ADVERTISEMENT

ಚುರುಮುರಿ: ಧನಲಕ್ಷ್ಮೀ ವಿಚಾರ

ಲಿಂಗರಾಜು ಡಿ.ಎಸ್
Published 13 ಜನವರಿ 2026, 0:05 IST
Last Updated 13 ಜನವರಿ 2026, 0:05 IST
<div class="paragraphs"><p>ಚುರುಮುರಿ: ಧನಲಕ್ಷ್ಮೀ ವಿಚಾರ</p></div>

ಚುರುಮುರಿ: ಧನಲಕ್ಷ್ಮೀ ವಿಚಾರ

   

ನಾನು, ತುರೇಮಣೆ ಪಾರ್ಕಲ್ಲಿ ಕುಂತಿದ್ದಾಗ ಒಬ್ಬ ಬುಡುಬುಡಿಕೆಯೋನು ಬಂದು ಅಮರಿಕೊಂಡ.

‘ಲಕ್ಷ್ಮೀ ವಿಚಾರ ಲಕ್ಷ್ಮೀ ವಿಚಾರ, ಧನಲಕ್ಷ್ಮೀ ವಿಚಾರ, ಗೌಡ, ನಿನ್ನ ಮನಸ್ಸಲ್ಲಿ ಒಂದು ವಿಚಾರ ಕಟಕಟಾ ಅಂತ ಕಡೀತಾ ಅದ. ಸತ್ಯವಾದ್ರೆ ಸತ್ಯ ಅನ್ನು, ಸುಳ್ಳಾದ್ರೆ ಸುಳ್ಳು ಅನ್ನು. ನಡೀತಾ ಇದ್ದೋನು ನಿಂತುಬುಟ್ಟೆ, ನಿಂತಿದ್ದೋನು ಕುಂತುಬುಟ್ಟೆ. ಹೌದಾ ಗೌಡ... ನಿನ್ನೆಸರು?’

ADVERTISEMENT

‘ನಾರಾಯಣ’ ಅಂದ್ರು ತುರೇಮಣೆ.

‘ನಾರಾಯಣ ಅಂದ್ರೆ ವೃಶ್ಚಿಕ ರಾಶಿ, ನಿನ್ನ ರಾಶಿಗೊಂದು ಮಿಸ್ಟೀಕದೆ ಗೌಡ, ಮಂಗಳವಾರ ಮಕಚೌರ ಮಾಡಬ್ಯಾಡ, ಬೇಸ್ತವಾರ ಬಡಗಲ ದಿಕ್ಕಿಗೆ ಹೋಗಬ್ಯಾಡ, ಅರ್ಥವಾಯಿತಾ ಗೌಡ?’

‘ಆತು ಕಣಪ್ಪ’ ತುರೇಮಣೆ ಒಪ್ಪಿಕ್ಕಂದರು.

‘ರಾಜಕಾರಣಿಗಳಂಗೆ ದೇವರ ದುಡ್ಡಿಗೆ, ಋಷಿ–ಮುನಿಗಳ ಹೆಸರಿನ ನಿಗಮ, ಮಂಡಳಿಗಳ ದುಡ್ಡಿಗೆ ಕೈಯಿಕ್ಕಬ್ಯಾಡ, ಅರ್ಥವಾಯಿತಾ ಗೌಡ, ರಾಜಕೀಯದ ಸುದ್ದಿ ಓದಬ್ಯಾಡ, ಕೇಳಬ್ಯಾಡ,ನಿನ್ನ ಬುದ್ಧಿ ನಿನ್ನ ಕೈಯಲ್ಲಿರಲಿ, ಶಾಸಕನಾದ ಮ್ಯಾಲೆ ಕ್ಯಾಮೆ ಬುಟ್ಟು ಗಾಳಿಗಂಟಲು ಮಾಡೋರ ಸಾವಾಸ ಬ್ಯಾಡ ಗೌಡ’ ಎಂದ ಬುಡುಬುಡಿಕಣ್ಣ.

‘ಸರಿ’ ಅಂದ್ರು ತುರೇಮಣೆ.

‘ರಾಜಕಾರಣಿಗಳೆಲ್ಲ ದೊಡ್ಡ ಮನುಷ್ಯರು. ಅವರ ದುಡ್ಡು ವರ್ಷಕ್ಕೆ ನೂರು ಭಾಗ, ಇನ್ನೂರು ಭಾಗ ಹೆಚ್ಚಿಗೆಯಾಗುತ್ತೆ. ಆದ್ರೆ ನಿನ್ನ ಕೈಯಾಗೆ ರೊಕ್ಕ, ರುಪಾಯಿ ನಿಂದ್ರಂಗಿಲ್ಲ ಗೌಡ, ತೂತುಮಡಕೆ ಹಂಗೆ ಸೋರಿ ಹೋಯ್ತಾ ಅದೆ ಗೌಡ, ಅದಕ್ಕೆ ಒಂದು ಮುಟ್ಟು, ಒಂದು ಚಿಟ್ಟು, ಒಂದು ಕೇಡು ಬಿಡುಗಡೆ ಆಗಬೇಕು.’

ಹೂ ಅಂದರು ತುರೇಮಣೆ.

‘ನಿನ್ನ ಕಾಡ್ತಾ ಇರೋ ಕಂಟಕ ವೊಡೆದು ಕೊಡ್ತೀನಿ. ಮೂರು ಅರಿಸಿನಕೊಂಬು, ಮೂರು ಕಾಳು ಉಪ್ಪು,ಮೂರು ಕಾಳು ಕರಿಮೆಣಸು, ನಿನ್ನ ಮನಸ್ಸಿಗೆ ಒಪ್ಪಿದ ದಕ್ಷಿಣೆ ಮಡಗು ಗೌಡ, ಈ ತಾಯತ ತಕ್ಕೋ’ ಅಂದೋನು ನೂರು ರುಪಾಯಿ ಇಸುಗಂದು ಕಡೆದು ಹೋಯ್ತಿದ್ದರೆ, ಬುಡುಬುಡಿಕಣ್ಣನ ಮಾತಿನ ಮ್ಯಾಜಿಕ್ಕು ಮತ್ತು ಲಾಜಿಕ್ಕು ಗೊತ್ತಾಗದೇ ಬೆಪ್ಪಾಗಿದ್ದೆವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.