ಮುಖಕ್ಕೆ ಮಾಸ್ಕ್ ಹಾಕಿಕೊಂಡು ರಸ್ತೆ ಅಗೆಸುತ್ತಿದ್ದ ವ್ಯಕ್ತಿ ಬಳಿ ಹೋಗಿ ಪರ‍್ಮೇಶಿ ಕೇಳಿದ, ‘ಏನ್ರಪ್ಪಾ
ಅಗೀತಿದೀರಿ?’
‘ಅದು ಹಳೇ ನೀರಿನ್ ಪೈಪಿತ್ತು ಸರ್, ಒಂದು ವರ್ಷ ಆದ್ರೂ ಬಿಲ್ಲಾಗಿಲ್ಲ, ಪೈಪ್ ತೆಗೆದು ಹೋದಷ್ಟಕ್ಕೆ ಮಾರ್ಕಳಣ ಅಂತ. ಹಾಳಾದ್ದು ಪೈಪೇ ಸಿಕ್ತಿಲ್ಲ ಸರ್’.
‘ಅಲ್ಲಪ್ಪ, ಕ್ವಾಂಟಮ್ ಕಾಲದಲ್ಲಿ ನೀವ್ಯಾಕೆ ಫ್ಯಾಂಟಮ್ ತರ ಮುಸುಕು ಹಾಕ್ಕೊಂಡಿದೀರಿ?’
‘ಇವತ್ತು ಫ್ಯಾಂಟಮ್ಮು, ನಾಳೆ ಬ್ಯಾಟ್ಮನ್ನು, ನಾಡಿದ್ದು ಸೂಪರ್‌ಮ್ಯಾನ್ ಆದ್ರೇನೇ ಕಾಲ. ಇಲ್ಲ ಅಂದ್ರೆ, ದಿನಾ ಇದೇ ಕೆಲ್ಸವಾ ನನ್ಮಕ್ಳಾ? ಈಗಿರೋ ಗುಂಡೀಲೆ ಬಿದ್ ಸಾಯ್ತಿದೀವಿ’ ಅಂತ ಜನ ತದುಕ್ತಾರೆ
ಸರ್’.
‘ಅಣ್ಣ, ಪೈಪ್ ಸಿಕ್ತಿಲ್ಲ’ ಅಂದ್ರು ಅಗೆಯೋರು.
‘ಹೌದಾ? ಈ ಗುಂಡಿಯಿಂದ ಹತ್ತಡಿ ದೂರಕ್ಕೆ ಎಲೆಕ್ಟ್ರಿಕ್ ಕೇಬಲ್ ಹಾಕಿದ್ರು... ಅದು ಸಿಕ್ರೆ ಹತ್ರದಲ್ಲೇ ಪೈಪಿರುತ್ತೆ’ ಅಂತ ರಸ್ತೆ ಇನ್ನೊಂದು ಬದಿಗೆ ಗುಂಡಿ ತೋಡುಸ್ದ.
‘ಅಣ್ಣಾವ್ರೇ, ಇಲ್ಲಿ ಎಲೆಕ್ಟ್ರಿಕ್ ಕೇಬಲ್ಲೇ ಇಲ್ವಲ್ಲ...’ ಕೆಲಸದೋರು ಕೂಗುದ್ರು.
‘ಅದೂ ಇಲ್ವಾ? ತಡಿ, ರಸ್ತೆ ಮಧ್ಯದಲ್ಲಿ ಡ್ರೈನೇಜ್ ಪೈಪ್ ಹೋಗಿರುತ್ತೆ. ಅದರಿಂದ ಮೂರು ಅಡಿ ಎಡಕ್ಕೆ ಅಗುದ್ರೆ ನಮ್ ಪೈಪ್ ಸಿಗುತ್ತೆ’ ಎಂದು ರಸ್ತೆ ಮಧ್ಯೆ ಅಗೆಸ್ದ.
‘ಅಣ್ಣ, ಅಗೆದು ಅಗೆದು ಕಣ್ಣಲ್ಲಿ ನೀರು ಬರ್ತಿದೆ. ಬಾವಿ ತೋಡಿದ್ರೆ ನೀರೇ ಬರೋದು’ ಅಂತ ಆಳಕ್ಕೆ ಅಗೆಯಕ್ ಶುರು ಹಚ್ಕಂಡ್ರು. ಕೆಲ ನಿಮಿಷದಲ್ಲೇ ಒಬ್ಬ ಕೂಗ್ದ: ‘ಅಣ್ಣ ಬುರುಡೆ ಸಿಕ್ತು’.
‘ಬುರುಡೇನಾ?’ ಗಾಬರಿಯಾದ ಪರ‍್ಮೇಶಿ!
‘ಹೆದರ್ಕಬೇಡಿ ಸರ್, ಎಳನೀರು ಬುರುಡೆ’ ಎಂದು ನಕ್ಕ ತೋಡುತ್ತಿದ್ದವ.
‘ಎಳನೀರು ಬುರುಡೆ ಅಂದ್ರೆ ಇದು ನೀರಾಂಬುಧಿ ಕೆರೆ ಲೇಔಟ್! ಇದಲ್ಲ ಕಣ್ರೋ, ನಾವು ನೊರಾಂಬುಧಿ ಕೆರೆ ಏರಿಯಾ ಹುಡುಕ್ಬೇಕು’ ಎಂದು ಗುಂಡಿ ಹಾಗೇ ಬಿಟ್ಟು ಹಾರೆ ಪಿಕಾಸಿ ಎತ್ತಿಕೊಂಡು ಹೊರಟರು.
ಪರ‍್ಮೇಶಿ ಕಣ್ ಕಣ್ ಬಿಟ್ಟ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.