ADVERTISEMENT

ಚುರುಮುರಿ: ಬಜೆಟ್‌ ಭಾಗ್ಯ

ಲಿಂಗರಾಜು ಡಿ.ಎಸ್
Published 2 ಮಾರ್ಚ್ 2026, 20:30 IST
Last Updated 2 ಮಾರ್ಚ್ 2026, 20:30 IST
   

‘ಗೌರವಾನ್ವಿತ ಸಭಾಧ್ಯಕ್ಷರೇ, 2026–27ನೇ ಸಾಲಿನ ಬಜೆಟ್ಟನ್ನು ಹಣಕಾಸು ಸಚಿವನಾದ ನಾನು ಸದನದ ಮುಂದಿಡುತ್ತಿದ್ದೇನೆ.

‘ಬೆಳಕಿನಿಂದ ಕತ್ತಲೆಯೆಡೆಗೆ ಪಯಣ ನಮ್ಮ ಗುರಿ.

ಇದೇ ಮಾದರಿಯಲ್ಲಿ ರಾಜ್ಯದ ಗ್ಯಾರಂಟಿಗಳ ಪರಿಣಾಮದ ವಿತ್ತೀಯ ಕೊರತೆಯನ್ನು ಗಮನಿಸಿ ಎಲ್ಲಾ ಉಚಿತ ಕೊಡುಗೆಗಳನ್ನು ರಾಜಕೀಯ ಪಕ್ಷಗಳ ನಿಧಿಯಿಂದಲೇ ಭರಿಸ ಬೇಕೆಂಬ ಭ್ರಾಂತಿಕಾರಕ ಆದೇಶವನ್ನು ಹೊರಡಿಸುತ್ತಿದ್ದೇನೆ. ರಾಜ್ಯದ ಖರ್ಚು–ವೆಚ್ಚಗಳನ್ನು ಸರಿದೂಗಿಸಲು ವರ್ಷವಿಡಿ ಸಾರ್ವಜನಿಕ ಸಾಲ ಎತ್ತಲಿದ್ದೇವೆ.

ADVERTISEMENT

‘ಬಡಿಯುವ ಕೈಗೆ ಕೆಲಸ ಕೊಡುತ್ತಾ ಶಾಸಕರು ಮತ್ತು ಅಧಿಕಾರಿಗಳು ನಿರಂತರವಾಗಿ ಲಂಚ ಮತ್ತು ಕಮಿಶನ್ನಿಗೆ ಬಲಿಯಾಗಿ ಜೈಲು ಸೇರುತ್ತಿದ್ದಾರೆ. ಇವರು ಗಳಿಸಿದ ಕಾಳಧನ ವನ್ನು ಸೂಕ್ತ ಪ್ರಮಾಣಿತ ಕಾರ್ಯಾಚರಣೆ ವಿಧಾನದ ಮೂಲಕ ಹಿಂದಿರುಗಿಸಲಾಗುವುದು.

‘ರಾಜಕಾರಣಿಗಳು ಜನ ಹಿತಕ್ಕಾಗಿ ಆಗಾಗ ಪಕ್ಷಾಂತರದ ಆಪರೇಶನ್ನಿಗೆ ಒಳಗಾಗುತ್ತಿರುತ್ತಾರೆ. ಇವರಿಗೆ ಉಚಿತ ರಾಜಕೀಯ ವಿಮೆ ಮತ್ತು ಮಂತ್ರಿಗಿರಿ ಗ್ಯಾರಂಟಿ ಹಾಗೂ ವಿದೇಶ ಪ್ರವಾಸಕ್ಕಾಗಿ ಪಕ್ಷಾಂತರ ನಿಧಿ ಸ್ಥಾಪಿಸಲಾಗುವುದು. ಶಾಸಕರ ವೇತನ, ಭತ್ಯೆಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಸ್ವಯಂಚಾಲಿತವಾಗಿ ಏರಿಸಲಿದ್ದೇನೆ. ಹಣಕಾಸಿನ ಕೊರತೆ ಯಿಂದಾಗಿ ಅಧಿಕಾರಿ, ನೌಕರರ ವೇತನ, ಭತ್ಯೆಗಳನ್ನು ಶೇ 50ಕ್ಕೆ ಇಳಿಸಲಾಗುವುದು. ನೇಮಕಾತಿ ಗಳನ್ನು ಗುತ್ತಿಗೆ ಆಧಾರದ ಮೇಲೆ ಮಾತ್ರ ಮಾಡಲು ತೀರ್ಮಾನಿಸಲಾಗಿದೆ.

‘ರಾಜ್ಯದ ಆದಾಯಕ್ಕೆ ದೊಡ್ಡ ಕೊಡುಗೆ ನೀಡುತ್ತಿರುವ ಪಾನೀಕರಿಗಾಗಿ ಹೊಸ ಎಸ್ಕೋಬಾರುಗಳನ್ನು ತೆರೆಯಲಾಗು ವುದು. ಕುಡಿದು ಸತ್ತ ಮದ್ಯಪಾನಿಗಳ ಜ್ಞಾಪಕಾರ್ಥ ‘ಕುಡಿನಮನ’ ಕಾರ್ಯಕ್ರಮದಲ್ಲಿ ಮರಣೋತ್ತರವಾಗಿ ಬಿರುದು ನೀಡಲಾಗುವುದು.

‘ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳ ಮೂಲಕ ಅತಿಹೆಚ್ಚು ಗಾಳಿಸುದ್ದಿಗಳನ್ನು ಹಂಚಲು ನಿರುದ್ಯೋಗಿಗಳಿಗೆ ಮತ್ತು ಯುವಕರಿಗಾಗಿ ಉಚಿತ ಡೇಟಾನಿಧಿ ಆರಂಭಿಸಲು ನನ್ನ ಸರ್ಕಾರ ಉದ್ದೇಶಿಸಿದೆ.

‘ಜನತೆಯ ಮತ್ತು ರೈತರ ಅನನುಕೂಲಕ್ಕಾಗಿ ಜಿಲ್ಲೆಗಳಲ್ಲಿ ಕಿರುಕುಳ ಕೇಂದ್ರ ತೆರೆಯಲಾಗುವುದು. ಅತೀ ಹೆಚ್ಚು ಪ್ರಾಣಹಾನಿ ಸಂಭವಿಸುವ ರಸ್ತೆಗುಂಡಿಗಳನ್ನು ಮುಕ್ತಿತಾಣ ಎಂದು ಘೋಷಿಸಲಾಗುವುದು. ಸದನವು ಪೂರ್ಣ ಆಯವ್ಯಯವನ್ನು ಭಂಗೀಕರಿಸಲು ಕೋರುತ್ತೇನೆ.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.