ADVERTISEMENT

ವಾನರಪ್ರಸ್ಥಾಶ್ರಮ

ಲಿಂಗರಾಜು ಡಿ.ಎಸ್
Published 29 ಜುಲೈ 2019, 20:00 IST
Last Updated 29 ಜುಲೈ 2019, 20:00 IST
   

ತುರೇಮಣೆ ಫೋನಿನಲ್ಲಿ ಮಾತನಾಡುತ್ತಿದ್ದರು– ‘ಹೋಗ್ಲಿ ಬುಡಿ ಕಣ್ಣೀರಾಕಬೇಡಿ. ಓಡಿ ಬಂದ್ರೂ ಆಗಲಿಲ್ಲ. ಮಂತ್ರಿ ಕನಸೆಲ್ಲಾ ಕರಗೇ ಹೋಯ್ತಲ್ಲಾ ಸಾರ್’ ಅಂದು ಸುಮ್ಮನಾದರು.

‘ಏನ್ಸಾರ್ ಯಾರದ್ದು ಫೋನು?’ ಅಂತ ಕೇಳಿದೆ.

‘ಬಾಂಬೇ ದಾದಾಗಳು ಕಣೋ. ಇದುವರೆಗೂ ಅಲ್ಲೇ ಮಜವಾಗಿದ್ದರಂತೆ. ಅವರಿಗೆ ಬೇಕುಬೇಕಾದ ಊಟ, ಬಟ್ಟೆ ಕೊಡತಿದ್ರಂತೆ. ಅದಕ್ಕೇ ನಾವು ಬಿಲ್ಕುಲ್ ಬರಲ್ಲ ಅಂತಿದ್ರಲ್ಲ, ಸ್ಪೀಕರ್ ಬಾಂಬ್ ಸಿಡಿದ ಮೇಲೆ ಯಾರೂ ತಿರುಗೇ ನೋಡ್ತಿಲ್ವಂತೆ. ಹೋಟಲಿನೋರು ಬಿಲ್ ಸೆಟಲ್ ಮಾಡಿ, ಇಲ್ದಿದ್ರೆ ಹಿಟ್ಟು ರುಬ್ಬಬೇಕಾಯ್ತದೆ ಅಂದವರಂತೆ. ಅಲ್ಲಿಗೆ ಬಂದರೆ ಹೆಂಡರು-ಮಕ್ಕಳ ಕಾಟ ‘ಎಷ್ಟು ತಂದೆ’ ಅಂತ, ಪಕ್ಷದ ಕಾಟ ‘ಯಾಕೆ ಬಂದೆ’ ಅಂತ, ಜನಗಳ ಕಾಟ ‘ಎಲ್ಲಿದ್ದೆ’ ಅಂತ! ಅದುಕ್ಕೇ ನಾವು ಇಲ್ಲೇ ಇದ್ಬುಡತೀವಿ ವಾನರಪ್ರಸ್ಥಾಶ್ರಮದಲ್ಲಿ ಅಂದವರೆ’ ಅಂದರು.

ADVERTISEMENT

‘ಸಾರ್, ಪಕ್ಷಾಂತರಿಗಳು ಲೆಕ್ಕಕ್ಕಿಲ್ಲ ಅಂದ್ರೆ ಯಡುರಪ್ಪಾರಿಗೆ ಅನುಕೂಲಾಯ್ತಲ್ಲ. ತ್ಯಾಗಜೀವಿಗಳಾಗಬೇಕಾಗಿದ್ದ ಕಮಲ ಪಾಳೆಯದೋರು ತಮ್ಮ ಮಂತ್ರಿ ಪದವಿ ಸದ್ಯಕ್ಕೆ ಉಳಕಂತು ಅಂತ ಖುಷಿಯಾಗವರೆ. ಈಗ ಯಾರ‍್ಯಾರು ಏನೇನು ಆಯ್ತರೆ ಸಾರ್?’ ಅಂತ ಕೇಳಿದೆ.

‘ನೋಡ್ಲಾ ಈಗ ಮಾಜಿಗಳಿಗೆಲ್ಲಾ ಹೊಟ್ಟೇಲಿ ಬೆಂಕಿ ಹತ್ತಿ ಉರೀತಾದೆ. ಕಾರ್ಯಕರ್ತರಿಗೆ ಏನಾದರೂ ಮಾಡಬೇಕು ಅಂತ ಹೊಂಟವರೆ. ಯಡುರಪ್ಪಾರು ಅವರ ದನಗಳನ್ನೆಲ್ಲಾ ದೊಡ್ಡಿಗೆ ಕೂಡಿಕೊಂಡು ಕುರ್ಚಿ ಏರವರೆ. ಬಾಂಬೇ ದಾದಾಗಳು ‘ನಾವು ಅನರ್ಹರಾಗಿದ್ದಕ್ಕೆ ಯಾರೂ ಆತಂಕ ಪಡಬೇಡಿ. ಈಗ ಡೆಲ್ಲಿಗೋಯ್ತಾ ಇದ್ದೀವಿ. ಬಂದ ಮೇಲೆ ಸತ್ಯ ಬಿಚ್ಚಿ ತೋರಿಸತೀವಿ’ ಅಂತ ಹೇಳವ್ರೆ ಅಂದ್ರು.

‘ಸಾರ್, ಹಂಗಾದ್ರೆ ಈಗ ಎಲ್ಲಾರೂ ಅವರ ಕೊಳಕುಬಟ್ಟೇನಾ ಬೀದೀಲಿ ಒಗಿತರೆ ಅನ್ನಿ. ಆದರೂ ರಾಜ್ಯದಲ್ಲಿ ಯಾರೂ ಏನು ಕಿಸಿಯಂಗಿಲ್ಲವಲ್ಲ. ಮೋದಿ ಮಾರಾಜರು ಲಗಾಮು ಹಾಕಿಬುಟ್ಟವರಂತೆ!’ ಅಂತ ಹೇಳಿದೆ.

‘ಹೌದು ಕಣೊ, ಯಾರೂ ಜೋರಾಗಿ ಉಸಿರು ಬುಡಂಗಿಲ್ಲ. ತುಂಡೈಕ್ಳೇನಾದ್ರೂ ಬಾಲ ಬಿಚ್ಚಿದ್ರೆ ವಾನರಪ್ರಸ್ಥಾಶ್ರಮಕ್ಕೆ ಕಳಿಸಿಬುಡ್ತರೆ’ ಅಂದ್ರು ತುರೇಮಣೆ. ಈಗ ವಾನರಪ್ರಸ್ಥಾಶ್ರಮಕ್ಕೆ ಜಾಗ ಎಲ್ಲಿ ಹುಡುಕದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.