ADVERTISEMENT

ಚುರುಮುರಿ: ಚಡ್ಡಿಗೊಂದು ಕಾಲ!

ಬಿ.ಎನ್.ಮಲ್ಲೇಶ್
Published 9 ಜೂನ್ 2022, 19:31 IST
Last Updated 9 ಜೂನ್ 2022, 19:31 IST
   

‘ರೀ... ಟ್ರೇನು ಲೇಟಾತು, ಜಸ್ಟ್ ಈಗ ಅಮ್ಮನ ಮನೆಗೆ ಬಂದೆ, ನೀವೇನ್ ಮಾಡ್ತಿದೀರಿ?’

‘ನಾನಾ? ನೀ ಮಾಡಿಟ್ಟಿದ್ದ ಚಿತ್ರಾನ್ನದ ಗೊಜ್ಜಿಗೆ ಅನ್ನ ಕಲೆಸ್ಕೊಂಡು ತಿಂತಾ ಇದೀನಿ’.

‘ಆಹಾ, ಚೆನ್ನಾಗಿ ರೈಲು ಬಿಡ್ತೀರ’.

ADVERTISEMENT

‘ನಿನ್ತೆಲಿ, ಬರೀ ಅನುಮಾನ ನಿಂದು. ಇನ್ನೂ ಊರು ಮುಟ್ಟಿಲ್ಲ, ಆಗ್ಲೇ ಫೋನು. ಮನೇಲಿದೀನಿ ಅಂತ ಪ್ರೂವ್ ಮಾಡಾಕೆ ಮಿಕ್ಸಿ ಆನ್ ಮಾಡಿ ಕೇಳಿಸ್ಲಾ?’

‘ಅದೆಲ್ಲ ಹಳೇ ಸ್ಟೈಲು, ನಾನು ಹಿಡನ್ ಕ್ಯಾಮೆರಾ ಫಿಕ್ಸ್ ಮಾಡಿ ಬಂದಿದೀನಿ, ನಂಗೆಲ್ಲ ಗೊತ್ತಾಗುತ್ತೆ. ನಾನಿಲ್ಲ ಅಂತ ನಿಮ್ ಹರಟೆ ಫ್ರೆಂಡ್ಸ್‌ನೆಲ್ಲ ಮನಿಗೆ ಕರೀಬೇಡಿ. ನೀವೂ ಹೊರಗಡೆ ಹೋಗಿ ರಾತ್ರಿ ಲೇಟಾಗಿ ಟೈಟಾಗಿ ಬರ್ಬೇಡಿ ಆಯ್ತಾ?’

‘ಮತ್ತೆ ನೀನಿಲ್ಲ ಅನ್ನೋ ಸಂಭ್ರಮ ಹೆಂಗೆ ಆಚರಿಸೋದು?’

‘ಸಂಭ್ರಮನಾ? ಬಂದ್ಮೇಲೆ ನೋಡ್ಕೋತೀನಿ... ಬೆಳಿಗ್ಗೆ ನಾನೇಳಿದ್ದು ಎಲ್ಲ ನೆನಪಿದೆ ತಾನೆ? ಗ್ಯಾಸ್‌ನೋನು ಬಂದ್ರೆ ಸಿಲಿಂಡರ್ ಇಸ್ಕೊಳಿ, ಹಾಲು ಬಿಸಿ ಮಾಡಿ, ಇಲ್ಲಾಂದ್ರೆ ಒಡೆದು ಹೋಗುತ್ತೆ. ರಾತ್ರಿಗೆ ಅನ್ನ ಮಾಡ್ಕಳಿ, ಕುಕ್ಕರ್‌ಗೆ ಒಂದು ಕಪ್ ಅಕ್ಕಿ, ಎರಡು ಕಪ್ ನೀರು... ನಾನಿಲ್ಲ ಅಂತ ಅಕ್ಕಪಕ್ಕದ ಮನೆಯೋರು ಯಾರೂ ತಿಂಡಿ ಕೊಡಲ್ಲ, ಕಾಯ್ಬೇಡಿ... ಮತ್ತೇನೇಳಿದ್ದೆ?’

‘ಅಮ್ಮಾ ತಾಯಿ, ಅಲ್ಲಿ ಅಮ್ಮನ ಮನೇಲಿ ನಾಕು ದಿನ ಆರಾಮಾಗಿ ಇದ್ದು ಬಾ, ನನ್ ಬಗ್ಗೆ ತೆಲಿ ಕೆಡಿಸ್ಕಾಬೇಡ’.

‘ಹ್ಞಾಂ ಮರೆತಿದ್ದೆ, ಬಟ್ಟೆಗಳನ್ನ ಒಣಗಾಕಿದ್ದೆ. ಹಸಿ ಇದ್ರೂ ಪರ್ವಾಗಿಲ್ಲ, ಚಡ್ಡಿ, ಪ್ಯಾಂಟ್‌ಗಳನ್ನು ಮಾತ್ರ ಒಳಕ್ಕೆ ತಂದು ಒಣಗಾಕಿ. ಎಲ್ಲ ಕಡೆ ಚಡ್ಡಿ ಕದೀತಿದಾರಂತೆ. ರಾಜಕೀಯದೋರು ಚಡ್ಡಿ ಸುಡೋ ಪ್ರೋಗ್ರಾಂ ಹಾಕ್ಕಂಡಿದಾರಂತೆ...’

‘ಅಲ್ಲ, ಚಡ್ಡಿ ಕದೀತಾರೆ ಸರಿ, ಪ್ಯಾಂಟ್ ಯಾಕೆ ಒಳಕ್ಕೆ ತರ್‍ಲಿ?’

‘ನಿಮ್ ತಲೆ, ಪ್ಯಾಂಟ್ ಕಟ್ ಮಾಡಿದ್ರೆ ಚಡ್ಡಿ ಆಗಲ್ವಾ? ಸುಡೋಕೆ ಎಂಥ ಚಡ್ಡಿ ಆದ್ರೇನು, ನೀವೊಳ್ಳೆ...’

ಫೋನ್ ಕಟ್ಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.