ್ಲಿಗೆ ಹೇಳ್ರೀ... ಗೊತ್ತಾಗ್ತಿಲ್ಲ’.
‘ಅದೇ ಕಣೆ, ರಾಜ್ಯ ಸರ್ಕಾರದವರು ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರಚಾರ ರಾಯಭಾರಿ ಬೇಕು ಅಂತ ಹುಡುಕ್ತಿದ್ದಾರಲ್ಲ’.
‘ಅದಕ್ಕೆ?!’
‘ಅದಕ್ಕೇ ನಾನೇ ಬ್ರ್ಯಾಂಡ್ ಅಂಬಾಸಿಡರ್ ಆಗೋಣ ಅಂತ...’ ನನ್ನ ಮಾತು ಮುಗಿಸುವುದಕ್ಕೆ ಮುನ್ನವೇ ಜೋರಾಗಿ ನಗತೊಡಗಿದಳು ಹೆಂಡತಿ.
‘ನೀವಾ! ಆ ಸೋಪ್ ಬಳಸಿದರೆ ನಿಮ್ಮ ಥರ ಆಗ್ತಾರೆ ಅನ್ನೋದಕ್ಕಿಂತ, ಆ ಸೋಪ್ ಬಳಸದಿದ್ದರೆ ನಿಮ್ಮ ಥರ ಆಗ್ತಾರೆ ನೋಡಿ ಅಂತ ಹೆದರಿಸೋಕೆ ನಿಮ್ಮನ್ನು ಬಳಸಿಕೋಬೇಕಷ್ಟೆ?’
‘ಅದ್ಯಾರೋ ಪರಭಾಷಾ ನಟಿಗೆ 6 ಕೋಟಿ ರೂಪಾಯಿ ಕೊಡ್ತಿದ್ದಾರಂತೆ, ನಾನಾದರೆ ಫ್ರೀ ಆಗಿ ಮಾಡಿಕೊಡ್ತೀನಿ’.
‘ನೀವು ಬ್ರ್ಯಾಂಡ್ ಅಂಬಾಸಿಡರ್ ಆಗ್ತೀನಿ ಅನ್ನೋದಕ್ಕಿಂತ, ಆಗಲ್ಲ ಅಂದರೆ ದುಡ್ಡು ಕೊಡಬಹುದೇನೋ’ ಮತ್ತೆ ನಕ್ಕಳು.
‘ನಮ್ಮ ನಾಡಿನ ಸೋಪ್‌ಗೆ ಪರಭಾಷಾ ನಟಿಯಿಂದ ಪ್ರಚಾರ ಬೇಕಿತ್ತಾ?’ ಎಂದೆ.
‘ಕರ್ನಾಟಕದಲ್ಲಿ ನಮ್ ಮೈಸೂರು ಸ್ಯಾಂಡಲ್ ಸೋಪ್ ಎಲ್ಲರಿಗೂ ಗೊತ್ತು, ದೇಶ-ವಿದೇಶದಲ್ಲಿ ಸೋಪ್ ಫೇಮಸ್ ಆಗಲಿ ಅಂತ ಆ ನಟಿಯನ್ನು ರಾಯಭಾರಿ ಮಾಡಿದ್ದಾರಷ್ಟೇ’.
‘ಓಹ್, ಈಗ ಗೊತ್ತಾಯ್ತು?’
‘ಏನ್ ಗೊತ್ತಾಯ್ತು?’
‘109 ವರ್ಷಗಳಿಂದ ತನ್ನದೇ ಆದ ಬ್ರ್ಯಾಂಡ್ ಹೊಂದಿರೋ ಸೋಪ್‌ನ ಪ್ರಚಾರಕ್ಕೆ ಕೋಟಿ ದುಡ್ಡು ಖರ್ಚು ಮಾಡಿ ಪರಭಾಷಾ ನಟಿಯನ್ನು ಕರೆತರೋದು, ಬೆಂಗಳೂರಿನ ಸೌಂದರ್ಯ ವೀಕ್ಷಣೆಗೆ ಸ್ಕೈಡೆಕ್ ನಿರ್ಮಾಣ ಮಾಡೋದು ಎರಡೂ ಒಂದೇ ಅಂತ ಗೊತ್ತಾಯ್ತು’.
‘ಅಂದ್ರೆ?’
‘ಇದ್ದರೂ ನಡೆಯುತ್ತೆ, ಇರದಿದ್ದರೂ ನಡೆಯುತ್ತೆ ಅಂತ!’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.