ADVERTISEMENT

ಚುರುಮುರಿ: ಹರಾಜು ಸೂತ್ರ

ಸುಮಂಗಲಾ
Published 3 ಜುಲೈ 2022, 20:30 IST
Last Updated 3 ಜುಲೈ 2022, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಏ ನೋಡಿಲ್ಲಿ... ನಮ್ ಕರುನಾಡೇ ಫಸ್ಟ್ ಅಂತೆ! ಖರೇ ಇದು ಗಿನ್ನೆಸ್ ರೆಕಾರ್ಡಿಗಾರ ಸೇರಬಕು, ಇಲ್ಲಾಂದ್ರ ಒಂದು ಸ್ಪೆಷಲ್ ಕೆಟಗರಿ ನೊಬೆಲ್ ಪ್ರಶಸ್ತಿನಾರೆ ಕೊಡಬಕು’ ಪೇಪರು ಹಿಡಿದಿದ್ದ ಬೆಕ್ಕಣ್ಣ ಒಂದೇ ಸಮನೆ ಖುಷಿಯಿಂದ ವದರಿತು.

‘ಹೌದೇನಲೇ... ಯಾವುದ್ರಾಗೆ ಫಸ್ಟ್?’ ನಾನೂ ಅಗದಿ ಹುರುಪಿನಿಂದಲೇ ಕೇಳಿದೆ.

‘ಆಪರೇಶನ್ ಕಮಲ ಫಸ್ಟ್ ಕಂಡು ಹಿಡಿದಿದ್ದೇ ನಮ್ ಕರುನಾಡಿನೊಳಗ! ಇಲ್ಲಿ ಮೊದ್ಲು ಕಂಡುಹಿಡಿದು, ಪ್ರಯೋಗ ಮಾಡಿ, ಯಶಸ್ವಿ ಸೂತ್ರ ಅಂತ ಗೊತ್ತಾದ ಮೇಲೆ ಬ್ಯಾರೆ ರಾಜ್ಯದಾಗೆ ಪ್ರಯೋಗ ಶುರುಮಾಡಿ, ಎಲ್ಲಾ ಕಡಿಗೂ ನೂರಕ್ಕೆ ನೂರು ಸಕ್ಸೆಸ್’ ಬೆಕ್ಕಣ್ಣ ಇನ್ನೂ ಸಂಭ್ರಮದಲ್ಲಿಯೇ ತೇಲಾಡುತ್ತಿತ್ತು.

ADVERTISEMENT

‘ಮಂಗ್ಯಾನಂಥವನೇ... ಏನರ ವಿಜ್ಞಾನದ ಅನ್ವೇಷಣೆ ಅಂದ್ಕಂಡೆ. ಇದಕ್ಕೆ ಸ್ಪೆಷಲ್ ಕೆಟಗರಿ ನೊಬೆಲ್ ಅಲ್ಲಲೇ, ಇಗ್ನೊಬೆಲ್ ಪ್ರಶಸ್ತಿ ಕೊಡಬೇಕಷ್ಟೆ’.

‘ಈ ಸೂತ್ರ ಮೊದ್ಲು ಕಂಡುಹಿಡಿದಿದ್ದೇ ನಮ್ ಯಡ್ಯೂರಜ್ಜಾರು, ಈಗ ಅವ್ರನ್ನೇ ಪಾಪ ಮೂಲಿಗಿ ಕುಂಡ್ರಸ್ಯಾರ’ ಬೆಕ್ಕಣ್ಣ ಲೊಚಗುಡುತ್ತಲೇ ‘ಆಪರೇಶನ್ ಕಮಲ ಸೂತ್ರ ಎಲ್ಲಾ ಕಡಿಗಿ ಯಶಸ್ವಿಯಾಗಿ ಅನ್ವಯಿಸಲಕ್ಕೆ ಹತ್ಯಾರ. ಲಗೂನೆ ನಿಮ್ಮ ಹೆಸರಿಗೆ ಆ ಸೂತ್ರಾನ ಪೇಟೆಂಟ್ ಮಾಡಿಸ್ಕೋರಿ ಅಂತ ಅಜ್ಜಾರಿಗೆ ಹೇಳತೀನಿ’ ಎಂದಿತು.

‘ಅಲ್ಲಲೇ... ವಿಧಾನಸಭೆ ಚುನಾವಣೆ ನಡೆಸಾಕೆ ಮಹಾರಾಷ್ಟ್ರ ಸರ್ಕಾರ ಆವಾಗ 900 ಕೋಟಿಗೂ ಹೆಚ್ಚು ರೊಕ್ಕ ಖರ್ಚು ಮಾಡೈತಿ. ಹಿಂಗ ಆಪರೇಶನ್ ಕಮಲ, ಖರೀದಿ ವ್ಯವಹಾರ ಮಾಡೂದಿದ್ದರ ಅಷ್ಟ್ ಖರ್ಚು ಮಾಡಿ ಚುನಾವಣೆ ಎದಕ್ಕ ಮಾಡಬೇಕಲೇ? ಎಲ್ಲಾ ಮಂತ್ರಿ ಕುರ್ಚಿನ ಹರಾಜಿಗಿಟ್ಟು, ಗೆದ್ದವರನ್ನ ಮಂತ್ರಿ ಮಾಡಿದರ ಮುಗೀತಿಲ್ಲೋ...’ ಎಂದೆ.

‘ಇನ್ ಸ್ವಲ್ಪೇ ದಿನದಾಗೆ ಅದಕ್ಕೂ ಒಂದು ಹೊಸ ತಂತ್ರ ಕಂಡುಹಿಡಿತಾರ! ಯಾವ ಪಕ್ಷ ಬಂದ್ರೂ ನಿಮಗ ಶ್ರೀಸಾಮಾನ್ಯರಿಗೆ ಸ್ವರ್ಗ ತಂದ್ಕೊಡಂಗಿಲ್ಲ. ಕುರ್ಚಿಗಾಗಿ ಒಳಗೊಳಗೇ ಕಿತ್ತಾಡೂವಂಥ ಹತ್ ಪಕ್ಷಗಳು ಎದಕ್ಕ ಬೇಕು... ಏಕ್ ಭಾರತ್ ಏಕ್ ಪಕ್ಷ’ ಎಂದು ಬೆಕ್ಕಣ್ಣ ಗಹಗಹಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.