ADVERTISEMENT

ಚುರುಮುರಿ: ನಾನ್‌ವೆಜ್ ಟಿ.ವಿ

ಆನಂದ ಉಳಯ
Published 25 ಆಗಸ್ಟ್ 2022, 19:45 IST
Last Updated 25 ಆಗಸ್ಟ್ 2022, 19:45 IST
ಚುರುಮುರಿ: ನಾನ್‌ವೆಜ್ ಟಿ.ವಿ.
ಚುರುಮುರಿ: ನಾನ್‌ವೆಜ್ ಟಿ.ವಿ.   

‘ಇದೇನ್ರಿ ನಮ್‌ ಟೀವಿ ನಾನ್‌ವೆಜ್ ಆಗ್ತಾ ಇದೆಯಲ್ಲ?’ ಎಂದು ಹೆಂಡತಿ ಕೇಳಿದಾಗ ನನಗೆ ಆಶ್ಚರ್ಯ.

‘ಕಲರ್, ಬ್ಲ್ಯಾಕ್ ಆ್ಯಂಡ್ ವೈಟ್, ಎಲ್‍ಸಿಡಿ, ಎಲ್‍ಇಡಿ ಟೀವಿಗಳ ಬಗ್ಗೆ ಕೇಳಿದೀನಿ. ಇದ್ಯಾವುದು ನಾನ್‌ವೆಜ್ ಬ್ರ್ಯಾಂಡ್?’ ಎಂದು ಕೇಳಿದೆ.

‘ಈಗೀಗ ನ್ಯೂಸ್ ಚಾನೆಲ್ ಆನ್ ಮಾಡಿದರೆ ಸಾಕು ಬರೀ ಚಿಕನ್, ಮಟನ್, ಹಂದಿ, ಕೋಳಿ, ಮೊಟ್ಟೆ ಇದೇ ಸುದ್ದಿ’ ಎಂದಳು.

ADVERTISEMENT

‘ಅಂದರೆ ಎಲ್ಲಾ ಚಾನೆಲ್‍ಗಳಲ್ಲೂ ಬರೀ ನಾನ್‌ವೆಜ್ ಹೊಸ ರುಚಿ ಕಾರ್ಯಕ್ರಮಗಳೇ ಬರ್ತಿವೆಯೇನು?’

‘ಅಲ್ಲಾರೀ, ಪ್ರತಿದಿನ ಅವರು ಇವತ್ತು ಕೋಳಿ ತಿಂದರು, ಚಿಕನ್ ತಿಂದರು... ಹೀಗೆ ಅವರೆಲ್ಲ ಏನು ತಿಂದರೂಂತ ಗೊತ್ತಾಯಿತಷ್ಟೇ ಅಲ್ಲ, ಯಾವ ದೇವಸ್ಥಾನಕ್ಕೆ ಹೋದರು ಅಂತ ಸಹ ತಿಳಿಯುತ್ತೆ’.

‘ಹೋಗಲಿ. ಅವರ ಭಕ್ತಿ ಅವರ ನಂಬಿಕೆ’.

‘ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದಂತೆ’.

‘ಯಾರು ಹೇಳಿದ್ದು?’

‘ಯಾರು ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಆದರೆ ಅದು ಸಂಪ್ರದಾಯ. ಅದನ್ನು ಪಾಲಿಸಬೇಕು. ಇವರು ಪಾಲಿಸಿಲ್ಲ ಅನ್ನೋದೇ ಕಾಂಟ್ರವರ್ಸಿ’.

‘ಅದು ಚಾನೆಲ್‍ನವರಿಗೆ ಬಾಡೂಟದಂತೆ ಆಗಿದೆ ಅನ್ನು’.

‘ಕರೆಕ್ಟಾಗಿ ಹೇಳಿದ್ರಿ. ಅದಕ್ಕೇ ಟೀವಿ ಆನ್ ಮಾಡಿದರೆ ಬರೇ ಚಿಕನ್, ಮಟನ್, ಹಂದಿ ಮಾಂಸ ಅಂತಾನೆ ಬರ್ತಾ ಇರುತ್ತೆ’.

‘ಬರೀ ಚಿಕನ್, ಮಟನ್‌ ಅಂತ ಹೇಳ್ತಿದೀಯ? ಮೀನೂಟದ ಬಗ್ಗೆ ಪ್ರಸ್ತಾಪವೇ ಇಲ್ವಾ?’

‘ಹೌದೂರಿ, ಫಿಶ್ ಬಗ್ಗೆ ಯಾರೂ ಮಾತೇ ಆಡ್ತಿಲ್ಲ. ಫಿಶ್ ವೆಜ್ಜಾ?’

‘ಕರ್ನಾಟಕದಲ್ಲಿ ಫಿಶ್ ನಾನ್‌ವೆಜ್ಜೇ, ಆದರೆ ಬಂಗಾಲ ಕಡೆ ಫಿಶ್ ತರಕಾರಿ ಎಂದೇ ಕೆಲವರು ಭಾವಿಸ್ತಾರೆ’.

‘ಫಿಶ್ ತಿಂದು ದೇವಸ್ಥಾನಕ್ಕೆ ಹೋಗಿ ಕೈ ಮುಗಿದ್ರು ಅಂತ ಯಾರೂ ಆಪಾದನೆ ಮಾಡ್ತಿಲ್ಲ’.

‘ಯಾವುದು ಮುಖ್ಯ? ಚಿಕನ್, ಮಟನ್ನೋ ಭಕ್ತಿನೋ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.