ADVERTISEMENT

ಚುರುಮುರಿ: ಉಪವಾಸದ ಮಹತ್ವ

ಸುಮಂಗಲಾ
Published 18 ಅಕ್ಟೋಬರ್ 2020, 20:00 IST
Last Updated 18 ಅಕ್ಟೋಬರ್ 2020, 20:00 IST
Churumur 19-10-2020
Churumur 19-10-2020   

ಕುತ್ತಿಗೆಗೆ ಒಳ್ಳೆ ನೆಕ್ಲೇಸಿನ ಪದಕದ ರೀತಿ ಮಾಸ್ಕ್ ಇಳಿಬಿಟ್ಟುಕೊಂಡಿದ್ದ ಗೆಳತಿಯ ಮಗಳು ‘ಏನ್ ಓದಾಕಹತ್ತೀರಿ’ ಎನ್ನುತ್ತ ಒಳಬಂದಳು.

‘ಮೊದ್ಲು ಮಾಸ್ಕು ಮೂಗಿಗೇರಿಸ್ಕೋ’ ಎಂದು ನಾನು ಮಾರು ದೂರ ಸರಿಯುತ್ತ ಪತ್ರಿಕೆಯಲ್ಲಿ ಬಂದಿದ್ದ ಸುದ್ದಿ ತೋರಿಸಿದೆ. ‘ಜಾಗತಿಕ ಹಸಿವು ಸೂಚ್ಯಂಕದಾಗೆ ನಾವು ಈ ಸಲನೂ ಅಕ್ಕಪಕ್ಕದ ದೇಶಗಳವ್ರಿಗಿಂತ ಭಾಳ ಕೆಳಗದೀವಂತಲ್ಲ... ಉಳಿದವ್ರು ಬಿಡು, ಪಾಕಿಸ್ತಾನ, ಬಾಂಗ್ಲಾದೇಶ ನಮಗಿಂತ ಜರಾ ಮ್ಯಾಲೆ ಅದಾವು’ ಎನ್ನುವಷ್ಟರಲ್ಲಿಯೇ ಅವಳು ನಡುವೆ ಬಾಯಿ ಹಾಕಿದಳು. ‘ಹೋದ ವರ್ಷ 102ರಾಗೆ ಇದ್ವಿ, ಈ ಸಲ ಒಂದೇ ಸಲಕ್ಕೆ 94ಕ್ಕೆ ಜಿಗಿದೀವಿ ಅಂದ್ರ ಮಸ್ತ ಸಾಧನೆ ಮಾಡೀವಿ ಅಂದಂಗ ಆತಿಲ್ರೀ. ಹಸಿವಿನ ಸೂಚ್ಯಂಕ ನೋಡೂ ನಿಮ್ಮ ದೃಷ್ಟಿ ಬದಲಾಗಬೇಕ್ರಿ’ ಎಂದಳು.

ನನ್ನ ಹ್ಞೂಂಗುಡುವಿಕೆಗೂ ಕಾಯದೇ ಅವಳು ಓತಪ್ರೋತ ಮುಂದುವರಿಸಿದಳು. ‘ಅಂದ್ರ, ನಮ್ಮ ಜನಕ್ಕೆ ಉಪವಾಸ ಮಾಡೋದ್ರ ಮಹತ್ವ ಗೊತ್ತೈತಿ ಅಂತ. ಉಪವಾಸ ಇದ್ರ ದೇಹದೊಳಗಿನ ವಿಷಕಾರಿ ಅಂಶಗಳು, ಟಾಕ್ಸಿನ್‌ ಗಳೆಲ್ಲ ಹೊರಗ ಹೋಗ್ತಾವ್ರಿ. ಅದಕ್ಕ ಮಂದಿ ಉಪವಾಸ ಇರ್ತಾರ, ಅವ್ರು ಅದನ್ನೇ ಹಸಿವಿನ ಸೂಚ್ಯಂಕ ಅಂತಾರ’ ಎಂದಳು.

ADVERTISEMENT

‘ಹೊಟ್ಟಿಗಿಲ್ದೆ ಖಾಲಿ ಹೊಟ್ಟಿಲೆ ಇರೂದಕ್ಕೂ ಹೊಟ್ಟಿ ತುಂಬಿ ಉಪವಾಸ ಮಾಡೂದಕ್ಕೂ ವ್ಯತ್ಯಾಸಿಲ್ಲೇನು?’

‘ಬರೀ ಅಳೂ ಸುದ್ದೀನೇ ಆರಿಸ್ಕಂಡು ಓದಬ್ಯಾಡ್ರಿ... ವಿಶ್ವದ ಫೋರ್ಬ್ಸ್ ಶ್ರೀಮಂತರ ಪಟ್ಟಿನಾಗೆ ನಮ್ಮ ಭರತಮಾತೆಯ ಸಿರಿವಂತ ಸುಪುತ್ರ ಅಂಬಾನಿ ಹದಿಮೂರನೇ ಸ್ಥಾನದಾಗೆ ಅದಾರ... ಆರ್ಥಿಕತೆ ನೆಲಕಚ್ಚೈತಿ ಅಂತ ಸುಳ್ಳೆ ಅಳ್ತೀರಿ ನೀವು. ಲಾಕ್‌ಡೌನ್ ಆದ್ ಮ್ಯಾಲೇನೆ ಅವ್ರ ಆಸ್ತಿ ಅದೆಷ್ಟೋ ಕೋಟಿ ಡಾಲರ್ ಹೆಚ್ಚಾಗೈತಂತ... ಇನ್ನ ಅವ್ರ ಹೆಚ್ಚಾದ
ಆಸ್ತಿನೆಲ್ಲಾ ನಾ ಡಾಲರ್‌ನಿಂದ ರೂಪಾಯಿವಳಗ ಹೇಳಿದ್ರೆ ನೀವು ಇಲ್ಲೇ ತಲಿತಿರುಗಿ ಬೀಳ್ತೀರಿ. ಈ ಕೊರೊನಾ ವಕ್ಕರಿಸದಿದ್ದರ ಇನ್ನೂ ಮ್ಯಾಗೆ ಹೋಗತಿದ್ದರು... ಎಂಥಾ ಸಾಧನೆ ಮಾಡ್ಯಾರಂತ ಖುಷಿಪಡ್ರಿ’ ಎನ್ನುತ್ತ ಹೊರಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.