ADVERTISEMENT

ಚುರುಮುರಿ | ಗಾಂಧಿ ಎಲ್ಲೋದ್ರು?

ಲಿಂಗರಾಜು ಡಿ.ಎಸ್
Published 10 ಆಗಸ್ಟ್ 2020, 19:36 IST
Last Updated 10 ಆಗಸ್ಟ್ 2020, 19:36 IST
   

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೇಲಿ ಗಾಂಧಿ ಪ್ರತಿಮೆ ಮುಂದೆ ನಾನು, ತುರೇಮಣೆ ಕಳ್ಳೆಕಾಯಿ ತಿಂತಾ, ಮುಂದುಗಡೆ ಇದ್ದ ಭಾರಿ ವೈನ್‌ಸ್ಟೋರ್‌ನ ಅಂದ ನೋಡಿಕ್ಯಂಡು ಕುತುಗಂಡುದ್ದೋ.

‘ಇಲ್ಲಿ ಲಕ್ಷಗಟ್ಟಲೆ ದುಡ್ಡಿನ ಎಣ್ಣೆ ಸಿಕ್ತದಂತೆ ಕಣಲಾ!’ ಅಂದ್ರು ತುರೇಮಣೆ.

ನಮ್ಮ ಹಿಂದೆ ಯಾರೋ ಕದಲಿದಂಗಾಯ್ತು. ತಿರುಗಿ ನೋಡಿದರೆ ಬಾಪೂ! ನಾವು ಅವರ ಕಾಲಿಗೆ ಬಿದ್ದು ಕಳ್ಳೆಕಾಯಿ ಅವರ ಮುಂದಿಟ್ಟೊ. ‘ಏನಿರ‍್ಲಾ, ಮೂಗು ಮುಸುಡಿಗೆ ಕುಕ್ಕೆ ಕಟ್ಟಿಗ್ಯಂಡು ಗುರುತೇ ಸಿಕ್ಕಲ್ಲವಲ್ರೋ?’ ಅಂದರು.

ADVERTISEMENT

‘ಅಯ್ಯೋ ಬಾಪೂ, ಕೊರೊನಾ ಕಾಲದಲ್ಲಿ ಸೀತ್ರೆ ಸೀಲುಡೌನು, ಕೆಮ್ಮಿದ್ರೆ ಕ್ವಾರಂಟೈನು! ನಮ್ಮ ಕೈನೇ ನಾವು ನಂಬಂಗಿಲ್ಲ. ನೀವೂ ಬಾಯಿ-ಮೂಗು ಮುಚ್ಚಿಕ್ಯಳಿ’ ಅಂತಂದೆ. ‘ಈಗ ಆಕ್ಸ್‌ಫರ್ಡ್‌ ಲಸಿಕೆ ಬತ್ತಾ ಅದಂತೆ ಬಾಪೂ’ ಅಂದ್ರು ತುರೇಮಣೆ’.

‘ನಮ್ಮ ಕಾಲದೆಲೇ ಆಕ್ಸು ಲಸಿಕೆ ಇತ್ತು. ಕೌ ಹಾಲು, ಗಂಜಲ ತಕ್ಕಂದ್ರೆ ಕಾಯಿಲೆ ಬತ್ತಿರಲಿಲ್ಲ ಕನ್ರೋ. ಈಗ ಹುಲಿ-ಸಿಂಹಗಳಿಗೆಲ್ಲಾ ಸೋಂಕು ಬಂದು ಆಸ್ಪತ್ರೆ ಸೇರ್ಯವಂತಲ್ಲಪ್ಪಾ? ಹೇ ರಾಮ್!’ ಅಂದ್ರು ಗಾಂಧಿ ತಾತ.

‘ತಾತಾ, ಅಯೋಧ್ಯೆಗೋಗಲಿಲ್ಲವಾ ನೀವು?’ ಅಂದೆ. ‘ಈವತ್ತು ಹೊಂಟಿದೀನಿ ಕನ್ರೋ. ಮಳೆ-ಗಾಳಿ ಜೋರಾಗದೆ, ಅದುಕ್ಕೆ ನೆಗಡಿ-
ಕೆಮ್ಮಿಗೆ ಏನಾದ್ರೂ ಕಸಾಯ ತಕಂದು ಹೋಗುಮಾ ಅಂತ. ಇಲ್ಲೇನಾದ್ರೂ ಸಿಕ್ಕದಾ ನೋಡ್ಕೋಯ್ತಿನಿ’ ಅಂದು ಮಾಯವಾದರು.

ತಾತಾ, ಅದು ಡಾಕ್ಟ್ರ ಸಾಪಲ್ಲ... ಅಂತ ಅನ್ನದ್ರೊಳಗೆ ಅವರು ಕಾಣಿಸನೇ ಇಲ್ಲ. ಒಳಗೆ ಇನ್ನೇನೇನು ಅನಾವುತವಾದದೋ ಅಂತ ಗಾಬರಿಯಲ್ಲಿ ವೈನ್‌ಸ್ಟೋರ್‌ ಒಳಿಕ್ಕೋಗನ ಅಂತ ಓಡೋದೆ. ಮುಂದೆ ನಿಂತಿದ್ದ ಸೆಕ್ಯೂರಿಟಿ, ಹಣೆಗೆ ಥರ್ಮಾಮೀಟರ್ ಮಡಗಿ ‘ಟೆಂಪರೇಚರ್ ಹಂಡ್ರಡ್ ಸೆ ಜ್ಯಾದಾ ಹೈ!’ ಅಂತ ಸೈಡಿಗೆ ನಿಲ್ಲಿಸಿ, ಕೊರೊನಾ ಕೇಸ್ ಅಂತ ಫೋನು ಮಾಡತೊಡಗಿದ. ಕೋವಿಡ್ ಕೇರ್ ಕೇಂದ್ರ ಗ್ಯಪ್ತಿಗೆ ಬಂದು, ನನ್ನ ಟೆಂಪರೇಚರ್ ಎಕ್ಕುವಾಯ್ತಾ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.