ADVERTISEMENT

ಚುರುಮುರಿ: ತಿಂದಿದ್ದು ಸಾಕು?

ಆನಂದ ಉಳಯ
Published 25 ಆಗಸ್ಟ್ 2021, 21:45 IST
Last Updated 25 ಆಗಸ್ಟ್ 2021, 21:45 IST
ಚುರುಮುರಿ
ಚುರುಮುರಿ   

‘ತಿಂದಿದ್ದು ಸಾಕು, ಕೆಲಸ ಮಾಡಿ’ ಎಂದು ಸೋಮಣ್ಣನವರು ಕರೆ ಕೊಟ್ಟಿರುವುದನ್ನು ಪೇಪರ್ ನೋಡಿ ಹೆಂಡತಿಗೆ ಹೇಳಿದೆ. ‘ಕರೇನೋ ವಾರ್ನಿಂಗೋ?’ ಎಂದ ಹೆಂಡತಿ ‘ಅದ್ಸರಿ, ಅವರು ಯಾರಿಗೆ ಹೇಳಿದ್ದು, ಮಂತ್ರಿಮಂಡಲದ ಸಹೋದ್ಯೋಗಿಗಳಿಗೆ ತಾನೆ?’ ಎಂದು ಸಪ್ಲಿಮೆಂಟರಿ ಕ್ವೆಶ್ಚನ್ ಹಾಕಿದಳು.

‘ಶಾಂತಂ ಪಾಪಂ. ಅವರು ಹೇಳಿದ್ದು ಸರ್ಕಾರಿ ನೌಕರರಿಗೆ’ ಎಂದು ಸ್ಪಷ್ಟೀಕರಣ ನೀಡಿದೆ.

‘ಅಂದ್ರೆ ಎಲ್ಲ ಸರ್ಕಾರಿ ನೌಕರರು ಈಗ ತಿಂದಿರುವುದು ಸಾಕು ಎಂದು ಅವರ ಅಭಿಪ್ರಾಯವೋ?’ ಎಂದು ಕೇಳಿದಳು. ‘ಅವರು ಒಂದಿಷ್ಟು ಸರ್ಕಾರಿ ನೌಕರರ ಬಗ್ಗೆ ಮಾತ್ರ ಹೇಳಿದ್ದು’ ಎಂದು ಇನ್ನೊಮ್ಮೆ ಕ್ಲಾರಿಫೈ ಮಾಡಿದೆ.

ADVERTISEMENT

‘ಹಾಗಿದ್ದರೆ ಅವರು ಮಾತ್ರ ಸಾಕಷ್ಟು ತಿಂದಿದ್ದಾರೆ ಎಂದು ಸೋಮಣ್ಣನವರಿಗೆ ಹೇಗೆ ಗೊತ್ತು? ಲೆಕ್ಕ ಇಟ್ಟಿದ್ದಾರೆಯೆ?’ ಎಂದು ಬಾಣ ಬಿಟ್ಟಳು. ‘ಅಂದಾಜು ಮೇಲೆ ಹೇಳಿರ್ತಾರೆ...’ ಎಂದು ಸಮಾಧಾನ ಮಾಡಲು ನೋಡಿದೆ.

‘ಅದ್ಹೇಗ್ರೀ ಅಂದಾಜು ಮಾಡಲಿಕ್ಕೆ ಆಗುತ್ತೆ? ಇದೇನು ಕಟ್ಟಡ ನಿರ್ಮಾಣ ಕಾರ್ಯವೇ ಅಂದಾಜು ಮಾಡಲಿಕ್ಕೆ?’ ಎಂದು ಟಿ.ಎನ್.ಸೀತಾರಾಂ ತರಹ ಪಾಟೀಸವಾಲು ಹಾಕಿದಳು.

‘ಮತ್ತೆ ನಿನ್ನ ಪಾಯಿಂಟ್ ಏನು?’ ಎಂದೆ.

‘ಅಲ್ರೀ ಸೋಮಣ್ಣನವರು ಉದ್ದೇಶಿಸಿ ಹೇಳಿದ್ದ ನೌಕರರಿಗೆ ಇನ್ನೂ ತೃಪ್ತಿ ಆಗಿಲ್ಲದಿರಬಹುದು. ಆದರೆ ತಿಂದಿದ್ದು ಸಾಕು ಎಂದು ಇವರೇ ಅವರ ಇನಿಂಗ್ಸ್ ಕ್ಲೋಸ್ ಮಾಡಲಿಕ್ಕೆ ಹೊರಟಿದ್ದಾರೆ. ಅವರು ಬ್ಯಾಟಿಂಗ್ ಮುಂದುವರಿಸಲು ಪ್ಲಾನ್ ಹಾಕಿಕೊಂಡಿದಾರೊ ಏನೋ?’

‘ಇರಬಹುದು’ ಎಂದು ಒಪ್ಪಿಕೊಂಡೆ.

‘ಮತ್ತೆ ತಿಂದಿದ್ದು ಸಾಕು ಎಂದು ಸೋಮಣ್ಣ ನವರು ಹೇಗೆ ಹೇಳ್ತಾರೆ?’ ಎಂದು ಕೇಳಿದಳು. ಶಿ ಹ್ಯಾಸ್ ಎ ಪಾಯಿಂಟ್ ಎಂದೆನಿಸಿತು.

‘ಮತ್ತೆ ಸೋಮಣ್ಣ ಅವರು ಆ ಪಾರ್ಟಿ ಈ ಪಾರ್ಟಿ ಮಂದಿ ತಿನ್ನುವುದರ ಬಗ್ಗೆ ಏಕೆ ಮಾತನಾಡಬಾರದು?’ ಎಂದು ಕೇಳಿದಳು.

‘ಆದರೆ ಆ ಮಂದಿ ಎಷ್ಟು ತಿಂದರೆ ‘ಸಾಕಷ್ಟು’ ಎಂದು ಎಸ್ಟಿಮೇಟ್ ಮಾಡುವುದು ಕಷ್ಟ ಎನ್ನುವ ಕಾರಣಕ್ಕೆ ಇರಬಹುದು’ ಎಂದೆ. ‘ಪರವಾಗಿಲ್ಲವೇ, ನೀವೂ ಒಮ್ಮೊಮ್ಮೆ ಸರಿಯಾಗಿ ಮಾತಾಡ್ತೀರ’ ಎಂದಳು. ಭೇಷ್ ಎಂದುಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.