ADVERTISEMENT

ಚುರುಮುರಿ: ಟೂರಿಂಗ್ ಸಂಡಾಸು!

ತುರುವೇಕೆರೆ ಪ್ರಸಾದ್
Published 20 ಡಿಸೆಂಬರ್ 2025, 0:30 IST
Last Updated 20 ಡಿಸೆಂಬರ್ 2025, 0:30 IST
   

‘ನಿಮ್ ಕೇರಿಯೋರೆಲ್ಲ ಟೂರ್ ಹೋದ್ರಂತೆ. ನೀನು ಹೋಗ್ಲಿಲ್ವಾ?’ ಕೇಳಿದ ಗುದ್ಲಿಂಗ.

‘ಇಲ್ಲ ಕಣಲೇ, ಶಕ್ತಿ ಯೋಜನೇಲೆ ಕರುನಾಡು ಇಂಚಿಂಚೂ ಬಿಡ್ದಂಗೆ ಪುಕ್ಕಟೆ ಟೂರ್ ಒಡ್ದು ಆಗೈತೆ.
ಫಾರಿನ್ಗೆ ಕರ‍್ಕೊಂಡ್ ಹೋಗದಾದ್ರೆ ಬಂದೇನು ಅಂತ ನನ್ ಎಂಡ್ರು ಹಟ ಹಿಡ್ದವ್ಳೆ. ಇಯರ್ ಎಂಡ್‌ನಾಗೆ ಏರ್‌ಟ್ರಾಫಿಕ್ ಜಾಸ್ತಿ, ಇಂಡಿಗೊ ತರ ಹಾಲ್ಟ್ ಆಗ್ಬುಟ್ರೆ ಗಣಪತಿ ಅಂಗೆ ಇಮಾನನೇ ಸುತ್ತಿ ಕೈ ಮುಗಿಬೇಕಾಯ್ತದೆ. ಅದ್ಕೇ ಈ ವರ್ಷ ಟೂರೇ ಬ್ಯಾಡ ಅಂತ ಸುಮ್ಕಾದ್ವಿ’ ಎಂದ ಮಾಲಿಂಗ.

‘ಈ ವರ್ಷ ಭಾರೀ ಚಳಿ ಬಿದ್ದು ಟೂರ್‌ ಮೂಡು ಕಮ್ಮಿ ಆಗೈತೆ. ಎಲ್ಲಾ ಮನೇಲೇ ಕಂಬಳಿ ಗುಬರಾಕ್ಕಂಡು ಕುಂತವ್ರೆ’ ಎಂದ ಕಲ್ಲೇಶಿ.

ADVERTISEMENT

‘ಆದ್ರೂ ಇಸ್ಕೂಲ್ ಹೈಕ್ಳುನೆಲ್ಲಾ ಬಸ್ಸಿಗೆ ತುಂಬ್ಕಂಡ್ ಓಯ್ತಾವ್ರೆ. ಟೆಕ್‌ಪಾರ್ಕು ಬಿಟ್ಟು ‘ಟ್ರಿಕ್‌ಪಾರ್ಕು’ ವಿಧಾನಸೌಧ ತೋರ‍್ಸುದ್ರೆ ಆ ಗಾಳಿ ಬೀಸಿ ಮಕ್ಕಳೂ ಕೆಟ್ ರಾಜಕೀಯ ಶುರು ಹಚ್ಕತಾವೆ’.

‘ರಾಜಕೀಯದೋರಿಗೂ ಡೆಲ್ಲಿ ಟೂರ್ ಒಡ್ದೂ ಒಡ್ದೂ ಸಾಕಾಗೈತೆ. ಹಾಕಿದ್ ಟವಲ್ ಬಿಟ್ಟು ಬೇರೆ ಕಡೆ ಓಗೋ ಅಂಗಿಲ್ಲ, ಇಲ್ ಇರೋ ಅಂಗಿಲ್ಲ, ತ್ರಿಶಂಕು ಸ್ಥಿತಿ ಆಗೈತೆ’.

‘ಡೆಲ್ಲಿಗೆ ಹೋಗಿ ಏನ್ ಮಾಡೀಯೇ? ‘ರಾಗಾ’ ಜರ್ಮನಿಗೆ ಟೂರ್ ಹೋಗವ್ರಲ್ಲ’.

‘ಟೂರ‍್ಗಿಂತ ಎಚ್ಚಾಗಿ ಯಾವ ಬಣಕ್ಕೆ ತೂರುದ್ರೆ ಲಾಭ ಆಯ್ತದೆ ಅನ್ನೋ ಲೆಕ್ಕಾಚಾರಕ್ಕೆ ಬಿದ್ದವ್ರೆ. ‘ಜಾಗ ಇದ್ ಕಡೆ ತೂರು, ರಾಗಾ ಇದ್ ಕಡೆ ದೂರು!’

‘ಎಲ್ಲಾ ಪಕ್ಷಗಳೂ ಟೂರಿಂಗ್ ಟಾಕೀಸೇ!
ವಿಶ್ವಗುರು ಮೋದಿ ಮಾಮನೇ ಇಯರ್ ಎಂಡ್ ಟೂರ್ ಓಗಿಲ್ವಲ್ಲ?’

‘ವಿಶ್ವಗುರು ಅಂತೆಲ್ಲಾ ಸುಮ್‌ಸುಮ್ಕೆ ಕರೀಬಾರ‍್ದು... ಟೂರಿಂಗ್ ಟಾಕೀಸಲ್ಲ, ಪುಟಿನ್ ತರ ‘ಟೂರಿಂಗ್ ಸಂಡಾಸು’ ಇದ್ದೋರೇ ಸುಪ್ರೀಮು’ ಎಂದ ಪರ‍್ಮೇಶಿ.

ಎಲ್ಲಾ ಗೊಳ್ಳೆಂದು ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.