ADVERTISEMENT

ಚುರುಮುರಿ: ಎಲ್ಲರೂ ಗೆದ್ದವರೇ

ಆನಂದ ಉಳಯ
Published 25 ಮೇ 2022, 19:14 IST
Last Updated 25 ಮೇ 2022, 19:14 IST
   

‘ವಿನ್ ವಿನ್ ಸಿಚುಯೇಷನ್ ಅಂದ್ರೆ ಏನು?’ ಹೆಂಡತಿ ಕೇಳಿದಳು.

‘ಹೆಂಡತಿಯರು ಕೇಳುವುದೇ? ಅವರಿಗೆ ಯಾವಾಗಲೂ ವಿನ್ ವಿನ್ ಸಿಚುಯೇಷನ್ನೇ ಗಂಡಂದಿರ ವಿರುದ್ಧ’ ಎಂದೆ.

‘ಸೀರಿಯಸ್ಸಾಗಿ ಹೇಳಿ ಅರ್ಥ’.

ADVERTISEMENT

‘ನೋಡಮ್ಮಾ, ವಿನ್ ವಿನ್ ಎಂದರೆ ಎರಡೂ ಕಡೆಯವರು ಗೆಲ್ಲುವುದು’ ಎಂದೆ.

‘ಅದ್ಹೇಗೆ ಸಾಧ್ಯ? ಒಬ್ಬರು ಸೋತಾಗಲೇ ಅಲ್ವೆ ಇನ್ನೊಬ್ಬರು ಗೆಲ್ಲುವುದು? ಅಥವಾ ಒಬ್ಬರು ಗೆದ್ದಾಗ ಇನ್ನೊಬ್ಬರು ಸೋಲಲೇಬೇಕು’ ಎಂದು ಪಾಟೀಸವಾಲು ಮಾಡಿದಳು.

‘ನೋಡು ಒಂದು ಉದಾಹರಣೆ ಕೊಡ್ತೀನಿ. ನಿನ್ನೆ ಕಾಂಗ್ರೆಸ್‌ ‘ಐ’ ಕಮಾಂಡ್‌ನವರುಮೇಲ್ಮನೆಗೆ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದರು’.

‘ಹ್ಞಾಂ! ಅಚ್ಚರಿ ಅಭ್ಯರ್ಥಿಗಳಂತೆ...’

‘ಅದೇ ವಿನ್ ವಿನ್ ಸಿಚುಯೇಷನ್’ ಎಂದೆ.

‘ಅಲ್ರೀ ಇನ್ನೂ ಚುನಾವಣೇನೆ ಆಗಿಲ್ಲ. ಆಗಲೇ ವಿನ್ ವಿನ್ ಅಂತಿದೀರಲ್ಲ?’

‘ವಿನ್ ವಿನ್ ಈ ಅಭ್ಯರ್ಥಿಗಳಿಗಲ್ಲ. ಕಾಂಗ್ರೆಸ್ಸಿನ ಇಬ್ಬರು ಫ್ಯೂಚರ್ ಮುಖ್ಯಮಂತ್ರಿ ಅಭ್ಯರ್ಥಿಗಳಿಗೆ. ಅದೇ ಮೇಲ್ಮನೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಇಬ್ಬರು ಫ್ಯೂಚರ್ ಮು.ಮ.ಗಳಿಗೂ ವಿನ್ ವಿನ್ ಸಿಚುಯೇಷನ್’ ಎಂದೆ. ಅವಳ ಮುಖ ಟಿಕೆಟ್ ಸಿಗದ ಅಭ್ಯರ್ಥಿಯ ಮುಖದಂತಾಯಿತು. ‘ಸರಿಯಾಗಿ ಹೇಳಿಯಪ್ಪಾ...’ ಎಂದಳು.

‘ಡಿಕೆಶಿ ರೆಕಮಂಡ್ ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ಸಿಗದೇ ಇದ್ದದ್ದರಿಂದ ಸಿದ್ದರಾಮಯ್ಯನವರಿಗೆ ವಿನ್ ವಿನ್... ಸಿದ್ದರಾಮಯ್ಯನವರು ರೆಕಮಂಡ್ ಮಾಡಿದ ಹೆಸರುಗಳನ್ನು ಅಲಕ್ಷಿಸಿದ್ದರಿಂದ ಅದು ಡಿಕೆಶಿಗೆ ವಿನ್ ವಿನ್ ಸಿಚುಯೇಷನ್. ಸೊ, ಮೇಲ್ಮನೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಎರಡೂ ಫ್ಯೂಚರ್ ಮು.ಮ.ಗಳಿಗೂ ವಿನ್ ವಿನ್ ಸಿಚುಯೇಷನ್. ಹೌದೋ ಅಲ್ವೊ?’

‘ಮತ್ತೆ ಬೇರೆ ಪಕ್ಷದಲ್ಲಿ ಹೇಗೆ?’

‘ಜೆಡಿಎಸ್‍ನಲ್ಲಿ ಫ್ಯಾಮಿಲೀಗೆ ಯಾವಾಗಲೂ ವಿನ್ ವಿನ್. ಬಿಜೆಪಿಯಲ್ಲಿ ದೆಹಲಿ ನಾಯಕರಿಗೆ ವಿನ್ನೋ ವಿನ್ನು...’

‘ದೇವರೇ ಕಾಪಾಡಬೇಕು ಮತದಾರರನ್ನ’ ಎಂದು ಹೇಳಿ ಎದ್ದು ಹೋದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.