ADVERTISEMENT

ಲೈಫೇ ಆಫ್!

ಸುಮಂಗಲಾ
Published 5 ಏಪ್ರಿಲ್ 2020, 21:02 IST
Last Updated 5 ಏಪ್ರಿಲ್ 2020, 21:02 IST
ಚುರುಮುರಿ
ಚುರುಮುರಿ   

ಆ ಮಂಗಳವಾರ ರಾತ್ರಿ ರಿಂಗ್ ಮಾಸ್ಟರನ ಒಂದು ಅಪ್ಪಣೆಗೆ ಲಕ್ಷಾಂತರ ಪಡಿತರ ಚೀಟಿಗಳು ರಸ್ತೆಗೆ ಬಿದ್ದಿದ್ದವು. ಪಾಸ್‌ಪೋರ್ಟುಗಳು ಮೆತ್ತಗೆ ಮನೆ ಸೇರಿಕೊಂಡಿದ್ದವು.

ಒಂದಿಷ್ಟು ಪಡಿತರ ಚೀಟಿಗಳು ಊರಾದ್ರೂ ಸೇರಲೆಂದು ಹೆದ್ದಾರಿಗುಂಟ ನಡೆದೇ ಹೊರಟಿದ್ದವು. ಪಟ್ಟಣವೊಂದನ್ನು ಹಾದು ಹೊರಟಿದ್ದಾಗ, ಏಕಾಂಗಿ ಬಂಗಲೆ ಮುಂದೆ ಠಾಕುಠೀಕಾಗಿದ್ದ ಇನ್ನೊಂದು ಚೀಟಿಯನ್ನು ನೋಡಿದವು. ಪಡಿತರ ಚೀಟಿಗಳು ಹತ್ತಿರವಾಗುತ್ತಿದ್ದಂತೆ, ಠಾಕುಠೀಕಿನ ಚೀಟಿ ‘ದೂರ... ದೂರ’ ಎಂದು ಹಚಾಗುಟ್ಟಿ ಸ್ಯಾನಿಟೈಸರ್‌ನಿಂದ ಕೈಒರೆಸಿಕೊಂಡು, ಮಾಸ್ಕ್ ಸರಿಪಡಿಸಿಕೊಂಡಿತು. ಇದು ಪಾಸ್‍ಪೋರ್ಟ್ ಚೀಟಿ ಎಂದರಿವಾದ ಎಳೆನಿಂಬೆಕಾಯಿ ಪಡಿತರ ಚೀಟಿ, ‘ಏನಣ್ಣೋ... ನೀನೂ ನಮ್ಮಂಗೆ ರಸ್ತೆಗೆ ಬಿದ್‍ಬಿಟ್ಯಾ’ ಎಂದು ಲೊಚ್‍ಗುಟ್ಟಿತು. ‘ನನ್ನ ರಸ್ತೆಗೆ ಬೀಳಿಸಿದ್ರೆ, ಆಮೇಲೆ ದೇಶದ ಕಥೆ ಅಷ್ಟೆ. 21 ದಿನ ಒಳಗಿರಿ ಅಂದಾರಂತ ಇಲ್ಲಿದೀನಿ’ ಎಂದು ಮೀಸೆ ತಿರುವಿತು.

‘ವೈರಸ್‍ ಅಂಟಿಸ್ಕಂಡಿದ್ದು ನೀನು, ಕಲ್ಲಿನಂಗೆ ಎತ್ ಹಾಕಿದ್ದು ನಮ್ಮ ಮ್ಯಾಲೆ’ ವಯಸ್ಸಾಗಿದ್ದ ಪಡಿತರ ಚೀಟಿಯೊಂದು ನಿಟ್ಟುಸಿರಿಟ್ಟಿತು. ‘ನಾವ್ ಒಳಗದೀವಿ. ಡೆಲ್ಲಿ ಮಸೀದಿಗೋಗಿ ವೈರಸ್‍ ಅಂಟಿಸ್ಕಂಡು, ಎಲ್ಲಾ ಕಡಿಗಿ ಹರಡ್ತಿದಾರಲ್ಲ, ಅವ್ರಿಗಿ ನಾಕ್ ವದೀಬೇಕು’ ಎನ್ನುತ್ತ ಹೊರಟಿತು. ‘ಮತ್ತೆಲ್ಲಿ ಅಡ್ಡಾಡಕ ಹೊಂಟೆ’ ಎಂದು ಇನ್ನೊಂದು ಪಡಿತರ ಚೀಟಿ ಕೇಳಿತು. ‘ಗೊತ್ತಿಲ್ಲೇನ್... ಇವತ್ ರಾತ್ರಿ ಒಂಬತ್ತು ಗಂಟಿಗಿ ಒಂಬತ್ತು ನಿಮಿಷ ಲೈಟಾಫ್ ಮಾಡಿ ಮೋಂಬತ್ತಿ ಉರುಸ್ರಿ, ನಮ್ಮ ಒಗ್ಗಟ್ಟು ನೋಡಿ, ಮೋಂಬತ್ತಿ ಬಿಸಿಗಿ ಕೊರೊನಾ ಓಡಿಹೋಗತೈತಿ ಅಂತ ಚೌಕಿದಾರ್‍ರು ಹೇಳ್ಯಾರ. ಶಾಸಕರೊಬ್ರು ಮೋಂಬತ್ತಿ ಹಂಚ್ತದಾರ, ತರಾಕ ಹೊಂಟೀನಿ’.

ADVERTISEMENT

‘ಲೈಟೇ ಇಲ್ದಿರೋ ಶೆಡ್ ಮಂದಿ, ಲೈಫೇ ಆಫ್ ಆಗಿರೋ ಕೂಲಿ ಮಂದಿ ಏನ್ ಆಫ್ ಮಾಡದು?’ ‘ಹಿಂಗೇ ನಡಕೋತ, ಬದುಕಿ ಉಳದ್ರ, ಮುಂದಿನ ಭಾನುವಾರ ಊರು ಸೇರ್ತೀವಿ. ಅವತ್ ಹತ್ ಗಂಟಿಗೆ ಹತ್ ನಿಮಿಷ ನಮ್ಮೊಂಥೋರಿಗೆ ಏನಾದ್ರೂ ಮಾಡಕ್ಕೆ ಚೌಕಿದಾರ್‍ರಿಗಿ ಹೇಳಣ್ಣ’ ಪಡಿತರ ಚೀಟಿಗಳು ತಲೆಗೊಂದು ಹೇಳುತ್ತಿದ್ದಂತೆ ಪಾಸ್‍ಪೋರ್ಟ್ ಚೀಟಿ, ಮೋಂಬತ್ತಿ ಖಾಲಿಯಾದರೆ ಎಂದು ತರಲೋಡಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.