ADVERTISEMENT

ಚುರುಮುರಿ: ವ್ಯಾಕ್ಸಿನ್ ಕೈಮಸಗು

ಲಿಂಗರಾಜು ಡಿ.ಎಸ್
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST
   

‘ಸಾ, ಇಲ್ಲೀಗಂಟಾ ದೇಶದಲ್ಲಿ 7 ಕೋಟಿ ಜನ ಮಾತ್ರ ವ್ಯಾಕ್ಸಿನ್ ತಗಂಡವರಂತೆ. ಜನಕ್ಕೆ ಕಾಡಿ-ಬೇಡಿ ವ್ಯಾಕ್ಸಿನ್ ಕೊಡತುದವಿ. ಆದ್ರೂ ಜನ ಬತ್ತಿಲ್ಲ ಅಂತ ಸುದಾಕರಣ್ಣ ಬೇಜಾರು ಮಾಡಿಕ್ಯಂಡದೆ’ ಅಂದೆ.

‘ಒಬ್ಬೊಬ್ಬರಿಗೇ ಲಸಿಕೆ ಕೊಡತಾ ಕುತಗಂಡ್ರೆ ಹತ್ತೊರ್ಸಾಯ್ತದೆ! ಸರ್ಕಾರ ಬ್ಯಾರೇನೆ ಪ್ಲಾನ್ ಮಾಡಬೇಕು’ ಅಂದರು ತುರೇಮಣೆ.

‘ಉಗೀರ‍್ಲಾ ಮಕ್ಕೆ! 132 ಕೋಟಿ ಜನಕ್ಕೆ ವಾರೊಪ್ಪತ್ತಲ್ಲಿ ವ್ಯಾಕ್ಸಿನ್ ಹೆಂಗೆ ಕೊಟ್ಟಾರ‍್ಲಾ ಗೆಂಡೆಕಾಳ?’ ಯಂಟಪ್ಪಣ್ಣ ಕೇಳಿತು.

ADVERTISEMENT

‘ಯಂಟಪ್ಪಣ್ಣ, ವ್ಯಾಕ್ಸಿನ್‍ನ ಜನಕ್ಕೆ ತಿಳೀದಂಗೆ ಕೈಮಸಗಿನ ಥರಾ ಕೊಡಬೇಕು. ಹ್ಯಂಗೆ ಅಂದ್ರೆ ವ್ಯಾಕ್ಸಿನನ್ನ ವಡಾ-ಪಾವ್, ಮಿಸಳ್ ಭಾಜಿ ಒಳಗೆ ಮಿಕ್ಸ್ ಮಾಡಿ ಕೊಟ್ಟರೆ ಇಡೀ ಮಹಾರಾಷ್ಟ್ರದ ಜನಕ್ಕೆ ಸಂದೇ ಒಳಗೇ ವ್ಯಾಕ್ಸಿನ್ ಆಗೋಯ್ತದೆ!’ ಅಂದ್ರು.

‘ಉತ್ತರ ಭಾರತದೋರಿಗೆ ಏನು ಮಾಡೀರಿ?’ ಅಂದೆ.

‘ಸುಲಭ ಕನೋ, ಪಾನ್ ಮಸಾಲದೊಳಿಕ್ಕೆ ವ್ಯಾಕ್ಸಿನ್ ಹಾಕಿಬುಟ್ಟರೆ ಅರ್ಧ ಭಾರತದ ಜನಕ್ಕೆ ವ್ಯಾಕ್ಸಿನ್ ಆಗೋಯ್ತದೆ. ಇನ್ನು ಬಂಗಾಳದೇಲಿ ರಸಗುಲ್ಲಾದೊಳಿಕ್ಕೆ ವ್ಯಾಕ್ಸಿನ್ ಸೇರಿಸಿದರೆ ಮದ್ಯಾನ್ನದೊತ್ತಿಗೆ ಕೆಲಸ ಮುಗೀತದೆ. ಹಿಂಗೀಯೆ ಗುಜರಾತಲ್ಲಿ ಚಿಕ್ಕಿ ಒಳಗೆ, ಹೈದರಾಬಾದಲ್ಲಿ ದಮ್ ಬಿರಿಯಾನಿ ಒಳಗೆ ಸೇರಿಸಿದರೆ ಮುಗೀತಪ್ಪಾ!’ ಅಂದ್ರು.

‘ಆಯ್ತು ಕನೇಳಿ ಸಾ, ನಮ್ಮ ಕರ್ನಾಟಕದೇಲಿ ಹ್ಯಂಗೆ ವ್ಯಾಕ್ಸಿನಾಕದು?’ ಅಂದ ಚಂದ್ರು.

‘ಮಂಗಳೂರಲ್ಲಿ ಬಂಗುಡೆ, ಬನ್ಸೊಳಗೆ, ಉತ್ತರ ಕರ್ನಾಟಕದೇಲಿ ಗಿರ್ಮಿಟ್ಟೊಳಗೆ, ಬೆಂಗಳೂರೇಲಿ ಪಾನಿಪೂರಿ, ಮಸಾಲೆದೋಸೆಗೆ ಮಿಕ್ಸ್ ಮಾಡಬೇಕು ಕನ್ರೋ. ಮುದ್ದೆ-ತಲೆ ಮಾಂಸದ ಒಳಕ್ಕಿಟ್ರೆ ಸಾಕು ಮಂಡ್ಯಾದಿಂದ ಹಾಸನದ ಗಂಟಾ ವ್ಯಾಕ್ಸಿನ್ ಆಯ್ತದೆ’ ಅಂದ್ರು.

‘ರಾಜಕಾರಣಿಗಳಿಗೆ ಹ್ಯಂಗೆ ಕೊಡದು?’ ಅಂತ ಕೇಳಿದೆ. ‘ಅವರಿಗೇನೂ ಬ್ಯಾಡ. ಈಗಲೇ ಆ್ಯಂಟಿ ಬಾಡಿ ಜಾಸ್ತಿ ಆಗ್ಯದೆ ಬುಡ್ಲಾ!’ ಅನ್ನದಾ ಈವಯ್ಯ.

‘ಈ ಮಾನಗೆಟ್ಟೋನು ಯಾವ್ಯಾವುದ ಎಲ್ಲೆಲ್ಲಿಗೋ ತಾರಾಕ್ತನೆ. ಇವನ ಮಾತು ಕೇಳದೇ ಆಸ್ಪತ್ರಿಗೋಗಿ ವ್ಯಾಕ್ಸಿನ್ ತಗಾ’ ಅಂತು ಯಂಟಪ್ಪಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.