ADVERTISEMENT

ಹಿಟ್‌ ವಿಕೆಟ್‌ ಬೇಗ್‌!

ಗುರು ಪಿ.ಎಸ್‌
Published 19 ಜೂನ್ 2019, 19:45 IST
Last Updated 19 ಜೂನ್ 2019, 19:45 IST
   

‘ಹಿಂದೆ ಫೀಲ್ಡರ್‌ ಇರಲಿಲ್ಲ ಅಂದ್ರೆ, ರೋಹಿತ್‌ ಶರ್ಮಾ ಔಟ್‌ ಆಗ್ತಿರಲಿಲ್ಲ’– ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಮೇಲೆ ಭಾರತದ ಗೆಲುವನ್ನು ವಿಶ್ಲೇಷಿಸುತ್ತಾ ಹೇಳ್ದ ವಿಜಿ. ‘ಫೀಲ್ಡರ್‌ ಇರಲಿಲ್ಲ ಅಂದ್ರೆ ಯಾರೂ ಔಟಾಗಲ್ಲ ಸರ್‌... ಸುಮ್‌ಸುಮ್ನೆ ಹಿಟ್‌ ವಿಕೆಟ್‌ ಆಗೋಕೆ ಅವರನ್ನೇನು ಬೇಗ್‌ ಸಾಹೇಬ್ರು ಅಂದ್ಕೊಂಡ್ರಾ?’ ತಿರುಗೇಟು ಕೊಟ್ಟ ಮುದ್ದಣ್ಣ.

‘ಬೇಗ್‌ ಹಿಟ್‌ ವಿಕೆಟ್‌ ಆದ್ರಾ... ಹೆಂಗೆ?’ ಕೇಳ್ದ ವಿಜಿ. ‘ಕಮಲ ಟೀಂನವರು ಫುಲ್‌ಟಾಸ್‌ ಬಾಲ್‌ ಹಾಕ್ತಾರೆ. ಗಲ್ಲಿ ಕ್ರಿಕೆಟ್‌ ಆಗಿದ್ರಿಂದ ವಿಕೆಟ್‌ ಹಿಂದೆ ತಮ್ಮ ಟೀಂನವರೇ ಇರ್ತಾರೆ... ಮುಂದೆ ಹೋದ್ರೂ ಸ್ಟಂಪ್‌ ಮಾಡಲ್ಲ, ಹಿಂದೆ ವಿಕೆಟ್‌ಗೆ ಕಾಲು ಟಚ್‌ ಆದ್ರೂ ಅಪೀಲ್‌ ಮಾಡಲ್ಲ ಅಂದುಕೊಂಡು ಪಿಚ್‌ನಲ್ಲಿ ಯದ್ವಾ ತದ್ವಾ ಓಡಾಡ್ತಿದ್ರು’.

‘ಮುಂದೇನಾಯ್ತು?’

ADVERTISEMENT

‘ಏನಾಗುತ್ತೆ...? ಕಮಲ ಟೀಂನವರು ಫುಲ್‌ಟಾಸ್‌ ಬದಲು ತಲೆ ಮೇಲೆ ಹೋಗೋ ರೀತಿ ಚೆಂಡೆಸೆದ್ರು. ಹಿಂದೆ ಹಿಂದೆ ಹೋದ ಬೇಗ್‌ ಸಾಹೇಬ್ರ ಕಾಲು ವಿಕೆಟ್‌ಗೆ ಬಡಿಯಿತು. ಹಿಟ್‌ ವಿಕೆಟ್‌... ಹಿಟ್‌ ವಿಕೆಟ್‌ ಅಂತಾ ‘ಕೈ’ ಟೀಂನ ಕ್ಯಾಪ್ಟನ್ನೇ ಕೂಗಿದ್ರು’ ನಕ್ಕ ಮುದ್ದಣ್ಣ.

‘ಸೀನಿಯರ್‌ ಪ್ಲೇಯರ್ಸ್‌ ವಿರುದ್ಧ ಮಾತಾಡಿದ್ದೇ ಬೇಗ್‌ರ ಈ ಸ್ಥಿತಿಗೆ ಕಾರಣವಂತೆ?’ ವಿಜಿ ಕೇಳ್ದ. ‘ಜ್ಯುವೆಲರಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೂ ಕಾರಣ ಇರಬಹುದು ಅನ್ನೋ ಗುಸುಗುಸು ಇದೆ’ ಎಂದ ಮುದ್ದಣ್ಣ ಮುಂದುವರಿದು ಕೇಳ್ದ, ‘ಅದ್ಸರಿ, ಮೊನ್ನೆ ಸಂಸತ್ತಿನಲ್ಲಿ ಇಂಡಿಯಾ–ಪಾಕಿಸ್ತಾನ ಮ್ಯಾಚ್‌ ಏನಾದ್ರೂ ನಡೀತಿತ್ತಾ...?ಒಬ್ರು ‘ಜೈ ಶ್ರೀರಾಮ್‌’ ಅಂದ್ರೆ, ಮತ್ತೊಬ್ಬರು ‘ಅಲ್ಲಾಹು ಅಕ್ಬರ್‌’ ಅಂತಾ ಕೂಗ್ತಿದ್ರು... ಮತ್ಯಾರೋ ವಂದೇ ಮಾತರಂ ಅಂತಾ ನಾನ್ಯಾಕೆ ಕೂಗ್ಲಿ ಅಂತಿದ್ರಲ್ಲ... ಅದಕ್ಕೆ ಕೇಳ್ದೆ’.

‘ಅದೂ ಒಂಥರಾ ಪಂದ್ಯವೇ... ಅವರು ಜನರ ಖುಷಿಗಾಗಿ ಆಡಿದ್ರೆ, ಇವರು ಕುರ್ಚಿಗಾಗಿ ಆಡ್ತಾರೆ... ಓಲೈಕೆಯಿಂದ ಬರುವ ಮತಗಳೇ ವರ್ಲ್ಡ್‌ಕಪ್‌’ ಅಂತ ನಕ್ಕ ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.