ADVERTISEMENT

ಚುರುಮುರಿ: ಹೆಸರಲ್ಲಿ ಎಲ್ಲ ಇದೆ!

ಗುರು ಪಿ.ಎಸ್‌
Published 24 ಡಿಸೆಂಬರ್ 2025, 23:30 IST
Last Updated 24 ಡಿಸೆಂಬರ್ 2025, 23:30 IST
ಚುರುಮುರಿ
ಚುರುಮುರಿ   

‘ನೋಡಮ್ಮ, ಇನ್ಮೇಲೆ ನೀನು ನನ್ನನ್ನ ಹೆಸರು ಹಿಡಿದು ಕರೀಬೇಡ. ನಾನು ನನ್ನ ನೇಮ್ ಚೇಂಜ್ ಮಾಡ್ಕೊಬೇಕಂತಿದೀನಿ’ ಎಂದು ಪೇಪರ್ ಓದುತ್ತಲೇ ಹೆಂಡತಿಗೆ ಹೇಳಿದೆ.

‘ಅವೆಲ್ಲ ‌ಸೆಲೆಬ್ರಿಟಿಗಳು, ಸಿನಿಮಾದವರಿಗೆ ಚೆಂದ. ಈ ವಯಸ್ಸಲ್ಲಿ ನಿಮಗ್ಯಾಕೆ ಹಿಡೀತು ಹೆಸರಿನ‌ ಹುಚ್ಚು’ ಎಂದು ನಕ್ಕಳು. 

‘ಏನ್ ಮಾಡಿದ್ರೂ ಜೀವನ ಆರಕ್ಕೇರತಿಲ್ಲ, ಮೂರಕ್ಕಿಳೀತಿಲ್ಲ. ಅದಕ್ಕೆ ನನ್ನ ಹೆಸರನ್ನೇ ‘ಶ್ರೀಮಂತ’ ಅಂತ ಚೇಂಜ್ ಮಾಡ್ಕೊಂಡ್ ಬಿಡ್ತೀನಿ’.

ADVERTISEMENT

‘ಹೂಂ, ನಾನು ಐಶ್ವರ್ಯಲಕ್ಷ್ಮಿ ಅಂತ ಮಾಡ್ಕೊಂಡ್ ಬಿಡ್ತೀನಿ, ಕುಬೇರರಾಗಿಬಿಡೋಣ.‌ ಮೊದಲು, ಮಗಳ ಸ್ಕೂಲ್ ಫೀಸ್ ಕಟ್ಟೋಕೆ ದುಡ್ಡಿದೆಯಾ ನೋಡ್ಕೊಳಿ’ ಎಂದು ಮುಖಕ್ಕೆ ತಿವಿದಳು. ನೋವಿನಿಂದ, ‘ಜಿ ರಾಮ್ ಜೈ, ಜಿ ರಾಮ್ ಜೈ’ ಎಂದೆ. 

‘ಅದು, ಜಿ ರಾಮ್ ಜೈ ಅಲ್ಲ, ಜಿ ರಾಮ್ ಜಿ’ ಎಂದು ಮತ್ತೆ ತಿವಿದಳು. 

‘ಮಗಳಿಗೆ ಸ್ಕೂಲ್ ಬಿಡಿಸಿ, ಅವಳ ಹೆಸರನ್ನ ವಿದ್ಯಾಸರಸ್ವತಿ ಅಂತ, ಮಗನ ಹೆಸರನ್ನು ವಿಕಸಿತಕುಮಾರ ಅಂತ ಚೇಂಜ್ ಮಾಡೋಣ, ಆಗಲಾದರೂ ನಾವು ಅಭಿವೃದ್ಧಿ ಕಾಣಬಹುದು’.

‘ನೀವೇನ್ ತಿಳಿದು ಮಾತಾಡ್ತೀರೋ, ತಿಳಿಯದೇ ಮಾತಾಡ್ತೀರೋ, ಹೆಸರು ಬದಲಿಸಿದ ತಕ್ಷಣ ಉದ್ಧಾರ ಆಗಿಬಿಡ್ತೀವಾ?’ ಎಂದ ಹೆಂಡತಿ, ‘ಮನೆ ಸೋರ್ತಿದೆ, ರಿಪೇರಿ ಆದ್ರೂ ಮಾಡಿಸಿ’ ಎಂದು ಆಜ್ಞಾಪಿಸಿದಳು. 

‘ನಮ್ ಮನೆ ಹೆಸರನ್ನೇ ಅಮೃತಗೃಹ ಎಂದಿಟ್ಟುಬಿಟ್ಟರೆ ಹೇಗೆ’ ಎಂದೆ ನಗುತ್ತಾ.

ಆದರೆ, ಹೆಂಡತಿ ನಗಲಿಲ್ಲ! 

‘ಸರಿ, ಹೊಟ್ಟೆ ಹಸೀತಿದೆ. ಊಟ ಕೊಡು’ ಎಂದು ಕೇಳುತ್ತಿದ್ದಂತೆ, ಅನ್ನ ರಸಂ, ಹಪ್ಪಳವಿದ್ದ ತಟ್ಟೆ ನನ್ನೆದುರು ಪ್ರತ್ಯಕ್ಷವಾಯಿತು.

‘ಇದೇನೇ ನಾನ್ ವೆಜ್ ಮಾಡ್ತೀನಿ ಅಂತ, ಅನ್ನ ರಸಂ ಇಟ್ಟಿದ್ದೀಯ?’ 

‘ಅದರ ಹೆಸರು ಅನ್ನ ರಸಂ ಅಲ್ಲ ರೀ, ಅದು ಮಟನ್ ಬಿರ್ಯಾನಿ. ಇನ್ನು ಇದು ಹಪ್ಪಳ ಅಲ್ಲ, ಫಿಶ್ ಫ್ರೈ!’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.