ADVERTISEMENT

ಪ್ರಶಸ್ತಿ ಸಂಭ್ರಮ

ಸುಧೀಂದ್ರ
Published 27 ಜನವರಿ 2021, 19:30 IST
Last Updated 27 ಜನವರಿ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಈ ಸಲ ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿಗಳು ಕನ್ನಡಿಗರಿಗೆ ಬಂದಿದೇರಿ, ಮಿನಿಸ್ಟ್ರುಗಳ ರಿಯಾಕ್ಷನ್ ತೊಗೊಂಡ್ ಬನ್ನಿ’ ಅಂತ ರಿಪೋರ್ಟರ್ ರಂಗಣ್ಣನಿಗೆ ಎಡಿಟರ್ ಅಸೈನ್‍ಮೆಂಟ್ ಕೊಟ್ರು.

ಡೈರಿ ತೆಗೆದ ರಂಗಣ್ಣ ಮೊನ್ನೆ ತಾನೇ ಖಾತೆ ವಹಿಸಿಕೊಂಡ ಕನ್ನಡ ಸಂಸ್ಕೃತಿ ಮಿನಿಸ್ಟ್ರ ನಂಬರಿಗೆ ಫೋನ್ ಮಾಡಿದ. ‘ಸರ್, ಈ ಬಾರಿಯ ಪದ್ಮ ಪ್ರಶಸ್ತಿ...’ ಅನ್ನುವಷ್ಟರಲ್ಲೇ ಬಾಯಿ ಹಾಕಿದ ಮಿನಿಸ್ಟ್ರು ‘ಪೇಪರ್‌ನಲ್ಲಿ ಓದಿದ್ನಪ್ಪಾ. ಸಣ್ಣ ನೀರಾವರಿಯವರಿಗೆ ಯಾವ್ದೂ ಪ್ರಶಸ್ತಿ ಬಂದಿಲ್ಲ. ಮುಂದಿನ ರಿಪಬ್ಲಿಕ್ ಡೇ ಟೈಮಲ್ಲೂ ಹಿಂಗೇ ಆದ್ರೆ ಪೆರೇಡ್ ಮುಗಿದ ಕೂಡ್ಲೇ ನನ್ನ ರಾಜೀನಾಮೆ ಬಿಸಾಕ್ತೀನಿ’ ಅಂದ್ರು. ಇನ್ನು ಹೆಚ್ಗೆ ಮಾತಾಡಿದ್ರೆ ಮಾತಲ್ಲೇ ಅವರು ತನ್ನನ್ನು ತದುಕಬಹುದು ಅಂತ ಹೆದರಿದ ರಂಗಣ್ಣ ಫೋನಿಟ್ಟ.

ಈ ಸಾಹೇಬ್ರ ಖಾತೆ ಮೆಡಿಕಲ್ಲೂ ಅಲ್ಲ, ಕನ್ನಡನೂ ಅಲ್ಲ ಅಂದ್ಕೊಂಡು ರಂಗಣ್ಣ ಡೈರಿಯಲ್ಲಿದ್ದ ಮತ್ತೊಂದು ನಂಬರಿಗೆ ಡಯಲ್ ಮಾಡಿದ. ಅತ್ಕಡೆಯಿಂದ ಫೋನೆತ್ತಿದೋರು ‘ನಾನು ಡಿಪಾರ್ಟ್‌ಮೆಂಟ್‌ ಕಾಲಿಟ್ಟ ಟೈಮ್ ಒಳ್ಳೇದೂ ಅನ್ನಿಸ್ತಿದೆ. ಈಗ್ತಾನೇ ಖಾತೆ ವಹಿಸ್ಕೊಂಡೆ, ಪದ್ಮ ಪ್ರಶಸ್ತಿ ಕನ್ನಡವನ್ನು ಅಟ್ಟಿಸ್ಕೊಂಡು ಬಂತು. ಮುಂದಿನ್ಸಲ ನಮ್ಮ ಫಾರೆಸ್ಟ್‌ನೋರಿಗೂ ಒಂದು ಗ್ಯಾರಂಟಿ ಬರತ್ತೆ’ ಅಂದ್ರು. ಈ ಮಿನಿಸ್ಟ್ರುಗಳೆಲ್ಲಾ ಇನ್ನೊಂದು ವರ್ಷ ಅಧಿಕಾರದಲ್ಲಿದ್ರೆ ಕರ್ನಾಟಕಕ್ಕೆ ಮೂವತ್ತು ಪದ್ಮ ಪ್ರಶಸ್ತಿಗಳು ಬರಬಹುದು ಅನ್ನಿಸಿತು ರಂಗಣ್ಣನಿಗೆ.

ADVERTISEMENT

ನಮ್ಮ ಡಾಕ್ಟ್ರು-ಮಿನಿಸ್ಟ್ರಿಗೆ ಫೋನೇ ಮಾಡ್ಲಿಲ್ವಲ್ಲ ಅಂತ ರಂಗಣ್ಣ ಫೋನ್ ಹಚ್ಚಿದ. ‘ನಾನು ಅವತ್ತಿಂದ್ಲೂ ಹೇಳ್ತಿದ್ದೆ, ಹೆಲ್ತು, ಮೆಡಿಕಲ್ ಎಜುಕೇಶನ್ ಒಟ್ಗೇ ಇರಬೇಕೂಂತ. ಈಗ ಪದ್ಮವಿಭೂಷಣ ಬಂದಿರೋರು ಡಾಕ್ಟ್ರು, ಜೊತೆಗೆ ಮೆಡಿಕಲ್ ಕಾಲೇಜಲ್ಲಿ ಟೀಚೂ ಮಾಡ್ತಿದ್ರು. ನಂಗಂತೂ ಡಬಲ್ ಖುಷಿಯಾಗಿದೆ’ ಅಂದ್ರು. ಪದ್ಮ ಪ್ರಶಸ್ತಿ ಈ ಮಿನಿಸ್ಟ್ರಿಗೇ ಬಂತಾ ಅನ್ನೋ ಡೌಟಿಂದ ರಂಗಣ್ಣ ಫೋನ್ ಇಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.