ADVERTISEMENT

ಚುರುಮುರಿ: ಬಿಲ್ಲು ಸಿಕ್ಕರೆ

ಲಿಂಗರಾಜು ಡಿ.ಎಸ್
Published 19 ಅಕ್ಟೋಬರ್ 2020, 19:30 IST
Last Updated 19 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವತ್ತರೆಗೆ ತುರೇಮಣೆ ಮನೇತಕ್ಕೋದೆ. ಅವರು ‘ಬಿಲ್ಲು ಸಿಕ್ಕರೆ ಕೊಳ್ಳಿರೋ ನೀವೆಲ್ಲರೂ, ಬಿಲ್ಲು ಸಿಕ್ಕರೆ ಕೊಳ್ಳಿರೋ, ಬಿಲ್ಲು ಸಿಕ್ಕರೆ ಸವಿ ಬಲ್ಲವರೇ ಬಲ್ಲರು’ ಅಂತ ಪಲುಕ್ತಾ ಕುಂತಿದ್ದರು. ನಾನು ನಗ ತಡಿನಾರದೆ ‘ಇದೇನ್ಸಾ ಪುರಂದರದಾಸರ ಕೀರ್ತನೇನಾ ಚೀರ್ತನೆ ಮಾಡಿದ್ದರಿ?’ ಅಂದೆ.

‘ಹ್ಞೂಂಕನಾ ಸಣ್ಣೈದ, ನನಗೇನೋ ಎಲ್ಲಾ ಕಡೆ ಈಗ ಬಿಲ್‍ಪುತ್ರರೇ ಕಾಣ್ತಾವರೆಕಪ್ಪ!’ ಅಂದ್ರು.

‘ಬಿಲ್‍ಪುತ್ರ ಅಂದ್ರೇನ್ಸಾ’ ಅಂದೆ.

ADVERTISEMENT

‘ದುಡ್ಡು ಮಾಡಕ್ಕೆ ಅಡವಾದ ಜಾಗದಗೆ ನಿಂತು ಬಿಲ್ಲು-ಬವನಾಸಿ ಹುಡುಕೋರೇ ಬಿಲ್‍ಪುತ್ರರು ಕನೋ ಪಾಪರಾ! ಕೊರೊನಾ ನಕಲಿ ಪೇಶೆಂಟ್ ಬಿಲ್ಲು ಸಾವಿರ ಸಾವಿರ, ದೇಸ ಸೇವೆ ಮಾಡಿ ಶಾಸಕರು ಆಸ್ಪತ್ರಿಗೆ ಸೇರಿದ ಬಿಲ್ಲು ಲಕ್ಸ ಲಕ್ಸ, ಹತ್ತು ಸಾವಿರ ಹಾಸಿಗೆ ಕೇಂದ್ರದ ಬಿಲ್ಲು ಕೋಟಿ ಕೋಟಿ! ಪಾಲಿಕೇಲಿ 680 ಕೋಟಿ ಬಿಲ್ಲಿನ ಬಾಬ್ತು 30 ಕೋಟಿ ಗುಂಜಿಕ್ಯಂಡು ಗೋವಿಂದಾಗ್ಯದಂತೆ! ಈ ಗಾಂಡೀವಿಗಳೆಲ್ಲಾ ಉಂಡಾದ ಮ್ಯಾಲೆ ಸರ್ಕಾರದ ಬೊಕ್ಕಸದಗೇ ಮೋಟುಗುಳ ಬುಟ್ರೆ ನಮಗೇನೂ ಉಳಿಯಕಿಲ್ಲ’.

‘ಅದ್ಯಾಕೆ ಸಾ ಹಂಗಂತೀರಾ? ಮನ್ನೆ ನಿರ್ಮಲಕ್ಕಾರು ಹಬ್ಬ ಮಾಡ್ಕಳಿ ಅಂತ ಕೈಗೆ ಕಾಸು ಕೊಟ್ಟಿಲ್ಲುವುರಾ?’

‘ಅಯ್ಯೋ ನಾಚಾರ್ಲು ನನ ಮಗನೇ. ಅಂಗಡೀಗೋಗಿ 18 ಪರ್ಸೆಂಟು ಟ್ಯಾಕ್ಸು ಕೊಟ್ಟು ಮಾಲು ತಂದ ಮ್ಯಾಲೆ, ಅವರು ಕೊಟ್ಟುದ್ದರಲ್ಲಿ ನಮ್ಮಂತೇ ಜನಸಾಮಾನ್ಯರ ಯೇಗ್ತೆಗೆ ಜಿಎಸ್‍ಟಿ ಬಿಲ್ಲು ಬುಟ್ರೆ ಬ್ಯಾರೇದೇನು ಸಿಕ್ಕಕುಲ್ಲ ಕನೋ’.

‘ಬುಡೀ ಸಾ, ಹೋಗೀ ಬಂದು ಮೂಗಿ ಕೆಣಕಿದಂಗೆ ಅಕ್ಕಡಿಂದ ಮಾಮೇರಿ ಮಳೆ, ಇಕ್ಕಡಿಂದ ಕೊರೊನಾ ನಡಂತರದಲ್ಲಿ ನಮ್ಮುನ್ನ ಅಮಿಕ್ಕೊಂಡು ಗುಮ್ಮತಾವೆ. ನಮಗೆ ಸಂಕಟದ ಶ್ಯಾವಿಗೇನೇ ಗತಿ ಅಂತೀರಾ?’

‘ಹ್ಞೂಂ ಕನಪ್ಪ, ಹಂಚಕ್ಕೆ ಸೆಂಟ್ರಲ್ಲಿಂದ ಕಾಸು ಬಂದಿಲ್ಲ! ಪಾಪ ರಾಜಾವುಲಿ ನಮ್ಮಂತೇ ಗೊಂಜಾಯಿಗಳನ್ನ ನೋಡ್ತದಾ, ಅಧಿಕಾರಕ್ಕೆ ಹಸಿದೋರನ್ನ ಸುಧಾರಿಸ್ತದಾ ಇಲ್ಲಾ ಬೂತುಕಾಲ ನೋಡ್ತದಾ ಸಿಗಂದೂರವ್ವನಿಗೇ ಗೊತ್ತು! ಬಿಲ್ಲು ಸಿಕ್ಕರೆ ಕೊಳ್ಳಿರೋ’ ಅಂತ ತಿರಗಾ ರಾಗ ಸುರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.