ADVERTISEMENT

ಚುರುಮುರಿ: ಬಜೆಟ್‌ ಕವನ

ಸುಮಂಗಲಾ
Published 9 ಮಾರ್ಚ್ 2025, 23:30 IST
Last Updated 9 ಮಾರ್ಚ್ 2025, 23:30 IST
   

‘ಕುವೆಂಪು, ಅಡಿಗರು, ನಿಸಾರ್‌ ಅಹಮದ್‌, ವಿಲ್ಸನ್‌ ಕಟೀಲರ ಕವನ, ವಚನಗಳು...’ ಬೆಕ್ಕಣ್ಣ ಒಂದು ಎರಡು ಮೂರು ಎಂದು ಎಣಿಸುತ್ತ ಕವಿಗಳ ಹೆಸರುಗಳನ್ನು ಹೇಳುತ್ತಿತ್ತು.

‘ಏನಲೇ... ಈ ಕವಿಗಳ ಕವನ ಓದಬೇಕಂತ ಗುರುತು ಮಾಡಿಕೊಳ್ಳಾಕೆ ಹತ್ತೀಯೇನು?’ ಎಂದೆ ಅಚ್ಚರಿಯಿಂದ. Podcast ಚುರುಮುರಿ: ಬಜೆಟ್‌ ಕವನ

‘ನಾನು ಚುರುಮುರಿ: ಬಜೆಟ್‌ ಕವನಓದಕ್ಕಲ್ಲ, ಸಿದ್ದು ಅಂಕಲ್ಲು ಬಜೆಟ್‌ ಮಂಡಿಸಬೇಕಿದ್ರೆ ಇವರ ಕವನಗಳ ಸಾಲುಗಳನ್ನು ಉಲ್ಲೇಖ ಮಾಡ್ಯಾರೆ. ಅದ್ಸರಿ, ಈ ಬಜೆಟ್‌ ಮಂಡಿಸಬೇಕಿದ್ರೆ ಕವನಗಳನ್ನು ಎದಕ್ಕೆ ಉಲ್ಲೇಖಿಸತಾರೆ?’ ಬೆಕ್ಕಣ್ಣ ಕೇಳಿದಾಗ ನನಗೂ ಥಟ್ಟನೆ ಉತ್ತರ ಹೊಳೆಯಲಿಲ್ಲ.

ADVERTISEMENT

‘ಕವಿಗಳ ಕವನದ ಸಾಲುಗಳನ್ನು ನಡುವೆ ಸೇರಿಸಿದ್ರೆ ಬಜೆಟ್ಟಿಗೆ ಒಂದು ವಜನು ಬರತೈತಿ. ಬಜೆಟ್ಟಿನಾಗೆ ಏನು ಮಂಡನೆ ಮಾಡತಾರೆ ಅದಕ್ಕೆ ಸಮರ್ಥನೆ ಸಿಗತೈತಿ ಅಂತ ಇರಬಕು’ ಎಂದೆ.

‘ಅಂದರೆ ಕವಿಗಳು ಕವಿತೆಗಳಲ್ಲಿ ವ್ಯಕ್ತಪಡಿಸಿದ ಸಮಬಾಳಿನ ಆಶಯವನ್ನು ಬಜೆಟ್ಟಿನಾಗೆ ಪೂರ್ಣ ಮಾಡತೀವಿ ಅಂತೇನು?’ ಬೆಕ್ಕಣ್ಣನ ಮರುಪ್ರಶ್ನೆ.

‘ಹೌದು, ಆದರೆ ಬಜೆಟ್‌ ಮಿತಿವಳಗೆ ಅನ್ನೋ ಕರಾರಿಗೆ ಒಳಪಟ್ಟು!’ ಎಂದು ನಕ್ಕೆ.

‘ಹಂಗಾರೆ ನಮ್‌ ಸಿಎಮ್ಮು, ನಿರ್ಮಲಕ್ಕ ಇವ್ರೆಲ್ಲ ಬಜೆಟ್‌ ಮಂಡನೆಗೆ ಮೊದಲು ಆಳವಾಗಿ ಕವನಾಧ್ಯಯನ ಮಾಡತಾರೆ’.

‘ಅವರಿಗೆಲ್ಲಿ ಟೈಮಿರತೈತಿ? ಬಜೆಟ್‌ ಭಾಷಣ ತಯಾರು ಮಾಡೋ ಅವರ ತಂಡದವರು ಕವನಗಳನ್ನು ಓದಿ, ಆರಿಸತಾರೆ’.

‘ಬಜೆಟ್‌ ಭಾಷಣದಾಗೆ ಉಲ್ಲೇಖಿಸಿದ ಕವಿಗಳಿಗೆ ಏನರೆ ವಿಶೇಷ ಇನಾಮು ಕೊಡಬೇ ಕಲ್ಲವಾ’ ಎಂದು ಭಾರಿ ಮುಗುಮ್ಮಾಗಿ ಕೇಳಿತು.

‘ಹೋಗಲೇ... ನೀ ಇಲ್ಲದ ಕ್ಯಾತೆ ತೆಗೆಯಾಕೆ ಹತ್ತಿ. ನಿಜವಾದ ಕವಿಗಳು ಇನಾಮು ಬಯಸಂ ಗಿಲ್ಲ. ಹಂಗೆಲ್ಲ ಇನಾಮು ಕೊಡತಿದ್ದರೆ, ಬಜೆಟ್‌ ಮಂಡನೆವಳಗೆ ಉಲ್ಲೇಖಿಸಕ್ಕೆ ಅಂತನೇ ಕವನ ಬರೆಯೋ ಬಜೆಟ್‌ ಕವಿಗಳೂ ಇರತಿದ್ದರು’ ಎಂದೆ.

‘ನಾ ಮುಂದಿನ ವರ್ಷದ ಬಜೆಟ್ಟಿಗೆ ಅಂತ ಈಗಲೇ ಒಂದಿಷ್ಟು ಕವನ ಬರದೀನಿ. ಸಿದ್ದು ಅಂಕಲ್‌, ಮತ್ತ ನಿರ್ಮಲಕ್ಕಂಗೆ ಕಳಿಸೂದೊಂದೇ ಬಾಕಿ!’ ಎಂದು ಹ್ಹಿಹ್ಹಿಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.