ADVERTISEMENT

ಚುರುಮುರಿ: ಕೇಜ್ರಿ ಕಿಯಾರೇ...

ತುರುವೇಕೆರೆ ಪ್ರಸಾದ್
Published 16 ಮಾರ್ಚ್ 2022, 22:42 IST
Last Updated 16 ಮಾರ್ಚ್ 2022, 22:42 IST
.
.   

‘ಎಲ್ಲೆಲ್ಲೂ ಹುಲ್ಲಿನ ಮಹಿಮೆಯೇ! ತೃಣಮಪಿ ನ ಚಲತಿ ನನ್ನ ವಿನಾ’ ಅಂತ ಟಿಎಂಸಿ ಮೇಡಂ ಅಂದ್ಕೊಂಡಿದ್ರು. ಅದು ಸುಳ್ಳಾಗೋಯ್ತು. ಎಎಪಿ ಸಾಧನೆ ನೋಡ್ಲಿಲ್ವಾ?’ ಎಂದ ಪರ್ಮೇಶಿ.

‘ ಅದ್ಸರಿ, ಎಎಪಿಗೂ ಈ ಹುಲ್ಲಿಗೂ ಏನು ಸಂಬಂಧ?’ ಕೇಳಿದ ಕೊಟ್ರ.

‘ದಡ್ಡ ನೀನು, ಎಎಪಿಯ (ಆಪ್‌) ಚಿಹ್ನೆ ಏನು?- ಪೊರಕೆ! ಅದೂ ಒಂಥರಾ ಹುಲ್ಲಿನ ಕಟ್ಟೇ ತಾನೆ? ಈ ಆಪ್, ಸಿಂಗಗಳನ್ನ ಇಂಗು ತಿಂದ ಏಪ್ ಮಾಡ್ಬಿಡ್ತು’.

ADVERTISEMENT

‘ಒಟ್ನಲ್ಲಿ ಕ್ರೇಜಿ ಕಿಯರೇ ಹೋಗಿ ಕೇಜ್ರಿ ಕಿಯಾರೇ... ಆಗಿದೆ’.

‘ಚೀನಾದ ನೂರಾರು ಆ್ಯಪ್ ಬ್ಯಾನ್ ಮಾಡುದ್ರು. ನಮ್ ಇಂಡಿಯಾದ ಒಂದು ‘ಆಪ್’ನ ಡೌನ್ ಮಾಡಕ್ಕಾಗ್ಲಿಲ್ಲ’.

‘ಆದ್ರೂ ಯುಪಿ ನೋಡಿ ‘ಹುಲ್ಲಾಗು ಬೆಟ್ಟದಡಿ, ಮನೆಗೆ ತಾವರೆಯಾಗು’ ಅಂತ ಹೇಳ್ಕೊಬಹುದು’.

‘ಮುಂದಕ್ಕೆ ಸೈ- ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ಅಂತ ಮುಂದುವರಿಸ್ಬಹುದು’.

‘ಹುಲ್ಲಿನ ಮಧ್ಯೆ ಸೈಕಲ್ ಎಲ್ಲಿಂದ ಬಂತು?’

‘ಸೈಕಲ್‍ನೋರೂ ಕೃಷ್ಣ ಪರಮಾತ್ಮನ ಕಾಲದಲ್ಲಿ ಹುಲ್ಲು ಮೇಯಿಸಿದೋರೇ! ಪಾಪ! ಹೋದ್ಸಾರಿನೂ ರಾಹುಲ್ ಹೊತ್ತು ಪಂಕ್ಚರಾಗೋಯ್ತು’.

‘ಮೇಯಿಸೋದು ಬಿಟ್ಟು ತಾವೇ ಹುಲ್ಲು ಮೇದೋರು ಜೈಲಲ್ಲಿ ಇಲ್ದಿದ್ರೆ ಸೈಕಲ್‍ಗೆ ಬ್ಲೋ ಹೊಡೀತಿದ್ರೇನೋ?’

‘ಆನೆ ಮೇದಿದ್ರೆ ಇಷ್ಟೆಲ್ಲಾ ಸಮಸ್ಯೆ ಇರ್ಲಿಲ್ಲ, ಅದು ಯಾಕೋ ಜೊಂಡು ತಿಂದ್ಕೊಂಡು ಹುಲ್ ಮೇಯ್ಲಿಲ್ಲ, ಕಾಂಗ್ರೆಸ್ ಕಳೆ ಜಾಸ್ತಿಯಾಗಿ ಕೊಳೆತು ಕಮಲ ಕೆಸರಲ್ಲೇ ಅರಳಿಬಿಡ್ತು’.

‘ಆದ್ರೂ ಕಾಂಗ್ರೆಸ್‍ಗೂ ಹುಲ್ಲಿಗೂ ಎಲ್ಲಿಗೆಲ್ಲಿಯ ಸಂಬಂಧ?’

‘ರಾ-ಹುಲ್‍ನಲ್ಲೇ ಹುಲ್ಲು ಇದ್ಯಲ್ಲ. ಅದು ರಾ ಅಂದ್ರೆ ಒಣಗಿ ಹೋಯ್ತು ಅಷ್ಟೇ’.

‘ಒಟ್ನಲ್ಲಿ ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ’.

‘ಹೂವ ತರುವವರ ಮನೆಗೆ ಹುಲ್ಲ ತರುವ’ ಅನ್ನೋದು ಅರ್ಥ ಆಗ್ದಿದ್ರೆ ಮಿಕ್ಕೋರು ಗೋವಿಂದನೇ ಎಂದು ಪರ್ಮೇಶಿ ಪಂಚೆ ಕೊಡವಿ ಮೇಲೆದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.