ADVERTISEMENT

ಚುರುಮುರಿ : 'ಫ್ರೀ' ಅoಡ್ 'ಫೇರ್'...

ನಾರಾಯಣ ರಾಯಚೂರ್
Published 5 ಮೇ 2023, 20:30 IST
Last Updated 5 ಮೇ 2023, 20:30 IST
   

ನಾರಾಯಣ ರಾಯಚೂರ್

‘ಹಲೋ, ನಮಸ್ಕಾರ... ಫ್ರೀ ಆಗಿದೀರಾ ಸಾರ್?’

‘ಕರೆಂಟ್ ಫ್ರೀ, ಹಾಲು ಫ್ರೀ, ಅಕ್ಕಿ ಫ್ರೀ, ಸಿಲಿಂಡರ್ ಫ್ರೀ... ನಾನೂ ಫ್ರೀ... ಹೇಳಪ್ಪಾ ಡೈರೆಕ್ಟರ್ ಕಾರ್ತಿಕ್’.

ADVERTISEMENT

‘ಹೋ! ನೀವು ಪ್ರಣಾಲಿಗೆ ನೋಡ್ತಾಯಿದೀರಿ ಅಂತ ಕಾಣ್ಸತ್ತೆ, ಟಿ.ವಿ ಸೌಂಡ್ ಕೇಳ್ತಾಯಿದೆ’.

‘ಪ್ರಣಾಲಿಗೆ... ಅಲ್ಲಯ್ಯಾ ಪ್ರಣಾಳಿಕೆ! ನೀನು ಹೇಳೋದೂ ಸರೀನೆ. ಪ್ರಣಾಳಿಕೆಯ ಜೊತೆ ಪ್ರ‘ನಾಲಿಗೆ’ನೂ ಹರಿಬಿಡ್ತಾಯಿದಾರೆ’.

‘ನಾಲಿಗೆ ಅಲ್ಲ ಸಾರ್, ಖಡ್ಗ. ‘ರಕ್ತದಲ್ಲಿ ಬರಕೊಡ್ತೀನಿ’, ಅಬ್ಬಬ್ಬಾ ‘ವಿಷದ ಹಾವು’, ‘ವಿಷಕನ್ಯೆ’, ‘ನಾಲಾಯಕ್ ಮಗ’, ‘ಹುಚ್ಚ’ ಒಂದೇ ಎರಡೇ?... ಸಾರ್ ‘ನಾಲಾಯಕ್ ಮಗ’ ಸಿನಿಮಾ ಟೈಟಲ್‌ಗೆ ಚೆನ್ನಾಗಿದೆ ಸಾರ್, ನಮ್ಮ ಪ್ರೊಡ್ಯೂಸರ್‌ಗೆ ಹೇಳ್ತೀನಿ’.

‘ಈ ಚುನಾವಣಾ ಕೆಸರಾಟದಲ್ಲಿ ಹಲವಾರು ಟೈಟಲ್ ಕೊಡ್ತೀನಿ ತಗೊಳಪ್ಪಾ ಸಿನಿಮಾಕ್ಕೆ. ‘ತಾಯಿಗೆ ತಕ್ಕ ಮಗ’ ಹಿಟ್ಟಾಗಿತ್ತಲ್ಲ, ಹಾಗೇ  ‘ತಂದೆಗೆ ತಕ್ಕ ಮಗ’, ‘ತಾತನಿಗೆ ತಕ್ಕ ಮೊಮ್ಮಗ’, ‘ಸಿಡಿದೆದ್ದ ಸೊಸೆ’, ‘ಟಗರಿನ ಪೊಗರು’, ‘ರಾಜಾಹುಲಿಯ ರೋಷ’.

‘ಸಾರ್, ಈ ಹಬ್ಬಗಳಿಗೆ ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಸಿಲಿಂಡರ್ ಕೊಡ್ತಾಯಿದಾರಲ್ಲ ಅದರ ಬಗ್ಗೆ ‘ಯುಗಯುಗಾದಿ ಕಳೆದರೂ ಸಿಲಿಂಡರ್ ಮರಳಿ ಬರುತಿದೆ’ ಅಂತ ಸಾಂಗ್ ಬರೆದರೆ, ಮತ್ತೆ ‘ಈ ಭಾಗ್ಯ, ಆ ಭಾಗ್ಯ’ ಅಂತ ಏನೇನೊ ಭಾಗ್ಯಗಳಿವೆಯಲ್ಲ ಅವುಗಳ ಬಗ್ಗೆನೂ ಬರೆಸಬಹುದು ಸಾರ್’.

‘ನಮಗೆ ಈ ಭಾಗ್ಯಗಳ ವಾಸನೆ ತೋರಿಸಿ ಅವರು ‘ಆಡಳಿತ ಭಾಗ್ಯ’ ಪಡ್ಕೊಂಡು ಪ್ರಜೆಗಳನ್ನ ಐದು ವರ್ಷ ಭೋಗ್ಯಕ್ಕೆ ಹಾಕ್ಕೊಂಡು, ನಮ್ಮನ್ನ ‘ಆಡು’ಗಳ ಹಾಗೆ ಟ್ರೀಟ್ ಮಾಡ್ತಾರೆ. ನಾವು ಕುರಿಗಳಾಗ್ತೀವಷ್ಟೇ’.

‘ನೀನೇನೋ ರೀಲ್ ಬದುಕಿನವ, ರಿಯಲ್ ಬದುಕಿನಲ್ಲಿ ಈ ‘ಫ್ರೀ’ಗಳ (ಉಚಿತ, ಬಿಟ್ಟಿ) ಪರಿಣಾಮದ ಬಗ್ಗೆ ಯೋಚನೆ ಮಾಡು. ಸಾಧ್ಯವಾದರೆ ಆ ಬಗ್ಗೆ ಒಂದು ಸಿನಿಮಾ ಮಾಡಿ, ಮೂಲ ಸೌಕರ್ಯ, ನೀರಾವರಿ, ಉದ್ಯೋಗ, ಆರೋಗ್ಯ, ಸ್ವಾವಲಂಬನೆ ಇವುಗಳ ಕಡೆ ಹೆಚ್ಚಿನ ಆದ್ಯತೆ ಕೊಡದೇ ಸೋಮಾರಿಗಳನ್ನ ಮಾಡೋ ಈ ಸ್ಕೀಮ್‌ಗಳು ಬರೀ ಆಮಿಷ’.

‘ನಿಜ ಸಾರ್, ‘ಫ್ರೀ ಅಂಡ್ ಫೇರ್’ ಅಂತ ಈಗಲೇ ಫಿಲಂ ಚೇಂಬರ್‌ನಲ್ಲಿ ರಿಜಿಸ್ಟರ್ ಮಾಡ್ತೀನಿ ಸಾರ್’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.