ADVERTISEMENT

ಚುರುಮುರಿ: ಬೀಳೋ ಫೋಬಿಯಾ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 19:31 IST
Last Updated 13 ಜನವರಿ 2023, 19:31 IST
   

‘ಇದೇನು ಅಜಾಗರೂಕತೆ? ಪ್ರಯಾಣಿಕರನ್ನು ಏರಿಸಿಕೊಳ್ಳದೆ ಗೋ ಫಸ್ಟ್ ಗೋ ಫಾಸ್ಟ್ ಆಗಿ ಹಾರಿದೆ? ಮಂಜಿಗೆ ಸುಮಾರು ರೈಲುಗಳೂ ರದ್ದಾದವಂತೆ! ಹೋಗೋ ಮಾರ್ಗ ಸರಿಯಾಗಿ ಕಾಣಿಸದಿದ್ರೆ ಅನಾಹುತ ತಾನೇ?’ ಅತ್ತೆ ದಿನಪತ್ರಿಕೆಯಲ್ಲಿ ಕಣ್ಣಾಡಿಸಿದರು.

‘ಬೀದರ್‌ನಲ್ಲಿ ತಾಪಮಾನ ಬಿದ್ದುಹೋಗಿದೆ, ಇಲ್ಲೂ... ಬೆಳಗ್ಗೆ ಏಳಾದರೂ ಸೂರ್ಯ ಹೊರಗೆ ಬರೋಕ್ಕಾಗದಷ್ಟು ಮಂಜು. ಇನ್ನೇನು ಕಂಠಿ ಬಂದರೆ ಪಾದರಕ್ಷೆ ಏರಿಸೋದು’ ಎನ್ನುತ್ತಾ ಸ್ವೆಟರ್ ಮೇಲೊಂದು ಶಾಲ್ ಎಳೆದು ತಲೆಗೆ ಮಫ್ಲರ್ ಸುತ್ತಿ ವಾಕ್ ಹೊರಡಲು ಅಣಿಯಾದೆ.

ಕಣ್ಣು ಮಾತ್ರ ಕಾಣಿಸುವಷ್ಟು ಸಪಾದಮಸ್ತಕ, ಕಂಠಿ ಉಣ್ಣೆ ಸುತ್ತಿಕೊಂಡಿದ್ದ. ‘ಮೈಯೆಲ್ಲಾ ಕಣ್ಣಾಗಿದ್ದರೂ ಸಾಲದು; ಅಕ್ಕಪಕ್ಕ, ಮೇಲೆ ಕೆಳಗೆ ಗಮನ ಇರಲಿ’ ಅತ್ತೆ ಎಚ್ಚರಿಸಿದರು. ಅರ್ಥವಾಗದೆ ಕಂಠಿ ನನ್ನ ಮುಖ ನೋಡಿದ.

ADVERTISEMENT

‘ರಸ್ತೇಲಿ ಗುಂಡಿಗಳ ಕಾಟ, ಪಾದಚಾರಿ ರಸ್ತೆ ಗಳಲ್ಲಿ ವಯಸ್ಸಾಗಿರೋ ಮರಗಳು, ಕಂಬಗಳು ಬೀಳಾಟ, ನಿಂತಲ್ಲೇ ಚಾವಣಿ ಕುಸಿಯೋದು, ಇಷ್ಟೇ ಸಾಲದು ಅನ್ನೋ ಹಾಗೆ ತಲೆಮೇಲಿಂದ ಯಾವಾಗ ಏನು ಬೀಳುತ್ತೋ ಅನ್ನೋ ಭಯ! ಅಂತೂ ಬೀಳೋ ಭಯದಲ್ಲೇ ಓಡಾಡೋ ಸ್ಥಿತಿ ನಿರ್ಮಾಣವಾಗಿದೆ’ ನನ್ನವಳು ವಿವರಿಸಿದಳು.

‘ಬೀಳೋ ಫೋಬಿಯಾ ಅನ್ನು’ ಎಂದೆ.

‘ಕಾಮಗಾರಿ ಎಷ್ಟು ಸಸಾರ ಆಗ್ಬಿಟ್ಟಿದೆ, ದೊಡ್ಡವರು ಬಂದ್ರೆ ಬಣ್ಣ ಕಂಡ ರಸ್ತೆ, ಅವರು ಹೋಗುತ್ತಲೇ ಬಣ್ಣ ಕರಗಿ ಸೊರಗಿರುತ್ತೆ’ ಅತ್ತೆ ಮುಂದುವರಿಸಿದರು. ‘ನಾಟು ನಾಟು ಹಾಡು ಕೊನೆಗೂ ಗೆದ್ದಿದೆ. ನಮ್ಮ ಕಾಂತಾರಕ್ಕೂ ಪ್ರಶಸ್ತಿ ಸಿಕ್ಲಿ ಅಂತ ನಮ್ ಫ್ರೆಂಡ್ಸ್ ಪ್ರೇ ಮಾಡಿಕೊಳ್ತಿದ್ದೀವಿ’ ಪುಟ್ಟಿ ಕುಣಿಯುತ್ತ ಬಂದಳು.

‘ಹೌದು, ನಮ್ಮ ಚಿತ್ರಗಳೂ ಅಂತರ ರಾಷ್ಟ್ರೀಯ ಮಟ್ಟಕ್ಕೆ ಬೆಳೀತಿವೆ’ ನಾನೂ ದನಿಗೂಡಿಸಿದೆ.

‘ಹಬ್ಬಕ್ಕೆ ಒಟ್ಟಿಗೆ ಎಳ್ಳು, ಸಕ್ಕರೆಅಚ್ಚು ಮಾಡೋದು ಅಂತ ಶ್ರೀಮತಿ ಹೇಳಿದ್ಲು. ಊಟಕ್ಕೆ ಕ್ಯಾಟರರ್‌ಗೆ ಹೇಳಿದ್ದೀನಿ’ ಕಂಠಿ ಬಾಯ್ಬಿಟ್ಟ.

‘ಹೌದು ಜ್ಞಾಪಿಸಿದ್ದು ಒಳ್ಳೇದಾಯ್ತು, ಮನೇಲಿ ನೀವು ಕುಕ್ಕರ್ ಕೂಗಿಸಿಕೊಂಡ್ರೆ ಆಯಿತು. ಕಾಫಿ ಕುಡಿದು ವಾಕ್‌ಗೆ ಹೊರಡಿ’ ಎನ್ನುತ್ತ ನನ್ನವಳು ಅಕ್ಕರೆಯಿಂದ ಮಾತಲ್ಲೇ ಬೀಳಿಸಿ, ಅಡುಗೆಮನೆಯತ್ತ ಹೊರಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.