ADVERTISEMENT

ಚುರುಮುರಿ | ಗಂಗಾ ಕಾವೇರಿ

ಲಿಂಗರಾಜು ಡಿ.ಎಸ್
Published 21 ಜುಲೈ 2025, 23:30 IST
Last Updated 21 ಜುಲೈ 2025, 23:30 IST
   

‘ಯಾರೆ ಅದು ಹೋಯ್ತಿರದು? ಕಾವೇರಿಯೇನೆ? ಕಣ್ಣು ಮಂಜಾಗೋಗ್ಯವೆ ಕವ್ವ. ಸರಿಯಾಗಿ ಕಾಣಕ್ಕುಲ್ಲ. ಎಂಗದೀಯಾ ನನ್ತಾಯಿ?’ ಗಂಗಮ್ಮ ಪ್ರೀತಿಯಿಂದ ಕೇಳಿದಳು.

‘ಹೂ ಕನಕ್ಕಾ. ಕಾವೇರಿನೇಯ. ನೀನೆಂಗದೀಯಕ್ಕಾ?’ ಕಾವೇರಮ್ಮ ಕೇಳಿದಳು.

‘ಅಯ್ಯೋ... ನನ ಸುಖ ಏನೇಳನ ನನ್ತಾಯಿ. ಮೊದಲು ಸೀಯಾಳದಂಗಿದ್ದೆ. ಕಂಡೋರ ಪಾಪ ತೊಳದೂ ತೊಳದೂ ಸವೆದು ಸಂಕವಾಗೋಗಿದ್ದೀನಿ ಕನೆ’.

ADVERTISEMENT

‘ನಮಾಮಿ ಗಂಗೆ ಅಂತ ಕೋಟಿ ಕೋಟಿ ಖರ್ಚು ಮಾಡಿದ್ರಲ್ಲಕ್ಕಾ? ಎಲ್ಲಾ ಕಾಸು ಎಲ್ಲಿಗೋತು?’ ಕಾವೇರಿ ಮಾತಿಗೆ ಗಂಗವ್ವ ಕಣ್ಣಗೆ ನೀರಾಕ್ಕ್ಯಂದಳು.

‘ನೋಡೇ ಕಾವೇರಿ. ತಟದಗೇ ಅರೆಬರೆ ಸುಟ್ಟ ಹೆಣವ ಸಿದಿಗೆ ಸಮೇತ ತಕ್ಕಬಂದು ನನ್ನ ಮಡಿಲಿಗೆ ಹಾಕಿಬುಡ್ತರೆ ಕನೆ. ಇನ್ನು ದಾರೀಗಂಟಾ ನಾನಾಥರದ ಐನಾತಿ ಪ್ಯಾಕ್ಟ್ರಿಗಳದಾವಲ್ಲಾ, ಅವರ ರೋಸನೆಲ್ಲ ತಂದು ನನ್ನ ಮ್ಯಾಕ್ಕೆ ಸುರೀತರೆ.’

‘ಅಯ್ಯೋ ಶಿವನೇ, ನಂದೂ ಅದೇ ಕತೆ ಕನಕ್ಕಾ. ಕಾವೇರಿಗೆ ಪ್ರಾಣ ಕೊಟ್ಟೇವು ನೀರು ಬುಡಕುಲ್ಲ ಅಂತ ಎರಡೂ ಕಡೆ ಜನ ಕಿತ್ತಾಡತರೆ. ನನ್ನ ನೋಡಿಕ್ಯಳಕೆ ಅಂತ್ಲೆ ಪ್ರಾಧಿಕಾರ ಬ್ಯಾರೆ ಮಾಡ್ಯವುರೆ. ರಾಜಕೀಯದವು ಬಾಗಿನ ಕೊಡ್ತೀವಿ ಅಂತ ಕಸ ಎಸೆದಂಗೆ ಎಸೆದು ಪಟ ತೆಗೆಸಿಕ್ಯಂದು ಹೊಂಟೋಯ್ತರೆ ಕನಕ್ಕಾ’ ಕಾವೇರಮ್ಮ ಬಿಕ್ಕಿದಳು.

‘ರಾಜಕೀಯದವು ಸುಮ್ಮನೆ ಶಂಖ ಊದ್ತವೆ ಕನೇ. ನಾವು ದಿನಾ ಸತ್ತು ಸತ್ತು ಹುಟ್ಟೋದು ಅವುಕ್ಕೇನು ಗೊತ್ತದೆ ಕಾವೇರಿ? ಇನ್ನು ನಿನಗೂ ಮಂಗಳಾರತಿ ಮಾಡಾರಂತೆ?’

‘ಅದು ಬ್ಯಾರೆ ಕೇಡು. ನನ್ನ ತಂಗೇದೀರು ಅರ್ಕಾವತಿ, ವೃಷಭಾವತಿ ರಾಜಕಾಲುವೆಗಳಾಗೋದ್ರು. ಸುವರ್ಣಾವತಿ, ಭವಾನಿ, ಅಮರಾವತಿ ಒಣಗೋದ್ರು. ರಾಮತೀರ್ಥ, ಲಕ್ಷ್ಮಣತೀರ್ಥ ಕಾಣದಂಗೆ ಹೊಂಟೋದ್ರು. ಈಗ ನನ್ನ ಮೇಕೆದಾಟು ಮಾಡ್ತಾರಂತೆ’ ಕಾವೇರಮ್ಮನಿಗೆ ಕ್ವಾಪ ಬಂದುತ್ತು.

‘ಬುಡೇ ರಾಜಕೀಯದೋರ ಕತೆ ಬೆಳಗಾನ ಹೇಳಿದ್ರೂ ಮುಗಿಯಕುಲ್ಲ. ಹೌದಪ್ಪನ ಚಾವಡೀಲಿ ಇಲ್ಲಪ್ಪನ್ನ ಯಾರು ಕೇಳ್ತರೆ ಮಗಾ’ ಗಂಗಮ್ಮ ಬುದ್ಧಿ ಮಾತು ಹೇಳಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.