ಶುಕ್ಲಾಂಬರಧರಂ ವಿಷ್ಣುಂ ಚತುರ್ಭುಜಂ. ಓಂನಮೋ ಅಮಿತಾಯ, ರಾಜನಾಥಾಯ, ರಾಗಾಯ ಸೋನಿಯಾಯ ಖರ್ಗಾಯ ನಮಃ. ಓಂ ಗುರುಪರಂಪರಾಯ. ಈ ದಿನದ ಕೀರ್ತನೆಯಲ್ಲಿ ಮತಮಾಯಾದೇವಿಯು ತನ್ನ ಪ್ರಭಾವವನ್ನು ತೋರಿದ ಕಥೆಯನ್ನು ಕೇಳೋಣ. ಈ ಕಥೆಯನ್ನು ‘ಬೂತುಚೇಷ್ಟೆ’ ಎಂದು ಕೂಡಾ ಕರೆಯುವುದುಂಟು.
ಧರಣಿ ಮಂಡಲ ಮಧ್ಯದಲ್ಲಿರುವ ಕರ್ನಾಟಕ ದೇಶದಲ್ಲಿ ‘ಮಾಯೆ ತುಂಬಿದೆ ಜಗದಲಿ ಮತಮಾಯೆ’ (ಹಾಡು). ರಾಜ್ಯದ ಕೈ ಪಡೆಯ ಅರಸನು ತನ್ನ ಒಡ್ಡೋಲಗದಲ್ಲಿ ‘ನನ್ನ ರಾಜ್ಯದಲ್ಲಿ ಸಕಲ ಪ್ರಜೆಗಳೂ ಕ್ಷೇಮವೇ?’ ಎನ್ನಲಾಗಿ ಮಂತ್ರಿಗಳು, ‘ತಮ್ಮ ಗ್ಯಾರಂಟಿಗಳಿಂದಾಗಿ ಜನರು ಸಂತೋಷದಲ್ಲಿ ಮಗ್ನರಾಗಿದ್ದಾರೆ ಮಹಾಪ್ರಭೋ’ ಎಂದು ಗುಮ್ಮಿದರು. ಹೀಗಿರುವಾಗ ನಿಧಿ ನಿಯಮಗಳಿಗೆ ಬದ್ಧನಾದ ರಾಗಾ ದೇವತೆಯು ‘ಕೈವಶವಾಗಬೇಕಾಗಿದ್ದ ಮತಗಳನ್ನೆಲ್ಲಾ ಯಾರೋ ಸೆರೆ ಹಿಡಿದು ಕದ್ದುಬಿಟ್ಟಿದ್ದಾರೆ. ಇದರಿಂದ ನಮ್ಮ ಸೀಟುಗಳು ನೆಗೆದುಬಿದ್ದಿವೆ’ ಅಂತ ಹುಯಿಲೆಬ್ಬಿಸಿದ.
‘ಏನೂ, ದಿಟ್ಟತನದಿಂ ಕಟ್ಟಿದ ಮತಗಳ ಅಪಹರಿಸಿದಿರಾ, ಹೇಡಿಗಳಾ?’ ಎಂದು ಕೈಪಟುಗಳು ಹಾಡುತ್ತಾ ಪೌರುಷ ತೋರಿದರು.
ರಾಗಾ ದೇವತೆಯಿಂದ ಮತಯುದ್ಧ ಘೋಷಣೆ ಆಯ್ತು. ಯುದ್ಧರಂಗದಲ್ಲಿ ಎದುರಿಗೆ ಘಟಾನುಘಟಿಗಳು ಘೋರ ಕಮಲವ್ಯೂಹವನ್ನು ನಿರ್ಮಿಸಿ ನಿಂತಿದ್ದಾರೆ. ‘ಕಿಡಿಗಳನುಗುಳುತೆ ಕಮಲದ ಪಡೆಯ ಪಿಡಿದರೆ ಸುಡುವೆನು? ಮಹದೇವಪುರದ ಕೋಣೆಯಲಿ ಮತಗಳ ಸವಿದವರಾರು?’ ಎಂದ ಕಮಲ ಕಲಿಗಳ ಮಾತಿಗೆ ಉತ್ತರವಿರಲಿಲ್ಲ.
‘ರೊಕ್ಕವ ಕೊಡದೇ ಆರಿಸಿ ಬಂದ ನೀತಿವಂತ ಎಲ್ಲಿಹನು?’ ಎಂದು ಹಾಡುತ್ತಾ ಬಂದ ವಿದುರನ ನೀತಿ ಮಾತಿಗೆ ಭೀತಿಯಿಂದ ಯುದ್ಧ ಕಲಿಗಳೆಲ್ಲಾ ಓಟ ಕಿತ್ತರು ಎಂಬಲ್ಲಿಗೆ ಮತಗಳ್ಳತನದ ಪ್ರಸಂಗ ಮುಕ್ತಾಯವಾಯಿತು.
ಈ ಕಥೆಯನ್ನು ಕೇಳಿದ ನಕಲಿ ಮತಗಳ ಸೃಷ್ಟಿಕರ್ತರೆಲ್ಲ ರಿಗೂ ಮಂಗಳವೂ ಶುಭಮಂಗಳವೂ. ಮತವ ಕದ್ದವರಿಗೆ ಬಹುಮತ ಕೊಡುವ ಮಂಗಳ ಮತರಾಜಗೆ, ಮಂಗಳ ಬೂತುರಾಜಗೆ ಮಂಗಳವೂ. ಇಲ್ಲಿಗೆ ಮತದಾರರ ಕಥೆ ಗೋವಿಂದಾ, ಗೋವಿಂದ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.