ADVERTISEMENT

ಚುರುಮುರಿ| ಕುರ್ಚಿ ಭದ್ರಾಸನ!

ಬಿ.ಎನ್.ಮಲ್ಲೇಶ್
Published 23 ಜೂನ್ 2022, 19:31 IST
Last Updated 23 ಜೂನ್ 2022, 19:31 IST
Churumuri 24062022
Churumuri 24062022   

‘ಲೇ ಗುಡ್ಡೆ, ನೀನೂ ತೆಪರ ಎಲ್ಲೋಗಿದ್ರಲೆ ಎರಡು ದಿನ ಕಾಣ್ಲೇ ಇಲ್ಲ?’ ದುಬ್ಬೀರ ಕೇಳಿದ.

‘ನಾವಾ? ಮೋದಿ ಸಾಹೇಬ್ರ ಯೋಗಾಸನ ನೋಡಾಕೆ ಹೋಗಿದ್ವಿ. ಅವ್ರು ಅವೆಂತೆಂಥವೋ ಆಸನಗಳನ್ನ ಎಷ್ಟು ಸಲೀಸಾಗಿ ಮಾಡಿದ್ರು ಅಂತೀಯ’.

‘ಹೌದಾ? ಏನೇನ್ ಆಸನ ಹಾಕಿದ್ರು?’

ADVERTISEMENT

‘ಮುಖ್ಯಮಂತ್ರಿ ಬಸಣ್ಣರಿಗೆ ಅಭಯ ಹಸ್ತಾಸನ, ಯಡ್ಯೂರಪ್ಪರನ್ನ ಕಂಡ ಕೂಡ್ಲೆ ಮಂದಸ್ಮಿತಾಸನ, ಎಮ್ಮೆಲ್ಲೆ ರಾಮದಾಸಣ್ಣರ ಬೆನ್ನ ಮೇಲೆ ಪ್ರೀತಿಯ ಗುದ್ದಾಸನ, ಸೇರಿದ್ದ ಮಂದಿಗೆಲ್ಲ ನಮಸ್ಕಾರಾಸನ ಮಾಡಿದ್ರಪ್ಪ...’

‘ಅಷ್ಟೇನಾ? ಮಂತ್ರಿಗಳು, ಶಾಸಕರು ಏನೂ ಆಸನ ಹಾಕ್ಲಿಲ್ವಾ?’

‘ಎಲ್ರೂ ಅವರವರ ಊರಲ್ಲೇ ಆಸನ ಹಾಕಿದ್ರಂತಪ, ನಮ್ ರೇಣುಕಾಚಾರ್ಯರು ‘ನನ್ನ ಮಂತ್ರಿ ಮಾಡಿ’ ಅಂತ ಅಲ್ಲಿಂದ್ಲೇ ದೀರ್ಘದಂಡ ನಮಸ್ಕಾರಾಸನ ಹಾಕಿದ್ರಂತೆ. ಯತ್ನಾಳ್ ಸಾಹೇಬ್ರು ಯಡ್ಯೂರಪ್ಪ ವಿರುದ್ಧ ಮೋದಿ ಹತ್ರ ಭಿನ್ನ ಭುಜಂಗಾಸನ ಹಾಕಿದ್ರೆ, ವಲಸೆ ಮಂತ್ರಿಗಳೆಲ್ಲ ಕುರ್ಚಿ ಭದ್ರಾಸನ ಹಾಕಿ ದ್ವಿಪಾದ ಸಾಷ್ಟಾಂಗಾಸನ ಮಾಡಿದ್ರಂತೆ’.

‘ವಿರೋಧ ಪಕ್ಷದೋರು?’

‘ಸಿದ್ರಾಮಣ್ಣ ಯಥಾಪ್ರಕಾರ ಬಬ್ರುವಾಹ
ನಾಸನ, ಕುಮಾರಣ್ಣ ಧನುರಾಸನ ಹಾಕಿ ಬಾಣದ ಮೇಲೆ ಬಾಣ ಬಿಟ್ರಂತೆ. ಆದ್ರವು ಒಂದೂ ನಾಟಲಿಲ್ಲಂತೆ...’

‘ಅವು ತೆನೆ ಬಾಣ ಇರ್ಬೇಕು, ಹೂವಿದ್ದಂಗೆ ಇರ್ತವೆ, ಹೆಂಗೆ ನಾಟ್ತವೆ? ಅದಿರ್‍ಲಿ, ಈ ತೆಪರ ಯಾಕೆ ಏನೂ ಮಾತಾಡ್ತಿಲ್ಲ? ಇವ್ನೂ ಆಸನ ಗೀಸನ ಹಾಕಿದ್ನೋ ಹೆಂಗೆ?’

‘ಅಯ್ಯೋ ಅವುಂದು ದೊಡ್ಡ ಕತೆ. ಮೋದಿ ಸಾಹೇಬ್ರುನ್ನ ನೋಡಿ ಅದೆಂಥದೋ ಅರ್ಧ ಮತ್ಸ್ಯೇಂದ್ರಾಸನ ಅಂತ ಮಾಡಾಕೋಗಿದ್ದ. ಕೈ ಒಳಗೆ ಕಾಲು ಸಿಗಾಕಂಬಿಟ್ಟಿತ್ತು. ಊರ ಮಂದಿ ಎಲ್ಲ ಬಂದು ಬಿಡಿಸಿದ್ರು ಮಾರಾಯ...’

ಗುಡ್ಡೆ ಮಾತು ಕೇಳಿ ದುಬ್ಬೀರನಿಗೆ ನಗು ತಡೆಯಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.