ADVERTISEMENT

ಚುರುಮುರಿ: ಎಡ ಮತ್ತು ಬಲ

ಬಿ.ಎನ್.ಮಲ್ಲೇಶ್
Published 26 ಮೇ 2022, 19:04 IST
Last Updated 26 ಮೇ 2022, 19:04 IST
.
.   

‘ಲೇ ತೆಪರ, ನೀನು ಎಡನೋ ಬಲನೋ’ ಗುಡ್ಡೆ ಕೇಳಿದ.

‘ಅಂದ್ರೆ? ಅರ್ಥ ಆಗ್ಲಿಲ್ಲಪ್ಪ...’ ತೆಪರೇಸಿ ಮೂತಿ ಸೊಟ್ಟ ಮಾಡಿದ.

‘ಅಂದ್ರೇ ನೀನು ಎಡಪಂಥೀಯನೋ ಬಲಪಂಥೀಯನೋ ಅಂತ’.

ADVERTISEMENT

‘ಲೇ ಗುಡ್ಡೆ, ಅವನು ಎಡನೂ ಅಲ್ಲ, ಬಲನೂ ಅಲ್ಲ... ಅವನು ‘ನಡು’ ಪಂಥೀಯ ಕಣಲೆ’ ದುಬ್ಬೀರ ನಕ್ಕ.

‘ಅಂದ್ರೆ ಎಡಬಿಡಂಗಿ ಪಂಥ ಅನ್ನು... ಅಂದರಿಕಿ ಮಂಚಿವಾಳ್ಳು...’

‘ಗುಡ್ಡೆ ಮಾತಿಗೆ ಸಿಟ್ಟಾದ ತೆಪರೇಸಿ ‘ಲೇಯ್, ನಂದು ಯಾವ ಪಂಥನೂ ಇಲ್ಲ, ನಂದು ಹೊಟ್ಟೆ ಪಂಥ. ಈಗ್ಯಾಕೆ ಅದೆಲ್ಲ?’ ಎಂದ.

‘ಯಾಕೆ ಅಂದ್ರೆ ಈಗ ಎಸ್ಸೆಲ್ಸಿ ಕನ್ನಡ ಪುಸ್ತಕದಲ್ಲಿ ಕವಿಗಳು, ಲೇಖಕರನ್ನ ಅವರು ಎಡ, ಇವರು ಬಲ ಅಂತ ಕಿತ್ತಾಟ ಶುರು ಆಗೇತಲ್ಲ, ಅದ್ಕೆ ಕೇಳಿದೆ’.

‘ಅಲ್ಲ, ಈಗ ಬದುಕಿರೋರ್‍ನ ಬೇಕಾದ್ರೆ ನೀವು ಯಾವ ಪಂಥ ಅಂತ ಡೈರೆಕ್ಟಾಗಿ ಕೇಳಬೋದಪ್ಪ, ಸತ್ತು ಸ್ವರ್ಗ ಸೇರಿರೋ ಕವಿಗಳನ್ನ ಹೆಂಗೆ ಕೇಳೋದು?’ ಕೊಟ್ರೇಶಿ ಕೊಕ್ಕೆ.

‘ಹ್ಞಾಂ... ಈಗ ಹೇಳಲೆ ಗುಡ್ಡೆ, ಸ್ವರ್ಗ ಎಡನೋ ಬಲನೋ?’ ತೆಪರೇಸಿ ಸವಾಲು ಹಾಕಿದ.

ಗುಡ್ಡೆ ತಡವರಿಸಿದ ‘ಸ್ವರ್ಗನಾ? ಅದ್ರಾಗೇನು ಎಡ ಬಲ? ದೇವ್ರಾಣೆ ಗೊತ್ತಿಲ್ಲಪ್ಪ’.

‘ಹ್ಞಾಂ... ದೇವ್ರಾಣೆ ಅಂದ್ಯಲ್ಲ, ಈಗೇಳು ದೇವರು ಎಡನೋ ಬಲನೋ?’ ತೆಪರೇಸಿ ಚಪ್ಪಾಳೆ ತಟ್ಟಿ ನಕ್ಕ.

ದುಬ್ಬೀರನಿಗೆ ಸಿಟ್ಟು ಬಂತು. ‘ಲೇ ತೆಪರ, ಅತಿಯಾತು ನಿಂದು. ಏನ್ ಗಾಂಚಾಲಿ ಮಾಡ್ತೀಯ? ನಿನ್ನೆಂಡ್ತಿಗೆ ಫೋನ್ ಮಾಡ್ಲಾ?’ ಎಂದ. ತೆಪರೇಸಿ ತೆಪ್ಪಗಾದ.

‘ನೋಡ್ರಲೆ ಯಾರು ಏನರೆ ಇರ್‍ಲಿ,ನಂಗಂತು ಈ ತೆಪರ ಎಡ ಅಂತ ಗೊತ್ತಾತು’ ಎಂದ ಗುಡ್ಡೆ.

‘ಎಡನಾ? ಅದೆಂಗೆ?’

‘ವೆರಿ ಸಿಂಪಲ್, ತೆಪರನ ಹೆಂಡ್ತಿ
‘ಬಲ’ ಆದ್ಮೇಲೆ ಇವ್ನು ಎಡ ಆಗ್ಲೇಬೇಕಲ್ಲ?’
ಗುಡ್ಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.