ADVERTISEMENT

ಚುರುಮುರಿ: ಪಾಪಿ ಪರದೇಶಿ ಪಕ್ಷ

ಲಿಂಗರಾಜು ಡಿ.ಎಸ್
Published 9 ಮೇ 2022, 23:15 IST
Last Updated 9 ಮೇ 2022, 23:15 IST
   

ವತ್ತಾರೆಗೆ ತುರೇಮಣೆ ಮನೆತಕ್ಕೆ ಹೋದೆ. ಬ್ಯಾನರ್‍ರು, ಪಾಂಪ್ಲೆಟ್ಟು ಜೋಡಿಸಿಗ್ಯಂತಾ ಕುಂತಿದ್ದೋರು ‘ನೋಡ್ಲಾ ಒಂದು ಹೊಸ ಪಕ್ಸ ಅನೌನ್ಸ್ ಮಾಡಿವ್ನಿ!’ ಅಂದರು.

‘ನಿಮ್ಮ ಪಕ್ಸದ ಸದಸ್ಯರು ಯಾರು ಸಾ?’ ಕೇಳಿದೆ.

‘ನೋಡ್ಲಾ ಸಂಪುಟ ವಿಸ್ತರಣೆಯಾದ್ರೆ, ಪದವಿ ಕಳಕಂಡ ಸೀನಿಯರುಗಳು, ಪದವಿ ಸಿಗದ ರೆಬೆಲ್‍ಗಳು, ಪಕ್ಸಾಂತರ ಮಾಡಿ ತಪ್ಪು ಮಾಡಿದೆ ಅಂತ ನೊಂದ್ಕಂಡೋರು, ಆತ್ಮಹತ್ಯೆ ಕೇಸು, ಸೀಡಿ ಕೇಸು, ಅಕ್ರಮದ ಕೇಸಿಗೆ ರಾಜೀನಾಮೆ ಕೊಟ್ಟು ಜಾಬಿಲ್ದೆ ಕುಂತಿರೋ ಬೇರೋಜುಗಾರರು ಬೇಜಾನ್ ಜನವ್ರೆ! ತಿನ್ನು- ತಿನ್ಸು ಅನ್ನೋ ನಮ್ಮ ಪಕ್ಸದ ಅಜೆಂಡಾ ಒಪ್ಪಿ ಇವರೆಲ್ಲಾ ‘ಹಿಂಬಾಲಕರ ಜೊತೆಗೇ ನಿಮ್ಮ ಪಕ್ಸಕ್ಕೆ ಬತ್ತೀವಿ ನಮ್ಮುನ್ನ ಸಿಎಂ ಮಾಡ್ಸಿ. 3,000 ಕೋಟಿ ಬೇಕಾದ್ರೂ ಕೊಟ್ಟೇವು’ ಅಂತ ಜುಲುಮೆ ಮಾಡ್ತಾವ್ರೆ’ ಅಂದ್ರು ತುರೇಮಣೆ.

ADVERTISEMENT

‘ಹಿಂಬಾಲಕರೇನೋ ಸಿಕ್ಕಿದ್ರು. ಇನ್ನು ಧರಣಿ-ಬೆರಣಿ ಮಾಡೋರು ಯಾರು?’ ಅಂತ ಕೇಳಿದೆ.

‘ಲೇಯ್ ದಡ್ಡ ಬಡ್ಡೆತ್ತುದ್ದೇ, ಪಿಎಸ್‍ಐ ಅಕ್ರಮಿಗಳು, ಕೆಪಿಎಸ್‍ಸಿ ಸಂತ್ರಸ್ತರು, ಪ್ರಶ್ನೆಪತ್ರಿಕೆ ಮಾರಿದ ಪ್ರೊಫೆಸರುಗಳು ಮುಂಬಾಲಕರಾಗಿ ಅವ್ರಲ್ಲೋ!’ ಅಂದರು.

‘ನಿಮ್ಮ ಜಂಡಾ ಬಣ್ಣ ಯಾಕೆ ಕರ್‍ರಗದೆ ಸಾ?’ ಅಂತಂದೆ.

‘ನೋಡ್ಲಾ ಕರೀಬಣ್ಣ ಪ್ರತಿಭಟನೆಯ ಸಂಕೇತ! ನಮ್ಮ ಪಕ್ಸದ ಹೆಸರೇ ಪಾಪ್ ಅಂದ್ರೆ ಪಾಪಿ-ಪರದೇಶಿಗಳ ಪಕ್ಷ. ಪಕ್ಷಕ್ಕೆ ಟ್ಯಾಗ್ ಲೈನೂ ಅದೆ ‘ಸೇಡು ಸೇಡು ಸೇಡು’ ಅಂತ!’ ಅಂದ್ರು.

‘ದುಡ್ಡು-ಕಾಸು ಏರ್ಪಾಡೆಂಗೆ?’ ಅಂತ ವಿಚಾರಿಸಿದೆ.

‘ಏಸಿಬಿ ಬಲೆಗೆ ಬಿದ್ದೋರು, ಬಿಡಿಎ-ಬಿಬಿಎಂಪಿ, ಪಾಲಿಕೆ, ಇಲಾಖೆಗಳ ಭುಕ್ತಿಮಾರ್ಗಿಗಳು ಖರ್ಚು ನೋಡಿಕ್ಯತರೆ’ ಅಂತ ಲೆಕ್ಕ ಕೊಟ್ಟರು.

‘ನಸುಗುನ್ನಿ ನನಮಗನೆ, ಯಾವ ಪಕ್ಸದ ರಾಜಕಾರಣಿಗಳೂ ಸತ್ಯಹರಿಚ್ಚಂದ್ರರಲ್ಲ! ಎಲ್ಲಾರೂ ಬಿಸ್ಕತ್ ತಿಂದಿರೋರೆ! ಇವುರ ಜೊತೆಗೋಯ್ತಿರೋ ನಿನ್ನ ಪಕ್ಸದ ಟ್ಯಾಗ್‍ಲೈನು ‘ಉಗೀರಿ ಮಕ್ಕೆ’ ಅಂತ ಬದ್ಲಾಸ್ಕಲಾ!’ ಅಂದ ಯಂಟಪ್ಪಣ್ಣನ ಸಿಟ್ಟಿಗೆ ಬೆದರಿ ತುರೇಮಣೆ ಜಾಗ ಖಾಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.