ಬೆಕ್ಕಣ್ಣ ಘನಗಂಭೀರವಾಗಿ ಕೂತು ಚುನಾವಣಾ ಫಲಿತಾಂಶದ ವಿಶ್ಲೇಷಣೆಗಳ ಸುದ್ದಿಗಳನ್ನು ಓದುತ್ತಿತ್ತು.
‘ಇಂಡಿಯಾ ಟೀಮ್ ಸೋತರೂ ರಾಹುಲಂಕಲ್ಲು ಭರ್ಜರಿ ರನ್ ಗಳಿಸ್ಯಾನೆ. ಹಿಂಗಾಗಿ ರಾಹುಲಂಕಲ್ಲನೇ ಮ್ಯಾನ್ ಆಫ್ ದಿ ಮ್ಯಾಚ್ ಅಂತ ತರೂರು ಮಾಮ ಹೊಗಳ್ಯಾನೆ. ಏನಂತೀಯಾ?’ ಬೆಕ್ಕಣ್ಣ ಕೂರಂಬು ಎಸೆಯಿತು.
‘ಹಂಗ ನೋಡಿದರೆ ಚಂದ್ರಬಾಬು ನಾಯ್ಡು ಮ್ಯಾನ್ ಆಫ್ ದಿ ಮ್ಯಾಚ್… ಎಷ್ಟೆಲ್ಲ ಷಡ್ಯಂತ್ರ ಮಾಡಿ ಜೈಲಿಗೆ ಕಳಿಸಿದ್ದರು, ನೋಡೀಗ… ಹೆಂಗ ಭರ್ಜರಿಯಾಗಿ ಗೆದ್ದು, ಎನ್‌ಡಿಎಗೆ ಮೂಗುದಾರ ಹಾಕ್ಯಾನೆ’ ಎಂದೆ.
‘ಹಿಂದೆ ವಾಜಪೇಯಿ ನೇತೃತ್ವದ ಸರ್ಕಾರದ ಟೈಮ್‌ನಾಗೆ ಮೂಗುದಾರ ಹಿಡದು ಅವಂಗೆ ಅನುಭವಾ ಐತಿ ಅಂತ ಮೋದಿಮಾಮನೇ ಈಸಲನೂ ಅಂವನ ಕೈಯಾಗೆ ಮೂಗುದಾರ ಕೊಟ್ಟಾರೇಳು. ಅಂವಾ ಒಂಥರಾ ಕಿಂಗ್‌ಮೇಕರ್’ ಎಂದಿತು.
‘ಅಂವಾ ಒಬ್ಬನೇ ಕಿಂಗ್‌ಮೇಕರ್ ಅಲ್ಲ, ನಾನೂ ಕಿಂಗ್‌ಮೇಕರ್ ಅದೀನಿ ಅಂತ ನಿತೀಶಂಕಲ್ಲು ಗುರಗುಡತಾನೆ’ ಎಂದೆ.
‘ಹೌದು… ನಮ್ ಮೋದಿಮಾಮನ ಮೂರನೇ ಸಲ ಕಿಂಗ್ ಮಾಡಕೆ ಇಬ್ಬರು ಮೇಕರ್ ಬೇಕಾಗತಾರೆ! ಅಂದಂಗ ನಮ್ ಕಂಗನಾಕ್ಕ ಖರೇ ಅಂದ್ರ ಕ್ವೀನ್ ಆಫ್ ದಿ ಮ್ಯಾಚ್, ಹೌದಿಲ್ಲೋ?’
‘ನನ್ನ ಪ್ರಕಾರ ಕ್ವೀನ್ ಆಫ್ ದಿ ಮ್ಯಾಚ್ ಮಹುವಾ ಮೊಯಿತ್ರಾ. ಸಂಸತ್ತಿನಿಂದ ಹೊರಗೆ ಹಾಕಿದ್ರೂ, ಹೆಂಗೆ ಗೆದ್ದು ಬಂದಾಳೆ ನೋಡು’.
‘ಏನಾದರೇನು, ವಿರೋಧಪಕ್ಷದ ಗ್ಯಾಲರಿವಳಗೇ ಕೂಡಬೇಕಲ್ಲ!’
‘ಮತ್ತ ಕುಮಾರಣ್ಣನ ಮರತೇಬಿಟ್ಟೀಯಲ್ಲ! ಬಂಡೇನೇ ಅಲ್ಲಾಡಿಸಿದ ಅಂವನೂ ಮ್ಯಾನ್ ಆಫ್ ದಿ ಮ್ಯಾಚ್’ ಎಂದೆ.
‘ಖರೇ ಅಂದರೆ ಗೆಲ್ಲುತೀವಂತ ಭಯಂಕರವಾಗಿ ಮೆರೀತಿದ್ದವರನ್ನೆಲ್ಲ ಕೆಳಗೆ ಎತ್ತಾಕಿದ ಮತದಾರಪ್ರಭುಗಳು ಮ್ಯಾನ್ ಆಫ್ ದಿ ಮ್ಯಾಚ್! ನಮ್ ಮೋದಿಮಾಮ ಎಂದಿನಂತೆ ಕಿಂಗ್ ಆಫ್ ದಿ ಆಲ್ ಮ್ಯಾಚಸ್! ಕಿಂಗ್‌ಮೇಕರ್ ತಂಡದವರಿಗೆ ಯಾವ್ಯಾವ ಖಾತೆ ಕೊಡಬಕು ಎನ್ನೋದಷ್ಟೇ ಕಿಂಗ್ ಚಿಂತೆ’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.