ಚುರುಮುರಿ
‘ನೋಡ್ಲಾ, ಪ್ರಯತ್ನಕ್ಕೆ ಸೋಲಾದರೂ ಪ್ರಾರ್ಥನೆಗೆ ಸೋಲಾಗಕುಲ್ಲ ಅಂತ ಅಣ್ಣ ಯಥೆ ಪಡದು
ನೋಡಕ್ಕಾಯ್ಕಿಲ್ಲ ಕಜಾ’ ತುರೇಮಣೆ ನೊಂದ್ಕತಿದ್ರು.
‘ಅಣ್ಣಂಗೆ ಕುರ್ಚಿ ಸಿಕ್ಕೇ ಸಿಕ್ತದೆ ಅಂತ ಹಿಂಬಾಲಕರು ಹೇಳಿಕ್ಯಂದು ಬರದೇ ಆಯ್ತು. ಇಕ್ಕಡೆ ಅವರು, ಇನ್ನೂ ನಾನೇ ದಸರಾದೇಲಿ ಪುಸ್ಪಾರ್ಚನೆ ಮಾಡದು. ಅವರ ಜೊತೆಗೆ ಮೂರೂ ಮುಕ್ಕಾಲು ಜನವೇ ಇರದು ಅಂತ ಟಾಂಗು ಕೊಡ್ತರೆ’ ನನ್ನ ಅನಿಸಿಕೆ ಹೇಳಿದೆ.
‘ದಿಟ ಕಲಾ, ಚೇರು ಚೇರು ಅಂತ ಕನವರಿಸಿಕ್ಯಂದು ಅಣ್ಣನ ಕಣ್ಣುಗುಡ್ಡೆಲ್ಲಾ ಬೆಳ್ಳಗಾಗೋದೊ. ಪಕ್ಸದೊಳಗಿರೋ ನೇಬರುಗಳು ದಾರಿಗೆ ಮುಳ್ಳೆಳೀತಾ ಕೂತವೆ. ದೇವೇಂದ್ರನ ಪೋಸ್ಟಿಗೂ ಒಂದು ಟರ್ಮು ಅಂತ ಅದೆ. ಇಲ್ಲ್ಯಾಕಿಲ್ಲ?’ ತುರೇಮಣೆ ವಿಚಾರಿಸಿದರು.
‘ಇದಕ್ಕೆಲ್ಲಾ ಪರಿಹಾರ ಅದೆ’ ತಿಪ್ಪಣ್ಣ ಸಿಡಿಗುಂಡು ಹಾರಿಸಿದ. ಎಲ್ಲಾರೂ ದಿಕ್ಕೆಟ್ಟು ತಿಪ್ಪಣ್ಣನ ಕಡೆ ನೋಡಿದೋ.
‘ಗಾಬರಾಗಬ್ಯಾಡಿ ತುರೇಮಣಣೈ. ಅಣ್ಣ ನನ್ನ ತಾವು ಒಂದು ವೆಲ್ಲೈಸಿ ಟರ್ಮು ಇನ್ಸ್ಯೂರೆನ್ಸು ತಕಂಡ್ರೆ ನಷ್ಟ ಪರಿಹಾರ ತುಂಬಿ ಕೊಡಬೈದು’ ಅಂತ ವಡಪು ಹಾಕಿದ.
‘ಅಯ್ಯೋ ನಿನ್ನಾ, ಅದೇನು ವೆಲ್ಲೈಸಿ ಅಂತ ಸರಿಯಾಗಿ ಹೇಳ್ಲಾ’ ಯಂಟಪ್ಪಣ್ಣ ಸಿಟ್ಟಾದ್ರು.
‘ಇದು ಪವರ್ ಇನ್ಸ್ಯೂರೆನ್ಸ್. ತಿಂಗಳಿಗಿಷ್ಟು ಅಂತ ವಿಮೆ ತುಂಬಿ ಟರ್ಮು ಮುಗಿದ ಮ್ಯಾಲೂ ಕುರ್ಚಿ ಸಿಗದೇ ಹೋದ್ರೆ ನಾವು ವೆಲ್ಲೈಸಿಯಿಂದ ಪವರ್ ಪರಿಹಾರ ಅಂತ ಕ್ಲೇಮು ಕೊಡ್ತೀವೇಳಿ’ ತಿಪ್ಪಣ್ಣ ವಿವರಿಸಿದ.
‘ಅಣ್ಣನ ಮನೇ ಮಗ್ಗುಲಗೇ ಇದ್ದೀಯಲ್ಲೋ. ನೀನು ಕ್ಲೇಮು ಸೆಟಲ್ ಮಾಡ್ದೇ ಹೋದ್ರೆ ಅಣ್ಣ ನಿನ್ನ ಬೋಟಿ, ಕಲೇಜಾ ಕಿತ್ತಾಕಿಬುಡ್ತನೆ ಕಲಾ. ಉಸಾರು’ ತುರೇಮಣೆ ಎಚ್ಚರಿಸಿದರು.
‘ಆಟೊತ್ತಿಗೆ ನಾವೂ ಬೋರ್ಡು ತಿರುವ್ಯಾಕಿ ಎಪ್ಪೆಸ್ ಆಗಿರತೀವಲ್ಲ. ನೈಬರ್ ಅಟ್ಯಾಕ್ ಮಾಡೋ ನಮ್ಮಂತಾ ಕೈನಾತಿಗಳನ್ನ ಎಲ್ಲಿ ಅಂತ ಹುಡುಕ್ಯಾರು?’ ತಿಪ್ಪಣ್ಣನ ವೆಲ್ಲೈಸಿ ಪ್ಲಾನಿಗೆ ನಾವು ಚಿತ್ತಾಗಿದ್ದೋ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.