
ವಿಧಾನಸೌಧದ ಆವರಣದಲ್ಲಿ ಗಾಂಧೀಜಿ ವಾಯುವಿಹಾರ ಮಾಡುತ್ತಿದ್ದರು. ಹಸ್ತಪ್ಪ, ಸಂಘಪ್ಪ ಎದುರಾದರು.
‘ನಮಸ್ಕಾರ ಗಾಂಧಿ ತಾತಾ, ನೀವು ನಮ್ಮ ಮನೆಯ ದೇವರು!’ ಎಂದ ಹಸ್ತಪ್ಪ.
‘ನಮಗೆ ನೀವು... ಮೆರವಣಿಗೆ ದೇವರು’ ಸಂಘಪ್ಪ ಹೇಳಿದ.
‘ಮನ್ರೇಗಾ ಯೋಜನೆಯಲ್ಲಿ ಇವರು ನಿಮ್ಮ ಹೆಸರನ್ನು ಕೈ ಬಿಟ್ಟಿದ್ದಾರೆ. ನಾವು ನಿಮ್ಮನ್ನು ಬಿಡೋದಿಲ್ಲ. ಗ್ರಾಮ ಪಂಚಾಯಿತಿ ಕಚೇರಿಗಳಿಗೆ ನಿಮ್ಮ ಹೆಸರಿಟ್ಟು ನಿಮ್ಮ ಕನಸಿನ ಗ್ರಾಮ ರಾಜ್ಯ ಮಾಡುತ್ತೇವೆ’ ಅಭಿಮಾನದಿಂದ ಹೇಳಿದ ಹಸ್ತಪ್ಪ.
‘ನಾವೂ ನಿಮ್ಮನ್ನು ನಿರ್ಲಕ್ಷ್ಯ ಮಾಡಿಲ್ಲ. ಬಜೆಟ್‌ನಲ್ಲಿ ನಿಮ್ಮ ಹೆಸರಿನಲ್ಲಿ ಗಾಂಧಿ ಸ್ವರಾಜ್ಯ ಯೋಜನೆ ತರ್ತೀವಿ. ಮನ್ರೇಗಾದಂತೆ ಔಟ್‌ಡೋರ್ ಯೋಜನೆಯಲ್ಲ– ಖಾದಿ, ಕೈಮಗ್ಗ, ಕರಕುಶಲ ಕಸುಬುಗಳನ್ನು ಪ್ರೋತ್ಸಾಹಿಸುವ ಇಂಡೋರ್ ಯೋಜನೆ’ ಎಂದ ಸಂಘಪ್ಪ.
‘ಗಾಂಧೀಜಿ ಚರಕದಿಂದ ನೂಲು ತೆಗೆದು ನೇಯುವಂತಹ ಗುಡಿಕೈಗಾರಿಕೆನಾ?’
‘ಹೌದು. ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಜಾಗತಿಕ ಮಾರುಕಟ್ಟೆ ಸಂಪರ್ಕದ ವ್ಯವಸ್ಥೆ ಮಾಡುತ್ತೇವೆ’.
‘ನಾವು ರಾಜ್ಯ ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಉಡುಪು ಕಡ್ಡಾಯ ಮಾಡ್ತೀವಿ, ನೀವು ಕೇಂದ್ರ ಸರ್ಕಾರದ ನೌಕರರಿಗೆ ಖಾದಿ ಕಡ್ಡಾಯ ಮಾಡ್ತೀರಾ?’
‘ಚಿಂತನೆ ಮಾಡ್ತೀವಿ. ನೀವು ಶಾಲಾ ಮಕ್ಕಳಿಗೆ ಖಾದಿ ಸಮವಸ್ತ್ರ ಜಾರಿ ಮಾಡ್ತೀರೇನು?’ ಸಂಘಪ್ಪ ಕೇಳಿದ.
‘ಅದರ ಬಗ್ಗೆ ನಾವೂ ಚಿಂತನೆ ಮಾಡ್ತೀವಿ’.
‘ನನ್ನನ್ನು ಬಿಟ್ಟು ನೀವು ರಾಜಕಾರಣ ಮಾಡಲು ಸಾಧ್ಯವಿಲ್ಲವೆ?’ ಗಾಂಧೀಜಿ ಕೇಳಿದರು.
‘ಇಲ್ಲ ತಾತ... ರೂಪಾಯಿ ನೋಟಿನಲ್ಲಿ ಇರುವಂತೆ ರಾಜಕಾರಣದಲ್ಲಿಯೂ ನೀವು ಚಲಾವಣೆಯಲ್ಲಿದ್ದೀರಿ!’ ಹಸ್ತಪ್ಪ ಹೇಳಿದ.
ಗಾಂಧಿ ಮತ್ತೊಮ್ಮೆ ನಕ್ಕರು.
‘ಅದ್ಸರಿ, ವಿಧಾನಸೌಧದ ಎದುರು ಪ್ರತಿಮೆಯಾಗಿದ್ದ ನೀವು ಹೇಗೆ ಹೊರಗೆ ಬಂದ್ರಿ?’ ಸಂಘಪ್ಪ ಕೇಳಿದ.
ಇನ್ನೊಮ್ಮೆ ನಕ್ಕ ಗಾಂಧೀಜಿ, ‘ನಾನು ಒರಿಜಿನಲ್ ಅಲ್ಲ, ಗಾಂಧಿಯ ವೇಷಧಾರಿ!’ ಎಂದು ಹೇಳಿ ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.