ADVERTISEMENT

ಚುರುಮುರಿ: ಆಪರೇಷನ್ ‘ಮಾರು’ವೇಷ!

ತುರುವೇಕೆರೆ ಪ್ರಸಾದ್
Published 30 ಜನವರಿ 2026, 23:34 IST
Last Updated 30 ಜನವರಿ 2026, 23:34 IST
   

‘ನಾಯಕ್ರು ರಾಜ್ರಂಗೆ ಮಾರುವೇಷದಾಗೆ ಓಗಿ ಜನ್ರ ಕಷ್ಟ ಸುಖ ತಿಳ್ಕಬೇಕು ಅಂತ ವಿಧಾನಸಭೆಯ ಅಧಿವೇಶನದಲ್ಲಿ ಕಮಲದೋರು ಉಪದೇಶ ಮಾಡವ್ರಲ್ಲಪ್ಪ’ ಎಂದು ಗುದ್ಲಿಂಗ ಸಭೆಯಲ್ಲಿ ಮಾತು ಆರಂಭಿಸಿದ.

‘ಅಂದ್ರೇನ್ಲಾ? ನಮ್‌ ನಾಯಕ್ರು ಶಕ್ತಿ ಯೋಜನೆ ಎಂಗ್ ನಡೀತೈತೆ ಅಂತ ನೋಡಕ್ಕೆ ಸೀರೆ ಉಟ್ಕಂಡು ಬಸ್ ಹತ್ಬೇಕೇನ್ಲಾ?’ ರಾಂಗಾದ ಮಾಲಿಂಗ.

‘ಅಂಗಲ್ಲ ಕಣಲೇ, ಮನೆ ಮೇಡಂಗೆ ಮಾರುವೇಷ ಆಕಿ ತಾವೂ ಮಾರುವೇಷ ಆಕ್ಕಂಡು ಟಿಪಿಕಲ್ ಅಮ್ಮಾವ್ರ ಗಂಡನ ತರ ತಲೆ ಮೇಲೆ 10 ಕೆಜಿ ಅನ್ನಭಾಗ್ಯ ಅಕ್ಕಿ ಒತ್ಕಂಡು ಹಳ್ಳಿ ಬಸ್ ಹತ್ಬೇಕು’ ಎಂದ ಕಲ್ಲೇಶಿ.

ADVERTISEMENT

‘ಗೃಹಜ್ಯೋತಿ ಚೆಕ್‌ ಮಾಡಕ್ಕೆ ವೇಷ ಮರುಸ್ಕಳೋ ಅಂಗೇ ಇಲ್ಲ. ಸಂಜೆ ಹಳ್ಳಿ ಕಡೆ ಕರೆಂಟೇ ಇರಕಿಲ್ಲವಲ್ಲ! ನೇರ ವೇಷ್ದಲ್ಲೇ ಜನ ಪರದಾಡೋದನ್ನ ಬ್ಯಾಟರಿ ಹಾಕಿ ನೋಡ್ಬಹುದು’.

‘ರಾಜಕೀಯ ನಿಮಿತ್ತಂ ಬಹುಕೃತ ವೇಷಂ! ಆಪರೇಷನ್ ಮಾರುವೇಷ! ನಾಯಕ್ರಿಗೆ ಆ ಜಯಂತಿ, ಈ ಪುಣ್ಯತಿಥಿ ಅಂತ ವೇಷ ಆಕ್ಕಂಡು ರೂಢಿ ಇರ‍್ತದೆ ಬಿಡು. ಇವಾಗ ನಾಯಕ್ರು ಚರಂಡಿ ಕಂಟ್ರಾಕ್ಟು ಮಾಡಸ್ಬೇಕು, ಟ್ರಾಕ್ಟ್ರೂ ಓಡುಸ್ಬೇಕು, ಎಲ್ಲೆಲ್ಲಿ ಅನ್ಯಾಯ ಆಯ್ತಾ ಅದೆ ಅಲ್ಲೆಲ್ಲಾ ಮೋಸಕ್ಕೆ ತಕ್ಕ ವೇಷ ಹಾಕ್ಕಬೇಕು ಅನ್ನು’.

‘ಅದಕ್ಕಿಂತ ಎಚ್ಚಾಗಿ ಮಗರಾಮ ಯವ್ಯಾವ ಖಾತೇಲಿ ಕ್ಯಾತೆ ತೆಗೆದವ್ರೆ? ಯಾರ‍್ಯಾರ ‘ಚಾರ್ಜ್’ ಡೌನ್ ಮಾಡ್ತಾವ್ರೆ ಅಂತ ನೋಡಕ್ಕೂ ಮಾರುವೇಷ ಹಾಕ್ಕಬೇಕು’.

‘ಅದಿರ‍್ಲಿ, ನಾಯಕ್ರೇ ಮಾರುವೇಷದಲ್ಲಿ ಒಂಟವ್ರೆ ಅಂತ ಇಡೀ ಕ್ಯಾಬಿನೆಟ್ಟೇ ವೇಷ ಮರುಸ್ಕಂಡು ಒಂಟ್ಬುಟ್ರೆ ಲಂಚಕೋರರ ಗತಿ ಏನಪ್ಪಾ?’

‘ಅಂಗೆಲ್ಲಾ ಆಗಕಿಲ್ಲ ಬಿಡು. ಹೋಲ್‌ಸೇಲ್ ಕುರ್ಚಿ ಬಿಟ್ ಓದ್ರೆ ಮಾರುವೇಷದಲ್ಲಿ ಕುರ್ಚಿ ಮೇಲೆ ಕುಂತುಬಿಡ್ತಾರೆ ಅನ್ನೋ ಭಯ ಇರುತ್ತೆ. ‘ಮಾರು’ವೇಷ ಹಾಕ್ಕಂಡು ಕುದುರೆ ಮಾರೋ ನಕುಲರೂ ಇರ‍್ತಾರೆ’ ಎಂದು ಪರ‍್ಮೇಶಿ ಬಿಡಿಸಿ ಹೇಳಿದ.

ಪರ‍್ಮೇಶಿಯ ಮಾತಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಗೊಳ್ಳನೆ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.