ADVERTISEMENT

ಚುರುಮುರಿ: ಸುದ್ದಿ, ಗದ್ಲ!

ಬಿ.ಎನ್.ಮಲ್ಲೇಶ್
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
   

‘ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ, ಉಗ್ರರನ್ನ ಯುದ್ಧ ನುಂಗಿ, ಯುದ್ಧಾನ ತಮನ್ನಾ ನುಂಗಿ, ತಮನ್ನಾನ ಬುಕರ್ ನುಂಗಿ, ಆಡಲು ಬಂದ ಕಮಲ್‌ನನ್ನ ಆರ್‌ಸಿಬಿ ನುಂಗಿತ್ತಾ ತಂಗಿ...’ ಹರಟೆ ಕಟ್ಟೆಗೆ ಹಾಡುತ್ತಾ ಬಂದ ಗುಡ್ಡೆ.

‘ಏನೋ ಗುಡ್ಡೆ, ಯಾವುದೋ ಹೊಸ ಹಾಡು ಹೊಸದಂಗೈತಿ?’ ಚಾದಂಗಡಿ ಮಂಜಮ್ಮ ಕೇಳಿದಳು.

‘ಸುಮ್ನೆ ತಮಾಷೆಗೆ ಮಂಜಮ್ಮ, ಒಂದು ಹೊಸ ಸುದ್ದಿ ಬರ್ತಿದ್ದಂಗೆ ಹಳೇದು ಹೆಂಗೆ ಮರೆತೋಗುತ್ತೆ ಅಂತ. ಮೊನ್ನೆ ಮೊನ್ನೇದು ಮಳೆ ಅವಾಂತರ, ಜಾತಿ ಜನಗಣತಿ ಗದ್ಲ ಎಲ್ಲ ಮರೆತೇ ಹೋತು ನೋಡು...’ ಗುಡ್ಡೆ ನಕ್ಕ.

ADVERTISEMENT

‘ನೆನಪು ಮಾಡಾಕೆ ನಮ್ ತೆಪರನ ಟೀವಿ ಐತಲ್ಲ ಬಿಡೋ, ನಾವ್ ಬ್ಯಾಡ ಅಂದ್ರೂ ಅವರೇನ್ ಸುಮ್ನಿರ್ತಾರಾ?’

‘ಮರೀಬೇಕು ಮಂಜಮ್ಮ, ಮರೆವು ವರ ಇದ್ದಂಗೆ. ಹಳೇವೆಲ್ಲ ಹಂಗೇ ನೆನಪಿದ್ರೆ ನಮ್ ತೆಲಿ ಢಮಾರ್ ಅಷ್ಟೇ...’ ದುಬ್ಬೀರ ಹೇಳಿದ.

‘ಕರೆಕ್ಟ್ ದುಬ್ಬೀರ, ನನ್ ಉದ್ರಿ ಬಾಕಿನೂ ಹಂಗೇ ಮರೀಬೇಕು ಮಂಜಮ್ಮ, ನೆನಪಿಟ್ಕಂಡು ಕೊರಗಬಾರ್ದು...’ ಗುಡ್ಡೆ ನಗುತ್ತಾ ಹೇಳಿದಾಗ, ‘ಅದೆಲ್ಲ ನನ್ನತ್ರ ನಡೆಯಲ್ಲ, ಕಂಬಕ್ಕೆ ಕಟ್ಟಿ ವಸೂಲಿ ಮಾಡ್ತೀನಿ...’ ಮಂಜಮ್ಮ ಗರಂ ಆದಳು.

‘ಹೋಗ್ಲಿ ಬಿಡು, ಈಗ ಈ ಭಾಷೆ ಗದ್ಲ ಎಲ್ಲಿಗೆ ಬಂತೋ ತೆಪರ?’ ಗುಡ್ಡೆ ಕೇಳಿದ. ತೆಪರೇಸಿ ಮಾತಾಡಲಿಲ್ಲ.

‘ಅವ್ನು ಮಾತಾಡಲ್ಲ ಬಿಡೋ...’ ಎಂದ ದುಬ್ಬೀರ.

‘ಯಾಕೆ?’

‘ಮೊನ್ನೆ ಆರ್‌ಸಿಬಿ ವಿಜಯೋತ್ಸವ ನೋಡ್ಕಂಡು ಕಪ್ ನಮ್ದೇ, ಕಪ್ ನಮ್ದೇ ಅಂತ ಕುಣ್ಕೋತ ಮನಿಗೆ ಬಂದ್ನಂತೆ. ಅವನೆಂಡ್ತಿ ಪಮ್ಮಿ ಕಪಾಳಕ್ಕೊಂದು ಬಿಗಿದು, ‘ಕಪ್ ಒಂದೇ ಅಲ್ಲ, ಈ ತಟ್ಟೆ, ಚೊಂಬು, ಪಾತ್ರೆ ಎಲ್ಲ ನಿಮ್ದೇ, ಚೆನ್ನಾಗಿ ತೊಳೆದಿಡಿ’ ಅಂದ್ಲಂತೆ!’

ದುಬ್ಬೀರನ ಮಾತು ಕೇಳಿ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.